ಫ್ಲೈದುಬೈ ವಿಮಾನವನ್ನು ಅಪಹರಿಸಿ ಇಸ್ರೇಲ್‌ನಲ್ಲಿ 9/11 ಮಾದರಿಯ ದಾಳಿ ನಡೆಸಲು ಒಮಾನಿ ಮೂಲದ ಪೈಲಟ್‌ ಹಮಾನ್‌ ಅಲ್‌ ಹಮಾಮಿ ಸಂಚು ರೂಪಿಸಿದ್ದನು. ಆದರೆ ಭಾರತೀಯ ಪೈಲಟ್ ಸ್ಮಿತ್‌ ಮಚ್ಛರ್ ಅವರ ಸಾಹಸದಿಂದಾಗಿ ಈ ಬೃಹತ್ ವಿಮಾನ ಪತನದ ಯೋಜನೆ ವಿಫಲವಾಯಿತು.

ನವದೆಹಲಿ: ಫ್ಲೈದುಬೈ ವಿಮಾನ ಹೈಜಾಕ್‌ಗೆ ಯತ್ನಿಸಿದ್ದ ಒಮಾನಿ ಮೂಲದ ಪೈಲಟ್‌ ಹಮಾನ್‌ ಅಲ್‌ ಹಮಾಮಿ, ‘ವಿಮಾನವನ್ನು ಅಪಹರಿಸಿ ಅದನ್ನು ಇಸ್ರೇಲ್‌ನ ಬೆನ್‌ ಗುರಿಯಾನ್‌ ವಿಮಾನ ನಿಲ್ದಾಣ ಇಲ್ಲವೇ ಅದಕ್ಕೆ ಹೊಂದಿಕೊಂಡಿರುವ ಇಸ್ರೇಲಿ ಸೇನೆಯ ಮುಖ್ಯ ಕಚೇರಿಗೆ ಡಿಕ್ಕಿ ಹೊಡೆಸುವ ಮೂಲಕ 2001ರಲ್ಲಿ ಅಲ್‌ಖೈದಾ ಉಗ್ರರ ಅಮೆರಿಕದಲ್ಲಿ ನಡೆಸಿದ 9/11 ರೀತಿಯ ದಾಳಿಗೆ ಸಂಚು ರೂಪಿಸಿದ್ದ. ಆದರೆ ಇದು ಫಲ ಕೊಡುವ ಸಾಧ್ಯತೆ ಇಲ್ಲ ಎನ್ನುವ ಕಾರಣಕ್ಕೆ ಸೌದಿ ಅರೇಬಿಯಾ ಮರುಭೂಮಿಯಲ್ಲಿ ವಿಮಾನ ಪತನಕ್ಕೆ ಮುಂದಾಗಿದ್ದ. ಆದರೆ ಭಾರತೀಯ ಪೈಲಟ್ ಸ್ಮಿತ್‌ ಮಚ್ಛರ್ ಅವರ ಸಾಹಸದ ಕಾರಣ ಆತನ ಎಲ್ಲಾ ಯತ್ನಗಳು ಕೈಕೊಟ್ಟವು ಎಂದು ವರದಿಗಳು ತಿಳಿಸಿವೆ.

ದಾಳಿಗೆಂದೇ ಫ್ಲೈದುಬೈ ಸೇರ್ಪಡೆ:

ವರದಿಗಳ ಪ್ರಕಾರ, ಮಾಧ್ಯಮ ವರದಿಗಳ ಪ್ರಕಾರ ಫ್ಲೈ ದುಬೈ ಸಂಸ್ಥೆಗೆ ಸೇರುವ ಮೊದಲೇ ಹಮಾಮಿ 9/11 ಮಾದರಿಯ ದಾಳಿಗೆ ಸಂಚು ಸಿದ್ಧಪಡಿಸಿಕೊಂಡಿದ್ದ. ಇದಕ್ಕೆಂದೇ ಆತ ಇಸ್ರೇಲ್‌ಗೆ ತೆರಳುವ ವಿಮಾನದಲ್ಲೇ ಪೈಲಟ್‌ ಆಗಲು ಬಯಸಿದ್ದ. ಅದರಂತೆ ಫ್ಲೈದುಬೈ ಸಂಸ್ಥೆಯಲ್ಲಿ ಪೈಲಟ್‌ ಆಗಿ ಸೇರಿಕೊಂಡಿದ್ದ.

ಹೊಂಚು ಹಾಕಿ ದಾಳಿ:

ಘಟನೆ ದಿನ ಅಂದರೆ ಸೆ.30ರಂದು ಹಮಾಮಿ ಫ್ಲೈದುಬೈ ವಿಮಾನ ಜೋರ್ಡನ್‌ ವಾಯುಪ್ರದೇಶ ಪ್ರವೇಶಿಸುವವರೆಗೆ ಸುಮ್ಮನಿದ್ದ, ಈ ಮೂಲಕ ವಿಮಾನ ಇಸ್ರೇಲ್‌ ಪ್ರವೇಶಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದ. ಆ ಬಳಿಕವಷ್ಟೇ ಭಾರತೀಯ ಮೂಲದ ಸಹಪೈಲಟ್‌ ಸ್ಮಿತ್‌ ಮಚ್ಚಾನಿ ಮೇಲೆ ದಾಳಿ ನಡೆಸಿದ್ದ.

ಏರ್ಪೋರ್ಟ್‌ ಗುರಿ:

ಒಮ್ಮೆ ಕಾಕ್‌ಪಿಟ್‌ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಂತೆ ಯಾವುದೇ ಅನುಮಾನ ಬಾರದಂತೆ ಇಸ್ರೇಲ್‌ನ ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ನೆಪದಲ್ಲಿ ವಿಮಾನ ಪತನಗೊಳಿಸಿ ಸಾವಿರಾರು ಮಂದಿ ಜೀವ ಹಾನಿ ಮಾಡುವುದು ಹಮಾಮಿ ಮೂಲ ಉದ್ದೇಶ ಆಗಿತ್ತು. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ 9/11 ಮಾದರಿಯಲ್ಲಿ ಇಸ್ರೇಲ್‌ನ ಗಗನಚುಂಬಿ ಕಟ್ಟಡವೊಂದಕ್ಕೆ ವಿಮಾನವನ್ನು ಡಿಕ್ಕಿಹೊಡೆಸುವ ಪ್ಲ್ಯಾನ್‌ ಕೂಡ ಆತನ ಬಳಿ ಇತ್ತು.

2 ಸ್ಕೀಂ ವಿಫಲ:

ಆದರೆ ಇಸ್ರೇಲ್‌ ಏರ್‌ಪೋರ್ಟ್‌ ಮೇಲೆ ದಾಳಿ ಸಾಧ್ಯವಿಲ್ಲ ಎಂದು ಖಚಿತವಾದ ಕೂಡಲೇ ಆತ ಸೌದಿ ಅರೇಬಿಯಾದ ಮರುಭೂಮಿ ಮೇಲೆ ವಿಮಾನ ಅಪ್ಪಳಿಸಲು ಹೊಸ ಪ್ಲ್ಯಾನ್‌ ರೂಪಿಸಿದ್ದ. ಅದಕ್ಕೆಂದೇ ವಿಮಾನದ ಆಟೋಪೈಲಟ್‌ ಮೋಡ್‌ ಆಫ್‌ ಮಾಡಿ, ಮುಖ್ಯ ಪೈಲಟ್ ಸ್ಮಿತ್‌ ಮೇಲೆ ಹಲ್ಲೆ ನಡೆಸಿದ್ದ. ಪರಿಣಾಮ ವಿಮಾನ ಏಕಾಏಕಿ 17000 ಅಡಿಗಳಷ್ಟು ಕುಸಿತ ಕಂಡಿತ್ತು. ಆದರೆ ಈ ಹಂತದಲ್ಲೂ ಪೈಲಟ್‌ ಸ್ಮಿತ್‌ ವೀರಾವೇಶದಿಂದ ಹೋರಾಡಿ ಕಾಕ್‌ಪಿಟ್‌ ಬಾಗಿಲು ತೆರೆದು, ಹೊರಗಿದ್ದ ಪ್ರಯಾಣಿಕರು ಒಳಗೆ ಬರುವಂತೆ ಮಾಡಿದ್ದ ಕಾರಣ ಆತನ ಎಲ್ಲಾ ಯೋಜನೆಗಳು ಕೈಕೊಟ್ಟವು ಎಂದು ವರದಿಗಳು ತಿಳಿಸಿವೆ.

ಜುಲೈನಲ್ಲೂ ಯತ್ನ:

ಕಳೆದ ಜುಲೈ ತಿಂಗಳಲ್ಲೇ ಹಮಾಮಿ 9/11 ಮಾದರಿಯಲ್ಲಿ ವಿಮಾನ ಪತನಕ್ಕೆ ಮುಂದಾಗಿದ್ದ. ಆದರೆ, ವಿಮಾನದ ಸಿಬ್ಬಂದಿಯೊಬ್ಬರ ಜತೆಗಿನ ಗೆಳೆತನದಿಂದಾಗಿ ಅದು ವಿಫಲವಾಗಿತ್ತು. ಆ ವಿಮಾನದಲ್ಲಿ ಆತ್ಮೀಯ ಸಿಬ್ಬಂದಿಯೂ ಇದ್ದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ತನ್ನ ಯೋಜನೆ ಕೈಬಿಟ್ಟಿದ್ದ.