ಪ್ಯಾರಿಸ್ (ಮಾ.12) ಕರೋನಾ ವೈರಸ್ ಕಾಟದ ನಂತರ ಹ್ಯಾಂಡ್ ಶೇಕ್ ಬದಲು ಭಾರತದ ನಮಸ್ಕಾರ ಪ್ರಪಂಚದಾದ್ಯಂತ ಟ್ರೆಂಡ್ ಆಗುತ್ತಿದೆ.

ನರೇಂದ್ರ ಮೋದಿ ಅವರ ನಮಸ್ಕಾರ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದೆ.  ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರೋನ್  ಹ್ಯಾಂಡ್ ಶೇಕ್ ಬಿಟ್ಟು ನಮಸ್ಕಾರದ ಮೊರೆ ಹೋಗಿದ್ದಾರೆ.

ಸ್ಪೇನ್ ದೇಶದ ರಾಜ ದಂಪತಿ ಮತ್ತು ಪರಿವಾರದವರನ್ನು ಫ್ರಾನ್ಸ್ ಅಧ್ಯಕ್ಷ ನಮಸ್ತೆ ಮಾಡುವ ಮೂಲಕ ಶುಭಾಶಯ ಸಲ್ಲಿಸಿ ಸ್ವಾಗತಿಸಿದ್ದು ದೊಡ್ಡ ಸುದ್ದಿಯಾಗುತ್ತಿದೆ.

ರಾಜಧಾನಿ ಪ್ಯಾರಿಸ್‍ಗೆ ಆಗಮಿಸಿದ ಸ್ಪೇನ್ ದೊರೆ ಫಿಲಿಪ್ ಮತ್ತು ಮಹಾರಾಣಿ ಲೆಟಿಜಿಯಾ ಅವರನ್ನು ಮ್ಯಾಕ್ರೋನ್ ಭಾರತೀಯ ಶೈಲಿಯಲ್ಲಿ ತುಂಬು ಹೃದಯದಿಂದ ನಮಸ್ಕಾರ ಮಾಡಿ ಸ್ವಾಗತಿಸಿದರು. ಈ ದೃಶ್ಯವನ್ನು ಭಾರತಕ್ಕೆ ಫ್ರಾನ್ಸ್ ರಾಯಭಾರಿಯಾಗಿರುವ ಎಮ್ಯಾನುಯೆಲ್ ಲೆನೈನ್ ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ. ಕರೋನಾ ವೈರಸ್ ಗಲಾಟೆ ನಡುವೆ ನಮಸ್ಕಾರಕ್ಕೆ ಮತ್ತಷ್ಟು ಮಹತ್ವ ಬಂದಿರುವುದೆಂತೂ ನಿಜ.

ಭಾರತೀಯತೆಯನ್ನು ವಿಶ್ವದಾದ್ಯಂತ ಪರಿಚಯಿಸಿದ ಕರೋನಾ

ಪ್ರಧಾನಿ ಮೋದಿ ಸಹ ಹ್ಯಾಂಡ್ ಶೇಕ್ ಬೇಡ ಎಲ್ಲರೂ ನಮಸ್ಕಾರ ಮಾಡುವುದನ್ನು ಕಲಿಯೋಣ ಎಂದು ಹೇಳಿದ್ದರು. ಪ್ರಧಾನಿ ಅವರ ಈ ಉತ್ತಮ ಸಲಹೆ ಫ್ರಾನ್ಸ್ ಅಧ್ಯಕ್ಷರ ಮೇಲೆ ಪ್ರಭಾವ ಬೇರಿದೆ. ಸ್ಪೇನ್ ದೇಶದ ರಾಯಲ್ ಫ್ಯಾಮಿಲಿಯನ್ನು ಶೇಕ್ ಹ್ಯಾಂಡ್ ಮೂಲಕ ಶುಭಕೋರುವ ಬದಲು ಎಮ್ಯಾನುಯೆಲ್ ಮಾಕ್ರೋನ್ ನಮಸ್ಕಾರ ಮಾಡಿ ಬರಮಾಡಿಕೊಂಡಿದ್ದಾರೆ.

ಫ್ರಾನ್ಸ್ ಅಧ್ಯಕ್ಷರ ಈ ನಡುವಳಿಕೆ ಇಡೀ ಪ್ರಪಂಚದಾದ್ಯಂತ ಹೊಗಳಿಕೆಗೆ ಕಾರಣವಾಗಿದೆ. ಇದನ್ನು ಎಲ್ಲರೂ ಅನುಸರಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕೋರಿಕೊಂಡಿದ್ದಾರೆ.