ಪಾಕಿಸ್ತಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಾಲ್ವರು ಮಹಿಳೆಯರನ್ನು ಬೆತ್ತಲೆಗೊಳಿಸಿ ಹಲ್ಲೆ ಕಳ್ಳತನದ ಆರೋಪ ಹೊರಿಸಿ ಹೇಯ ಕೃತ್ಯವೆಸಗಿದ ಗುಂಪು

ಲಾಹೋರ್‌: ಅಂಗಡಿಯಲ್ಲಿ ಕಳ್ಳತನವೆಸಗಿದ್ದಾರೆ ಎಂದು ಆರೋಪಿಸಿ ಗುಂಪೊಂದು, ಒಬ್ಬಳು ಯುವ ತರುಣಿ ಸೇರಿದಂತೆ ನಾಲ್ವರನ್ನು ಸಂಪೂರ್ಣ ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದಂತಹ ಹೇಯ ಕೃತ್ಯ ಪಾಕಿಸ್ತಾನದಲ್ಲಿ ನಡೆದಿದೆ. ಲಾಹೋರ್‌(Lahore)ನಿಂದ 180 ಕಿಲೋ ಮೀಟರ್‌ ದೂರದಲ್ಲಿರುವ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾ(Social Media)ದಲ್ಲಿ ವೈರಲ್‌ ಆಗಿದೆ. ವಿವಸ್ತ್ರಗೊಳಿಸಿದ ಕಿರಾತಕ ಗುಂಪಿನ ಮುಂದೆ ಮಾನ ಮುಚ್ಚಿಕೊಳ್ಳುವ ಸಲುವಾಗಿ ತುಂಡು ಬಟ್ಟೆ ನೀಡುವಂತೆ ಮಹಿಳೆಯರು ಅಂಗಾಲಾಚುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ದುಷ್ಕರ್ಮಿಗಳು ನಾಲ್ವರು ಮಹಿಳೆಯರನ್ನು ಬೆತ್ತಲೆಗೊಳಿಸಿದ್ದಲ್ಲದೇ ಅವರಿಗೆ ಕೋಲಿನಿಂದ ಸರಿಯಾಗಿ ಬಾರಿಸಿದ್ದಾರೆ. 

ಈ ವೇಳೆ ಅಳುತ್ತಿರುವ ಮಹಿಳೆಯರು ತುಂಡು ಬಟ್ಟೆಗಾಗಿ ಬೇಡಿದಲ್ಲದೇ ತಮ್ಮನ್ನು ಬಿಟ್ಟು ಬಿಡುವಂತೆ ಕಾಡಿ ಬೇಡಿದರು ಯಾವುದೇ ಪ್ರಯೋಜನವಾಗಿಲ್ಲ. ಮನ ಕರಗದ ಗುಂಪು ಅವರನ್ನು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ಮೆರವಣಿಗೆ ಬೇರೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಪಾಕಿಸ್ತಾನದ ಪಂಜಾಬ್‌(Punjab) ಪ್ರಾಂತ್ಯದ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ದುರಾದೃಷ್ಟಕರ ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಅವರು ಹೇಳಿದರು. 

ಪಾಕಿಸ್ತಾನದಲ್ಲಿ 26 ಲಕ್ಷ ಮಹಿಳೆಯರಿಗಿಲ್ಲ NIC ಭಾಗ್ಯ!

ಸಂತ್ರಸ್ತ ಮಹಿಳೆಯರು ಫೈಸಲಾಬಾದ್‌(Faisalabad)ನಲ್ಲಿರುವ ಬಾವ ಚಕ್‌ ಮಾರುಕಟ್ಟೆ(Bawa Chak market)ಗೆ ತ್ಯಾಜ್ಯವನ್ನು ಸಂಗ್ರಹಿಸಲು ಬಂದಿದ್ದರು. ಈ ವೇಳೆ ನಮಗೆ ತುಂಬಾ ಬಾಯಾರಿಕೆಯಾಗಿದ್ದು, ದಾಹ ಇಂಗಿಸಿಕೊಳ್ಳಲು ಅಲ್ಲೇ ಇದ್ದ ಉಸ್ಮನ್‌ ಇಲೆಕ್ಟ್ರಿಕ್‌ ಸ್ಟೋರ್‌(Usman Electric Store)ಗೆ ಬಂದು ಒಂದು ಬಾಟಲ್‌ ನೀರು ಕೊಡುವಂತೆ ಕೇಳಿದೆವು. ಆದರೆ ಅಂಗಡಿಯ ಮಾಲೀಕ ಸದ್ದಾಂ(Saddam) ಹಾಗೂ ಇತರ ವ್ಯಕ್ತಿಗಳು ನಮಗೆ ಹೊಡೆಯಲು ಆರಂಭಿಸಿದರು. ಬಳಿಕ ನಮ್ಮ ಬಟ್ಟೆಯನ್ನೆಲ್ಲಾ ಹರಿದು ಹಾಕಿದ ಅವರು ನಮ್ಮನ್ನು ಅಂಗಡಿಯಿಂದ ಇತ್ತ ಎಳೆದುಕೊಂಡು ಬಂದು ಹೊಡೆಯಲು ಶುರು ಮಾಡಿದರು. ನಮ್ಮನ್ನು ಬೆತ್ತಲೆ ಮಾಡಿದ್ದಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ಈ ವೇಳೆ ಯಾರೊಬ್ಬರೂ ತಡೆಯಲು ಮುಂದಾಗಲಿಲ್ಲ ಎಂದು ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಫೈಸಲಾಬಾದ್‌ನ ಪೊಲೀಸ್ ಹೆಡ್‌ ಅಬಿದ್‌ ಖಾನ್(Dr Abid Khan),ಸದ್ದಾಂ ಸೇರಿದಂತೆ ಐವರನ್ನು ಬಂಧಿಸಿದ್ದೇವೆ. ತಪ್ಪಿಸಿಕೊಂಡವರಿಗೆ ಶೋಧ ನಡೆಸಲಾಗುತ್ತಿದೆ ಎಂದರು. 

ಪಾಕ್ ಮಹಿಳೆಯರಿಗೆ ಮಲಾಲ ಯೂಸಫ್ ಸ್ಕಾಲರ್‌ಶಿಪ್ ಕಾಯ್ದೆ ಪಾಸ್ ಮಾಡಿದ ಅಮೆರಿಕ!

ಪಾಕಿಸ್ತಾನದಲ್ಲಿ ಇಂತಹ ಕೃತ್ಯಗಳು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆಯಂದೇ ಪಾರ್ಕ್ ಒಂದರಲ್ಲಿ ವಿಡಿಯೋ ಮಾಡುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ ನೂರಾರು ಜನರ ಗುಂಪು ಆಕೆಯ ಬಟ್ಟೆಗಳನ್ನು ಹರಿದುಹಾಕಿ ಕ್ರೌರ್ಯ ಮೆರೆದಿತ್ತು. ಮಿನಾರ್-ಇ-ಪಾಕಿಸ್ತಾನ್ ಬಳಿ ಯುವತಿ ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ನುಗ್ಗಿ ಬಂದ ಜನರ ಗುಂಪು ಆಕೆಯ ಮೇಲೆ ಹಲ್ಲೆ ಮಾಡಿದಲ್ಲದೇ ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದರು. ಯುವತಿ ಹಾಗೂ ಆಕೆ ಜತೆಗಿದ್ದವರ ಮೊಬೈಲ್ ಫೋನ್, ಕಿವಿಯ ಓಲೆಗಳು, ಗುರುತಿನ ಚೀಟಿ ಮತ್ತು ಸುಮಾರು 15,000 ರೂಪಾಯಿಯನ್ನು ಕಸಿಯಲಾಗಿದೆ ಎಂದು ಯುವತಿ ದೂರು ನೀಡಿದ್ದಳು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ದೇಶದ ಸ್ವಾತಂತ್ರ್ಯ ದಿನಾಚರಣೆ ದಿನವೇ ಮಹಿಳೆಯ ಮೇಲೆ ಇಂತಹ ದೌರ್ಜನ್ಯ ನಡೆದಿರುವುದಕ್ಕೆ ಅಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.