ಭಾರತ-ಪಾಕ್‌ ಸಮರ ಸೇರಿ ಅಧಿಕಾರಕ್ಕೆ ಬಂದಾಗಿನಿಂದ ಟ್ರಂಪ್‌ ತಿಂಗಳಿಗೆ 1 ಯುದ್ಧ ನಿಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಆಗ್ರಹಿಸಿದ್ದಾರೆ.

ವಾಷಿಂಗ್ಟನ್‌ : ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರಾಗಕ್ಕೆ ಶ್ವೇತಭವನ ದನಿಗೂಡಿಸಿದೆ. ಭಾರತ-ಪಾಕ್‌ ಸಮರ ಸೇರಿ ಅಧಿಕಾರಕ್ಕೆ ಬಂದಾಗಿನಿಂದ ಟ್ರಂಪ್‌ ತಿಂಗಳಿಗೆ 1 ಯುದ್ಧ ನಿಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಆಗ್ರಹಿಸಿದ್ದಾರೆ.

ವಿಶ್ವದಲ್ಲಿ ನಡೆಯುತ್ತಿರುವ ಬಹುತೇಕ ಯುದ್ಧವನ್ನು ನಿಲ್ಲಿಸಿದ ಶ್ರೇಯವನ್ನು ಕೊಟ್ಟುಕೊಂಡು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಟ್ರಂಪ್‌ಗೆ ನೊಬೆಲ್‌ ನೀಡಬೇಕು ಎಂದು ಪಾಕಿಸ್ತಾನ ಮೊದಲು ಆಗ್ರಹಿಸಿತ್ತು. ಈಗ ಅದಕ್ಕೆ ಶ್ವೇತಭವನ ಕೂಡ ದನಿಗೂಡಿಸಿದೆ,

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆವಿಟ್‌, ‘ಟ್ರಂಪ್‌ ಅವರು ಥಾಯ್ಲೆಂಡ್‌-ಕಾಂಬೋಡಿಯಾ, ಇಸ್ರೇಲ್-ಇರಾನ್, ರುವಾಂಡಾ-ಕಾಂಗೋ, ಭಾರತ-ಪಾಕಿಸ್ತಾನ, ಸೆರ್ಬಿಯಾ-ಕೊಸೊವೊ ಮತ್ತು ಈಜಿಪ್ಟ್-ಇಥಿಯೋಪಿಯಾ ಯುದ್ಧಗಳಿಗೆ ಅಂತ್ಯ ಹಾಡಿದ್ದಾರೆ. ಅರ್ಥಾತ್‌, ಅಧ್ಯಕ್ಷರಾದಾಗಿನಿಂದ ತಿಂಗಳಿಗೊಂದರಂತೆ 6 ಸಂಘರ್ಷಗಳನ್ನು ನಿಲ್ಲಿಸಿದ್ದಾರೆ. ಈಗಾಗಲೇ ಅವರಿಗೆ ಇದಕ್ಕಾಗಿ ಶಾಂತಿ ಪ್ರಶಸ್ತಿ ಲಭಿಸಿರಬೇಕಿತ್ತು’ ಎಂದು ಪ್ರತಿಪಾದಿಸಿದರು.

‘ಉಕ್ರೇನ್‌-ರಷ್ಯಾ ಯುದ್ಧವನ್ನು ನಿಲ್ಲುಸುತ್ತೇನೆ’ ಎಂಬ ಭರವಸೆ ಕೊಟ್ಟು ಟ್ರಂಪ್ ಅಧ್ಯಕ್ಷ ಹುದ್ದೆಗೇರಿದ್ದರು. ಅದಿನ್ನೂ ಸಾಧ್ಯವಾಗಿಲ್ಲ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಸಮರ ತಾರಕಕ್ಕೆ ಏರಿದ್ದಾಗ ಮೊದಲು ಕದನವಿರಾಮ ಘೋಷಿಸಿ, ‘ಎರಡೂ ಅಣುಶಕ್ತ ರಾಷ್ಟ್ರಗಳಿಗೆ ವ್ಯಾಪಾರದ ಅಸ್ತ್ರ ತೋರಿಸಿ ರಣರಂಗದಿಂದ ಹಿಂದೆ ಕರೆಸಿಕೊಂಡದ್ದು ನಾನೇ’ ಎಂದಿದ್ದರು.

ಆದರೆ, ಟ್ರಂಪ್‌ ಮಧ್ಯಸ್ಥಿಕೆ ಮಾಡಿಲ್ಲ ಎಂದು ಭಾರತ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದರೂ ತಲೆಕೆಡಿಸಿಕೊಳ್ಳದ ಅವರು, ಈವರೆಗೆ ಸುಮಾರು 30 ಬಾರಿ ಅದೇ ಮಾತನ್ನು ಹೋದಲ್ಲೆಲ್ಲಾ ಹೇಳಿದ್ದಾರೆ.