ಬ್ರಿಟನ್, ಜರ್ಮನಿಯಲ್ಲಿ ಕಠಿಣ ‘ಲಾಕ್‌ಡೌನ್ 3.0’!
ರೂಪಾಂತರಿ ಕೊರೋನಾ ವೈರಸ್ ವ್ಯಾಧಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಈ ಹಿಂದಿಗಿಂತಲೂ ಹೆಚ್ಚು ಕಠಿಣ ಲಾಕ್‌ಡೌನ್| ಮಂಗಳವಾರದಿಂದಲೇ ಕಠಿಣ ಸ್ವರೂಪದಲ್ಲಿ ಜಾರಿ
ಲಂಡನ್(ಜ.06): ರೂಪಾಂತರಿ ಕೊರೋನಾ ವೈರಸ್ ವ್ಯಾಧಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಈ ಹಿಂದಿಗಿಂತಲೂ ಹೆಚ್ಚು ಕಠಿಣ ಲಾಕ್‌ಡೌನ್ ಹೇರಲಾಗಿದೆ. ಬ್ರಿಟನ್ ವಿಧಿಸಿರುವ 3ನೇ ರಾಷ್ಟ್ರೀಯ ಲಾಕ್‌ಡೌನ್ ಇದಾಗಿದ್ದು, ಮಂಗಳವಾರದಿಂದಲೇ ಕಠಿಣ ಸ್ವರೂಪದಲ್ಲಿ ಜಾರಿಗೆ ಬಂದಿದೆ.
ಬ್ರಿಟನ್‌ನಲ್ಲಿ ಡಿ.29ರಂದು ಏಕದಿನದ ಗರಿಷ್ಠ 80 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಸೋಮವಾರ 58 ಸಾವಿರ ಪ್ರಕರಣಗಳು ದೃಢಪಟ್ಟಿದ್ದವು. ಇದನ್ನು ನಿಯಂತ್ರಿಸುವ ಸಂಬಂಧ ಸ್ಕಾಟ್ಲೆಂಡ್, ವೇಲ್ಸ್, ಬ್ರಿಟನ್ ಒಳಗೊಂಡ ಯುನೈಟೆಡ್ ಕಿಂಗ್‌ಡಮ್‌ನ ಎಲ್ಲ ಭಾಗಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ.
ಈ ಬಗ್ಗೆ ಸಂದೇಶ ನೀಡಿರುವ ಪ್ರಧಾನಿ ಜಾನ್ಸನ್, ‘ರೂಪಾಂತರಿ ಕೊರೋನಾ ಸೋಂಕು ಈ ಹಿಂದಿನ ಸೋಂಕಿಗಿಂತ ಶೇ.50ರಿಂದ 70ರಷ್ಟುವೇಗದಲ್ಲಿ ಹರಡುತ್ತಿದೆ. ಪರಿಸ್ಥಿತಿ ಆತಂಕಕಾರಿಯಾಗಿದೆ. ಆಸ್ಪತ್ರೆಗಳು ಈ ಹಿಂದೆಂದಿಗಿಂತಲೂ ಹೆಚ್ಚು ಒತ್ತಡದಲ್ಲಿವೆ. ಆದ್ದರಿಂದ ಜನರು ತೀರಾ ಅನಿವಾರ್ಯ ಎನ್ನಿಸುವ- ಅಂದರೆ ಆಸ್ಪತ್ರೆಗೆ ಹೋಗುವ, ದಿನಸಿ ಸಾಮಾನು ಖರೀದಿಸುವ ಅಥವಾ ಮನೆಯಲ್ಲಿ ಕುಳಿತು ಮಾಡಲು ಅಸಾಧ್ಯ ಎನ್ನಿಸುವಂಥ ಕೆಲಸಗಳಿದ್ದರೆ ಮಾತ್ರ ಈಗ ವಿಧಿಸಲಾಗಿರುವ ನಿಯಮಗಳ ಅನ್ವಯ ಮನೆಯಿಂದ ಹೊರಬರಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಾಗಿ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡಬೇಕು. ಕೊರೋನಾ ಹೆಚ್ಚು ಹರಡುವಿಕೆಯ ಮೂಲಗಳಾಗಿರುವ ಶಾಲೆಗಳನ್ನೂ ತೆರೆಯುವಂತಿಲ್ಲ. ಮಕ್ಕಳು ಬೇರೆ ವಿಧಾನಗಳ ಮೂಲಕ ಕಲಿತು ಪರೀಕ್ಷೆ ಬರೆಯಬೇಕು. ಫೆಬ್ರವರಿ ಮಧ್ಯಭಾಗದ ವರೆಗೆ ಈ ನಿಯಮಗಳು ಅನ್ವಯವಾಗಲಿವೆ’ ಎಂದಿದ್ದಾರೆ.
ಇದೇ ವೇಳೆ ಜರ್ಮನಿಯಲ್ಲಿ ಕೂಡ ಕೊರೋನಾ ವೈರಸ್ ಅಲೆ ಎದ್ದಿರುವ ಪರಿಣಾಮ, ಈ ತಿಂಗಳ ಅಂತ್ಯದವರೆಗೆ ಲಾಕ್‌ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ.