ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ಉಗ್ರ ಸಹ-ಪೈಲಟ್ ದಾಳಿ ನಡೆಸಿ, ವಿಮಾನವನ್ನು ಇಸ್ರೇಲ್ ನಿಲ್ದಾಣಕ್ಕೆ ಅಪ್ಪಳಿಸಲು ಯತ್ನಿಸಿದ ಘಟನೆ ನಡೆದಿದೆ. 9/11 ಮಾದರಿಯ ಈ ದಾಳಿಯನ್ನು ತಡೆಯಲು ಇಸ್ರೇಲ್ ಸೇನೆ ವಿಮಾನವನ್ನು ಹೊಡೆದುರುಳಿಸಲು ಸಿದ್ಧವಾಗಿತ್ತು. ಆದರೆ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಸಾಹಸದಿಂದ ವಿಮಾನ ಪತನ ತಪ್ಪಿದ್ದು, ಅವರಿಗೆ ಅಮೆರಿಕ ಸಂಸತ್ತು ಗೌರವ ಸಲ್ಲಿಸಿದೆ.
ಟೆಲ್ ಅವೀವ್: ಫ್ಲೈದುಬೈ ವಿಮಾನದಲ್ಲಿ ಪೈಲಟ್ ಮೇಲೆ ದಾಳಿ ನಡೆದ ನಂತರ ತನ್ನ ಗಡಿಯತ್ತ ಧಾವಿಸಿ ಬಂದ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸೇನೆ ಸಂಪೂರ್ಣ ಸಿದ್ಧತೆ ನಡೆಸಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ವಿಮಾನದ ಪೈಲಟ್ 9/11 ಮಾದರಿಯಲ್ಲಿ ದಾಳಿ ನಡೆಸುವ ಆತಂಕವಿತ್ತು. ಆಗ ಯಾವುದಾದರೂ ದೊಡ್ಡ ಕಟ್ಟಡಕ್ಕೆ ಡಿಕ್ಕಿ ಹೊಡೆದು ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಲು, ಇಸ್ರೇನ್ ಈ ಕ್ರಮಕ್ಕೆ ಮುಂದಾಗಿತ್ತು ಎನ್ನಲಾಗಿದೆ.
ಭಾರತೀಯ ಪೈಲಟ್ ಮೇಲೆ ಉಗ್ರ ಸಹ-ಪೈಲಟ್ ದಾಳಿ ನಡೆಸಿದ ನಂತರ ವಿಮಾನವು ದಿಢೀರನೆ 14,000 ಅಡಿಗಳಷ್ಟು ಕುಸಿಯಿತು. ಆಗ ಇಸ್ರೇಲ್ ವಾಯುಪಡೆಯು ಕಾಕ್‌ಪಿಟ್ ಅನ್ನು ಸಂಪರ್ಕಿಸಲು ಯತ್ನಿಸಿತು. ಆದರೆ, ವಿಮಾನದಿಂದ ಯಾವುದೇ ಪ್ರತ್ಯುತ್ತರ ಬರಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತ ಇಸ್ರೇಲ್, ತಕ್ಷಣವೇ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿತು. ಸುರಕ್ಷತೆಯ ದೃಷ್ಟಿಯಿಂದ ತನ್ನ ವೈಮಾನಿಕ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ಯುದ್ಧ ವಿಮಾನಗಳನ್ನು ಸಿದ್ಧಗೊಳಿಸಿತು.
ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಯುದ್ಧ ವಿಮಾನಗಳು ಸಿದ್ಧವಾಗಿದ್ದಾಗಲೇ, ಫ್ಲೈದುಬೈ ವಿಮಾನವು ಇಸ್ರೇಲ್ ಗಡಿಯಿಂದ ಸೌದಿ ಅರೇಬಿಯಾದತ್ತ ತನ್ನ ದಿಕ್ಕನ್ನು ಬದಲಿಸಿತು. ಹೀಗಾಗಿ ಇಸ್ರೇಲ್ ತನ್ನ ಯುದ್ಧ ವಿಮಾನಗಳನ್ನು ವಾಪಸ್ ಕರೆಸಿಕೊಂಡಿತು ಎಂದು ತಿಳಿದುಬಂದಿದೆ.
ಗಾಜಾ ಮೇಲಿನ ಇಸ್ರೇಲ್ ಕ್ರಮಕ್ಕೆ ಪ್ರತೀಕಾರವಾಗಿ ಫ್ಲೈದುಬೈ ಪತನಕ್ಕೆ ಸಂಚು!
ಗಾಜಾ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ, ಇಸ್ರೇಲ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈದುಬೈ ವಿಮಾನವನ್ನು ಅಪ್ಪಳಿಸಲು ಒಮಾನಿ ಉಗ್ರ ಸಹ-ಪೈಲಟ್ ಸಂಚು ರೂಪಿಸಿದ್ದ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಒಂದು ವೇಳೆ ಇಸ್ರೇಲ್ ವಿಮಾನ ನಿಲ್ದಾಣದ ಮೇಲಿನ ದಾಳಿ ವಿಫಲವಾದರೆ, ಜೋರ್ವಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗೆ ವಿಮಾನವನ್ನು ಅಪ್ಪಳಿಸಿ, ಧ್ವಂಸಗೊಳಿಸುವ ಪ್ಲ್ಯಾನ್ ಬಿ ಅನ್ನು ಸಹ ಆರೋಪಿ ಸಿದ್ಧಪಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಸ್ಮಿತ್ ಮಚ್ಛರ್‌ಗೆ ಅಮೆರಿಕ ಸಂಸತ್ ಗೌರವ
ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಅಪಹರಣ ಹಾಗೂ ಪತನ ಯತ್ನದಿಂದ ರಕ್ಷಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಗೌರವಾರ್ಥವಾಗಿ ಅಮೆರಿಕ ಸಂಸತ್ತಿನ ಸದನವಾದ ‘ಅಮೆರಿಕ ಜನಪ್ರತಿನಿಧಿ ಸಭೆ‘ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದೆ.
ಮಚ್ಛರ್ ಅವರನ್ನು ಗೌರವಿಸುವ ನಿರ್ಣಯವನ್ನು ಅಮೆರಿಕದ ಕಾಂಗ್ರೆಸ್ಸಿಗ ಜೋಶ್ ಗೊಥೈಮರ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದರು. ಇದರ ಜತೆಗೆ ವಿಮಾನದ ಡೆಕ್ ಅನ್ನು ಸುರಕ್ಷಿತಗೊಳಿಸಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಆಫ್-ಡ್ಯೂಟಿ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರ ವೀರೋಚಿತ ಕಾರ್ಯಗಳನ್ನು ಶ್ಲಾಘಿಸಿದರು.


