Asianet Suvarna News Asianet Suvarna News

ಇಂಗಾಲ, ಕಲ್ಲಿದ್ದಲಿಗೆ ಅಂಕುಶ ಹಾಕಲು ಜಿ-20 ಅಸ್ತು!

* ಜಿ-20 ಶೃಂಗಸಭೆ ಮಹತ್ವದ ನಿರ್ಣಯ

* ಇಂಗಾಲ, ಕಲ್ಲಿದ್ದಲಿಗೆ ಕಡಿವಾಣ: ಜಿ-20 ಅಸ್ತು

 * 2050ಕ್ಕೆ ಇಂಗಾಲ ತಾಟಸ್ಥ್ಯ

* ಕಲ್ಲಿದ್ದಲು ಘಟಕಗಳಿಗೆ ಹಣಕಾಸು ನೆರವು ಬಂದ್‌

* ತಾಪಮಾನ ಏರಿಕೆ 1.5 ಡಿಗ್ರಿಗೆ ಸೀಮಿತ

G20 leaders pledge carbon neutrality by mid century make commitments on coal financing pod
Author
Bangalore, First Published Nov 1, 2021, 6:42 AM IST
  • Facebook
  • Twitter
  • Whatsapp

ರೋಮ್‌(ನ.01): 2050ರ ವೇಳೆಗೆ ಇಂಗಾಲ (Carbon) ತಾಟಸ್ಥ್ಯ ಮತ್ತು ವಿದೇಶಗಳಲ್ಲಿನ ಕಲ್ಲಿದ್ದಲು (Coal) ಆಧರಿತ ವಿದ್ಯುತ್‌ ಉತ್ಪಾದನಾ ಸ್ಥಾವರಗಳಿಗೆ (Power Plant) ಹಣಕಾಸು ನೆರವು ಸ್ಥಗಿತಗೊಳಿಸಲು ಜಿ-20 ರಾಷ್ಟ್ರಗಳು (G20 Nations) ಸಮ್ಮತಿಸಿವೆ. ಜೊತೆಗೆ ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಸ್ಥಿತಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ನಷ್ಟುಹೆಚ್ಚಳಕ್ಕೆ ಮಾತ್ರ ಸೀಮಿತಗೊಳಿಸುವ ಕುರಿತೂ ಜಿ-20 ದೇಶಗಳ ನಾಯಕರು ಒಪ್ಪಿದ್ದಾರೆ.

ಹಸಿರುಮನೆ ಅನಿಲ ಬಿಡುಗಡೆಗೆ ಮಿತಿ ಹೇರುವ ನಿರ್ದಿಷ್ಟ ಸಮಯ ಗೊತ್ತುಪಡಿಸುವ ಉದ್ದೇಶವನ್ನು ಸಭೆ ಹೊಂದಿತ್ತಾದರೂ, ಅಂಥ ತೀರ್ಮಾನಕ್ಕೆ ಬರಲು ಸಭೆ ವಿಫಲವಾಗಿದೆ. ಆದರೆ ಬಹುತೇಕ ದೇಶಗಳು 2050ರ ವೇಳೆಗೆ ಇಂಗಾಲ ತಾಟಸ್ಥ್ಯ (ಇಂಗಾಲ ಬಿಡುಗಡೆ ಮತ್ತು ವಾತಾವರಣದಲ್ಲಿನ ಇಂಗಾಲ ತೆಗೆಯುವ ಸಮಸ್ಥಿತಿ) ಸ್ಥಿತಿಗೆ ಬರಲು ಸಮ್ಮತಿಸಿವೆ. ಜೊತೆಗೆ ವಿದೇಶಗಳಲ್ಲಿನ ಕಲ್ಲಿದ್ದಲು ಆಧರಿತ ವಿದ್ಯುತ್‌ ಸ್ಥಾವರಗಳಿಗೆ ಹಣಕಾಸಿನ ನೆರವು ಸ್ಥಗಿತಗೊಳಿಸಲು ನಿರ್ಧರಿಸಿವೆ. ಆದರೆ ದೇಶೀಯವಾಗಿ ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮೂಲನೆ ಮಾಡುವ ಕುರಿತು ಸ್ಪಷ್ಟಒಪ್ಪಂದಕ್ಕೆ ಬರಲು ಸಭೆ ವಿಫಲವಾಗಿದೆ. ಇದು ತಮ್ಮ ವಿದ್ಯುತ್‌ ಅಗತ್ಯಕ್ಕಾಗಿ ಕಲ್ಲಿದ್ದಲ್ಲನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತ ಮತ್ತು ಚೀನಾದಂಥ ದೇಶಗಳ ಬೇಡಿಕೆಗೆ ಸಿಕ್ಕ ಜಯ ಎಂದು ಬಣ್ಣಿಸಲಾಗಿದೆ.

