ಫ್ರಾನ್ಸ್‌ನಲ್ಲಿ ಜೆನ್‌ಝೀ ಹೋರಾಟದ ವೇಳೆ ಅಕ್ರಮ ವಲಸಿಗರು ನೂರಾರು ಕಟ್ಟಡಗಳಿಗೆ ಬೆಂಕಿ ಹಚ್ಚಿ, ವಾಣಿಜ್ಯ ಮಳಿಗೆಗಳನ್ನು ಲೂಟಿ ಮಾಡಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದು, ಗೃಹ ಸಚಿವ ಲಾರೆಂಟ್ ನುನೆಜ್ ರಾಜೀನಾಮೆಗೆ ಮುಂದಾಗಿದ್ದಾರೆ.

ಪ್ಯಾರಿಸ್‌: ಅಕ್ರಮ ವಲಸಿಗರಿಂದ ಭಾರೀ ಹಿಂಸಾಚಾರ, ಲೂಟಿಗೆ ತುತ್ತಾದ ಯುರೋಪ್‌ನ ದೇಶವಾದ ಫ್ರಾನ್ಸ್‌ನಲ್ಲಿ ಇದೀಗ ದರೋಡೆ, ಹಿಂಸೆ ತಡೆಗೆ ಕರ್ಫ್ಯೂ ಜಾರಿಗೆ ಸರ್ಕಾರ ಆದೇಶಿಸಿದೆ. ಈ ನಡುವೆ ವಾರಾಂತ್ಯದಲ್ಲಿ ನಡೆದ ಘಟನೆ ನಿಯಂತ್ರಣ ವೈಫಲ್ಯದ ಹೊಣೆ ಹೊತ್ತು ಆಂತರಿಕ ಸಚಿವ ಲಾರೆಂಟ್ ನುನೆಜ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ.

ಸರ್ಕಾರದಿಂದ ತುರ್ತು ಸಭೆ

ಭಾನುವಾರ 8 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ನಡೆಸಿದ ಹೋರಾಟದಲ್ಲಿ ನೂರಾರು ಕಟ್ಟಡ, ವಾಹನಗಳಿಗೆ ಬೆಂಕಿ, 3000ಕ್ಕೂ ಹೆಚ್ಚು ವಾಣಿಜ್ಯ ಸ್ಥಳಗಳ ಮೇಲೆ ದಾಳಿ ಮತ್ತು ಲೂಟಿಯ ಬೆನ್ನಲ್ಲೇ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರಾನ್ ಸರ್ಕಾರ ಸೋಮವಾರ ತುರ್ತು ಸಭೆ ನಡೆಸಿದೆ. ಈ ಸಭೆಯಲ್ಲಿ ಹಿಂಸಾಚಾರ, ಲೂಟಿ ತಡೆಗೆ ಸೀಮಿತ ಮತ್ತು ಸ್ಥಳೀಯವಾಗಿ ಕರ್ಫ್ಯೂ ಜಾರಿಗೊಳಿಸುವಂತೆ ಪ್ರಧಾನಿ ಸೆಬಾಸ್ಟಿಯನ್ ಲೆಕಾರ್ನು ಆದೇಶಿಸಿದ್ದಾರೆ.

ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆಯ ನಂತರ ಮಾತನಾಡಿದ ಅವರು, ‘ಶನಿವಾರ- ಭಾನುವಾರದಂದು ತೀವ್ರ ಸ್ವರೂಪದ ಹಿಂಸಾಚಾರ ಮತ್ತು ವ್ಯಾಪಕ ಆಸ್ತಿಪಾಸ್ತಿ ಹಾನಿ ಸಂಭವಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದು ಒಂದು ರೀತಿಯ ಪವಾಡವೇ ಸರಿ’ ಎಂದರು. ಹಿಂಸಾತ್ಮಕ ಗುಂಪುಗಳನ್ನು ಎದುರಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಅವರು, ಸ್ಥಳೀಯವಾಗಿ ನಿಷೇಧಾಜ್ಞೆ ಜಾರಿಗೆ ತಂದು ಗಲಭೆಗಳನ್ನು ನಿಯಂತ್ರಿಸುವಂತೆ ಕರೆ ನೀಡಿದರು.

ರಾಜೀನಾಮೆಗೆ ಮುಂದಾದ ಸಚಿವ

ಗಲಭೆ ಮತ್ತು ಲೂಟಿಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಫ್ರಾನ್ಸ್‌ನ ಆಂತರಿಕ ಸಚಿವ ಲಾರೆಂಟ್ ನುನೆಜ್ ತಮ್ಮ ರಾಜೀನಾಮೆ ನೀಡಿದ್ದಾರೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಪೊಲೀಸರ ಅಗತ್ಯಗಳಿಗೆ ಸ್ಪಂದಿಸುವ ಸಲುವಾಗಿ ಅವರು ತಮ್ಮ ಹುದ್ದೆಯಲ್ಲಿಯೇ ಮುಂದುವರಿಯಬೇಕೆಂದು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಕೋರಿದ್ದಾರೆ.

ವಾರಾಂತ್ಯದ ದಿನವಾದ ಶನಿವಾರ- ಭಾನುವಾರ ಫ್ರಾನ್ಸ್‌ನ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ಹಿಂಸೆ

- 8 ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಇಳಿದು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದರಿಂದ ದೊಡ್ಡ ಅವಾಂತರ

- ಜೆನ್‌ಝೀ, ಜೆನ್‌ ಆಲ್ಫಾ ಹೋರಾಟವನ್ನು ಹೈಜಾಕ್‌ ಮಾಡಿ ಲೂಟಿ, ಹಿಂಸೆಗೆ ಇಳಿದ ಅಕ್ರಮ ವಲಸಿಗರು

- ನೂರಾರು ಕಟ್ಟಡ, ವಾಹನಗಳಿಗೆ ಬೆಂಕಿ, 300ಕ್ಕೂ ಹೆಚ್ಚು ವಾಣಿಜ್ಯ ಸ್ಥಳಗಳಲ್ಲಿ ವಲಸಿಗರಿಂದ ದರೋಡೆ

- ಹೀಗಾಗಿ ಫ್ರಾನ್ಸ್‌ ಸರ್ಕಾರದಿಂದ ಕರ್ಫ್ಯೂ ಜಾರಿ. ಪ್ರತಿಭಟನಾಕಾರರ ಮೇಲಿನ ಪೊಲೀಸರ ಕ್ರಮಕ್ಕೆ ಸಮರ್ಥ