ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಸಾವಿನ ವದಂತಿ: ಗುಪ್ತಚರ ಇಲಾಖೆ ಹೇಳಿದ್ದೇನು, ಅಸಲಿಯತ್ತು ಹೀಗಿದೆ..
ಪಾಕಿಸ್ತಾನದ ಯೂಟ್ಯೂಬರ್‌ನೊಬ್ಬ ಮಾಡಿದ ಎಡವಟ್ಟಿನಿಂದ ಹಾಗೂ ಪಾಕ್ ಹಂಗಾಮಿ ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟ್‌ನಿಂದ ಇಂಥದ್ದೊಂದು ವದಂತಿ ಹಬ್ಬಿದೆ ಎಂದು ಫ್ಯಾಕ್ಟ್‌ಚೆಕ್ ಆದ ಬಳಿಕ ಗೊತ್ತಾಗಿದೆ. ಹೀಗಾಗಿ ದಾವೂದ್ ಸಾವಿನ ಸುದ್ದಿ ಸುಳ್ಳು ಎಂದು ಖಚಿತಪಟ್ಟಿದೆ.
ಇಸ್ಲಾಮಾಬಾದ್ (ಡಿಸೆಂಬರ್ 19, 2023): ಭಾರತದ ಮೋಸ್ಟ್ ವಾಂಟೆಡ್ ಉಗ್ರ, 93ರ ಮುಂಬೈ ಸ್ಫೋಟದ ರೂವಾರಿ ಎನ್ನಲಾದ ದಾವೂದ್ ಇಬ್ರಾಹಿಂ ಮೃತಪಟ್ಟಿದ್ದಾನೆ ಎಂಬ ಬದಂತಿ ಭಾನುವಾರ ರಾತ್ರಿಯಿಂದೀಚೆಗೆ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ವದಂತಿಗೆ ಪೂರಕವಾಗಿ ಪಾಕ್‌ನಾದ್ಯಂತ ಇಂಟರ್ನೆಟ್ ಸ್ಥಗಿತಗೊಂಡಿದ್ದು ಜನರು ದಾವೂದ್ ಸಾವಿನ ಸುದ್ದಿಯನ್ನು ನಂಬುವಂತೆ ಮಾಡಿತ್ತು.
ಆದರೆ ಪಾಕಿಸ್ತಾನದ ಯೂಟ್ಯೂಬರ್‌ನೊಬ್ಬ ಮಾಡಿದ ಎಡವಟ್ಟಿನಿಂದ ಹಾಗೂ ಪಾಕ್ ಹಂಗಾಮಿ ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟ್‌ನಿಂದ ಇಂಥದ್ದೊಂದು ವದಂತಿ ಹಬ್ಬಿದೆ ಎಂದು ಫ್ಯಾಕ್ಟ್‌ಚೆಕ್ ಆದ ಬಳಿಕ ಗೊತ್ತಾಗಿದೆ. ಹೀಗಾಗಿ ದಾವೂದ್ ಸಾವಿನ ಸುದ್ದಿ ಸುಳ್ಳು ಎಂದು ಖಚಿತಪಟ್ಟಿದೆ.
ಇದನ್ನು ಓದಿ: ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ, ಮೋಸ್ಟ್ ವಾಂಟೆಡ್ ಉಗ್ರ ಸಾವು ಎಂಬ ಗುಸುಗುಸು: ಛೋಟಾ ಶಕೀಲ್ ಹೇಳಿದ್ದೇನು?
ವಿಷಪ್ರಾಶನಕ್ಕೆ ಬಲಿ ಎಂಬ ವದಂತಿ: ದಾವೂದ್ ಅನಾಮಿಕ ವ್ಯಕ್ತಿಗಳ ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ. ಭಾನುವಾರ ಸಂಜೆ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನಿಗೆ ರಹಸ್ಯ ರೀತಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ 8 - 9 ರ ಅವಧಿಯಲ್ಲಿ ಮೃತಪಟ್ಟಿದ್ದಾನೆ ಎಂದು ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.
ಜೊತೆಗೆ ಈ ಸುದ್ದಿ ಹರಡದಿರಲಿ ಎನ್ನುವ ಕಾರಣಕ್ಕೆ ಪಾಕ್ ಸರ್ಕಾರ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿತ್ತು ಎಂದೂ ವರದಿಯಾಗಿತ್ತು. ಇದನ್ನು ಹಲವು ನೆಟ್ಟಿಗರು, ಕೆಲವು ಪತ್ರಕರ್ತರು ಖಚಿತಪಡಿಸಿದ್ದರು. ಜೊತೆಗೆ ದಾವೂದ್ ಬೀಗರಾದ ಜಾವೇದ್ ಮಿಯಾಂದಾದ್ ಕೂಡ ಹಾರಿಕೆ ಉತ್ತರ ನೀಡಿದ್ದರು.
ಇದನ್ನು ಓದಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್ ಆಸ್ಪತ್ರೆಗೆ ದಾಖಲು!
ಯೂಟ್ಯೂಬರ್ ಎಡವಟ್:
ಆದರೆ ಬಳಿಕ ಸುದ್ದಿಯ ಮೂಲವನ್ನು ಹುಡುಕಿದಾಗ ಪಾಕಿಸ್ತಾನದ ಮೂಲದ ಯೂಟ್ಯೂಬರ್ ಒಬ್ಬ ಜಾಲತಾಣದಲ್ಲಿದ್ದ ಅಸ್ಪಷ್ಟ ಮಾಹಿತಿ ಆಧರಿಸಿ ದಾವೂದ್ ಕುರಿತ ಸುದ್ದಿ ಹರಿಯಬಿಟ್ಟಿದ್ದ. ಅದರ ಜೊತೆಗೆ ಇಂಟರ್ನೆಟ್ ಸಂಪರ್ಕ ಏಕಾಏಕಿ ಕಡಿತ ಆದ ವಿಷಯವನ್ನೂ ಜೋಡಿಸಿದ್ದ. ಮತ್ತೊಂದೆಡೆ ಪಾಕ್ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಸಂದೇಶದಲ್ಲಿ ದಾವೂದ್ ಸಾವಿಗೆ ಸಂತಾಪ ಸೂಚಿಸಲಾಗಿತ್ತು.
ಇನ್ನು ಇಂಟರ್ನೆಟ್ ಸ್ಥಗಿತವಾಗಿದ್ದು ಇಮ್ರಾನ್ ಖಾನ್ ಆನ್‌ಲೈನ್ ಭಾಷಣಕ್ಕೆ ಕಡಿವಾಣ ಹಾಕಲು ಎಂದು ಗೊತ್ತಾಗಿದೆ. ಹೀಗಾಗಿ ದಾವೂದ್ ಸಾವು ಸುಳ್ಳು. ಆತ ಬದುಕಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ಕೂಡಾ ಖಚಿತಪಡಿಸಿವೆ.