ವಿಶ್ವದಲ್ಲಿ ಬಿಡುಗಡೆಯಾಗುವ ಒಟ್ಟು ಹಸಿರು ಮನೆ ಅನಿಲದಲ್ಲಿ ಶೇ.75ರಷ್ಟುಪಾಲು ಈ 20 ದೇಶಗಳದ್ದೇ ಆಗಿರುವ ಕಾರಣ, ಈ ನಿರ್ಧಾರ ಭವಿಷ್ಯವನ್ನು ಪ್ರಾಕೃತಿಕ ವಿಕೋಪಗಳಿಂದ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.

ಇದೇ ವೇಳೆ ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಸ್ಥಿತಿಗಿಂತ 1.5 ಡಿಗ್ರಿಯಷ್ಟುಹೆಚ್ಚಳಕ್ಕೆ ಮಾತ್ರ ಸೀಮಿತಗೊಳಿಸಲು ಅರ್ಥಪೂರ್ಣ ಮತ್ತು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಲು ಸಭೆ ಒಪ್ಪಿದೆ. ಆದರೆ ಈ ಸಂಬಂಧ ಯಾವುದೇ ಸ್ಪಷ್ಟಮತ್ತು ಖಚಿತ ನಿಲುವು, ನಿರ್ಧಾರ ಪ್ರಕಟಿಸಲು ಸಭೆ ವಿಫಲವಾಗಿದೆ.

ತಾಪಮಾನದಲ್ಲಿನ ಏರಿಕೆಯು ಇತ್ತೀಚಿನ ದಶಕಗಳಲ್ಲಿ ದಿಢೀರ್‌ ಪ್ರವಾಹ, ಬರ, ಚಂಡಮಾರುತ ಸೇರಿದಂತೆ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಜಾಗತಿಕ ಮಟ್ಟದಲ್ಲಿ ಭಾರೀ ಒತ್ತಾಯ ಇದೆ. ಈ ಹಿನ್ನೆಲೆಯಲ್ಲಿ 2015ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಸಭೆಯಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಸ್ಥಿತಿಯ 1.5 ಡಿಗ್ರಿಗೆ ಸೀಮಿತಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

ವಿಶ್ವಕ್ಕಾಗಿ 500 ಕೋಟಿ ಡೋಸ್‌ ಲಸಿಕೆ ಉತ್ಪಾದನೆ

ಮುಂದಿನ ವರ್ಷದ ಹೊತ್ತಿಗೆ ಇಡೀ ವಿಶ್ವಕ್ಕಾಗಿ ಭಾರತ 500 ಕೋಟಿ ಡೋಸ್‌ನಷ್ಟುಕೋವಿಡ್‌ ಲಸಿಕೆಗಳನ್ನು ಉತ್ಪಾದಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಶನಿವಾರದಿಂದ ಇಲ್ಲಿ ಆರಂಭವಾದ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡುವ ವೇಳೆ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದ ಪಾತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ನಾವು ನಮಗಾಗಿ ಮಾತ್ರವಲ್ಲ ವಿಶ್ವಕ್ಕಾಗಿ ಉತ್ಪಾದಿಸುತ್ತೇವೆ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ, ಭಾರತದ ಲಸಿಕೆಯಾದ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಅನುಮತಿ ನೀಡಿದೆ. ಹೀಗಾಗಿ ಇತರ ದೇಶಗಳಿಗೂ ಲಸಿಕೆ ನೀಡಲು ಭಾರತ ಸದಾ ಸಿದ್ಧ ಎಂದು ಪ್ರಧಾನಿ ತಿಳಿಸಿದರು. ಭಾರತದಲ್ಲಿ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ವ್ಯಾಪಕವಾಗಿ ಬಳಕೆಯಾಗುತ್ತಿವೆ. ನವೆಂಬರ್‌ 3ರಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ತುರ್ತು ಬಳಕೆಯ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ ಸೇರಿಸುವ ಸಾಧ್ಯತೆ ಇದೆ.

ಕೋವಿಡ್‌ ಸಾಂಕ್ರಾಮಿಕದ ವೇಳೆ ಭಾರತ 150 ದೇಶಗಳಿಗೆ ವೈದ್ಯಕೀಯ ಸಾಮಗ್ರಿ ಪೂರೈಸಿದ್ದನ್ನು ಜಿ-20 ಶೃಂಗಸಭೆಯಲ್ಲಿ ತಿಳಿಸಿದ ಪ್ರಧಾನಿ ಮೋದಿ, ಕೋವಿಡ್‌ ವಿರುದ್ಧ ‘ಒಂದು ಭೂಮಿ ಒಂದು ಆರೋಗ್ಯ’ ದೃಷ್ಟಿಕೋನವಿಟ್ಟುಕೊಂಡು ಹೋರಾಡಬೇಕೆಂದು ಕರೆ ನೀಡಿದರು.

 

Follow Us:
Download App:
  • android
  • ios