ನವದೆಹಲಿ(ಮೇ.30): ‘ಚೀನಾ-ಭಾರತ ಗಡಿ ವಿವಾದದ ಮಧ್ಯಸ್ಥಿಕೆಗೆ ಸಿದ್ಧ’ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ಇದೇ ವಿಚಾರವಾಗಿ ಎಡವಟ್ಟು ಹೇಳಿಕೆ ನೀಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಗುರುವಾರ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಮೋದಿ ಅವರ ಜತೆ ಮಾತನಾಡಿದೆ. ಚೀನಾ ಗಡಿ ವಿಚಾರದಲ್ಲಿ ಅವರು ಒಳ್ಳೆಯ ಮೂಡ್‌ನಲ್ಲಿಲ್ಲ. ಭಾರತ-ಚೀನಾ ನಡುವೆ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ’ ಎಂದರು.

ಯೋಗಿ ಮಾಡೆಲ್‌ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಫುಲ್ ಬೋಲ್ಡ್

ಅಲ್ಲದೆ, ‘ನನ್ನನ್ನು ಅಮೆರಿಕದಲ್ಲಿ ಮಾಧ್ಯಮಗಳು ಮೆಚ್ಚುವುದಕ್ಕಿಂತ, ಭಾರತದ ಜನ ನನ್ನನ್ನು ಹೆಚ್ಚು ಮೆಚ್ಚುತ್ತಾರೆ. ನಾನು ಮೋದಿ ಅವರನ್ನು ‘ಲೈಕ್‌’ ಮಾಡುತ್ತೇನೆ. ಅವರೊಬ್ಬ ಗ್ರೇಟ್‌ ಜಂಟಲ್‌ಮನ್‌’ ಎಂದು ಹಾಡಿ ಹೊಗಳಿದರು.

ಆದರೆ, ‘ಚೀನಾ ವಿಚಾರದಲ್ಲಿ ಟ್ರಂಪ್‌ ಅವರು ಮೋದಿ ಜತೆ ಮಾತನಾಡಿದ್ದಾರೆ’ ಎಂಬುದನ್ನು ಭಾರತ ತಳ್ಳಿಹಾಕಿದೆ. ‘ಏಪ್ರಿಲ್‌ 4ರಂದು ಮೋದಿ-ಟ್ರಂಪ್‌ ದೂರವಾಣಿ ಸಂಭಾಷಣೆ ನಡೆದಿದ್ದೇ ಕೊನೆ. ಅದು ಕೊರೋನಾ ಕುರಿತಾದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆಗಳ ರಫ್ತಿಗೆ ಸಂಬಂಧಿಸಿದ್ದಾಗಿತ್ತು. ಇತ್ತೀಚೆಗೆ ಅವರಿಬ್ಬರ ನಡುವೆ ಮಾತುಕತೆಯೇ ನಡೆದಿಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.