ದುಬೈನಿಂದ ಟೆಲ್‌ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ನಡುವೆ ಹಿಂಸಾತ್ಮಕ ವಾಗ್ವಾದ ನಡೆದು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವನ್ನು ಹೈಜಾಕ್ ಮಾಡುವ ಯತ್ನವನ್ನು ಪ್ರಯಾಣಿಕರು ಮತ್ತು ಸಿಬ್ಬಂದಿ ವಿಫಲಗೊಳಿಸಿ 180 ಜೀವಗಳನ್ನು ಉಳಿಸಿದ್ದಾರೆ.

ದುಬೈನಿಂದ 180 ಪ್ರಯಾಣಿರನ್ನ ಹೊತ್ತು ಇಸ್ರೇಲ್‌ನ ಟೆಲ್‌ ಅವೀವ್‌ನತ್ತ ಹೊರಟ್ಟಿದ್ದ ಫ್ಲೈದುಬೈ(Flydubai airlines) ವಿಮಾನವು ಮಾರ್ಗ ಮಧ್ಯೆ ಪೈಲಟ್‌ಗಳ ನಡುವಿನ ಹಿಂಸಾತ್ಮಕ ವಾಗ್ವಾದದಿಂದಾಗಿ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಈಗ ಘಟನೆಯಿಂದಾಗಿ ವಿಮಾನ ಹೈಜಾಕ್ ಯತ್ನ ನಡೆದಿರುವ ಸಾಧ್ಯತೆಯಿಂದ ಇಸ್ರೇಲ್ ಅಷ್ಟೇ ಅಲ್ಲದೆ ಜಾಗತಿಕವಾಗಿ ಆತಂಕ ಹೆಚ್ಚಿಸಿತ್ತು.

ಫ್ಲೈದುಬೈ FZ1073 ನಂಬರಿನ ವಿಮಾನವು ಮಾರ್ಗ ಮಧ್ಯೆ ಹೈಜಾಕ್ ಆಗುವ ಸಾಧ್ಯತೆ ಬಗ್ಗೆ ಕೋಡ್‌ ಮೂಲಕ ತುರ್ತು ಸಂದೇಶ ಕಳಿಸತೊಡಗಿತು. ಇದರಿಂದ ವಿಮಾನದಲ್ಲಿದ್ದ 180 ಪ್ರಯಾಣಿಕರ ಪೈಕಿ ಬಹುತೇಕರು ಇಸ್ರೇಲಿಗರು ಆಗಿದ್ದರಿಂದ ಆತಂಕ ಹೆಚ್ಚಾಗಿತ್ತು. ಪ್ರಯಾಣಿಕರು ಮಕ್ಕಳು ಚೀರಾಟ ಆತಂಕ ಹೆಚ್ಚಿಸಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತವಾಗಂತೆ ದುಬೈ ಏರ್‌ಪೋರ್ಟ್‌ಗೆ ಲ್ಯಾಂಡ್ ಮಾಡುವಲ್ಲಿ ಪೈಲಟ್ ಯಶಸ್ವಿಯಾದರು. ಸದ್ಯ ವಿಮಾನದಲ್ಲಿ 180 ಜನರು ಸೌದಿ ಅರೇಬಿಯಾ ಸೆಕ್ಯೂರಿಟಿ ಕೊಠಡಿಯೊಳಗೆ ಸುರಕ್ಷಿತವಾಗಿದ್ದಾರೆ ಎಂದು ವರದಿ ಹೇಳಿದೆ.

ಈ ಘಟನೆ ಸಂಬಂಧ ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಪ್ರತಿಕ್ರಿಯಿಸಿದ್ದು, ಈ ಕೃತ್ಯಕ್ಕೆ ಕಾರಣರಾದ ಅಪರಾಧಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಫ್ಲೈದುಬೈ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಏನಾಯ್ತು?

ವಿಮಾನ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿದ ನಂತರ ಇಸ್ರೇಲಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು ಆದರೆ ನಂತರ ಮತ್ತೆ ತೆರೆಯಲಾಯಿತು. ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿತು. ವಿಮಾನವನ್ನು ಹೈಜಾಕ್ ಮಾಡಿ 180 ಇಸ್ರೇಲಿಗಳನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂಬುದು ಬಯಲಾಗಿದೆ. ಈ ಕೃತ್ಯ ಎಸಗಿದವರಿಗೆ ಮರಣದಂಡನೆ ವಿಧಿಸಬೇಕು. ಇದಕ್ಕೆ ಕಾರಣವಾದ ದೇಶವಾಗಲಿ, ಭಯೋತ್ಪಾದಕ ಸಂಘಟನೆಯಾಗಲಿ ಶಿಕ್ಷೆ ಆಗಲೇಬೇಕು ಎಂದು ಬೆಜಲೆಲ್ ಸ್ಮೋಟ್ರಿಚ್ ಹೇಳಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ನೆತನ್ಯಾಹು

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿರುವ ಬೆಂಜಮಿನ್ ನೆತನ್ಯಾಹು ಅವರು, ಪ್ರಯಾಣಿಕರನ್ನು ಸುರಕ್ಷಿತವಾಗಿ ಇಸ್ರೇಲ್‌ಗೆ ಮರಳಿ ಕರೆತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಆತಂಕಪಡುವ ಅಗತ್ಯವಿಲ್ಲ ಎಂದು ನೆತನ್ಯಾಹು ಕಚೇರಿ ತಿಳಿಸಿದೆ. ವಿಮಾನ ಹಾರಾಟದ ಸಮಯದಲ್ಲಿ ಇನ್ನೇನು ಇಸ್ರೇಲ್ ತಲುಪಲು ಸ್ವಲ್ಪ ಸಮಯ ಇರುವಾಗಲೇ ವಿಮಾನದೊಳಗಿನ ಒಬ್ಬ ಪೈಲಟ್ ಮೇಲೆ ಇನ್ನೊಬ್ಬ ಚಾಕುವಿನಿಂದ ಹಠಾತ್ ಹಲ್ಲೆ ನಡೆಸಿದ್ದಾನೆ. ಅಂದರೆ ವಿಮಾನದಲ್ಲಿದ್ದ ಅಷ್ಟು ಇಸ್ರೇಲಿಗರನ್ನು ಹೊತ್ತೊಯ್ದು ವಿಮಾನ ಪತನಗೊಳಿಸಬೇಕು ಎಂದು ಅವನು ಪ್ರಯತ್ನಿಸಿದಂತೆ ಕಾಣುತ್ತಿದೆ ಎಂದು ನೆತನ್ಯಾಹು ಸಂದೇಹ ವ್ಯಕ್ತಪಡಿಸಿದ್ದಾರೆ.

ನಾನು ಒಬ್ಬ ಇಸ್ರೇಲಿ ಪ್ರಯಾಣಿಕನೊಂದಿಗೆ ಮಾತನಾಡಿದೆ. ವಿಮಾನ ವೇಗವಾಗಿ ತಿರುಗಲು, ಇಳಿಯಲು ಪ್ರಾರಂಭಿಸಿತು. ಈ ವೇಳೆ ಏನಾಗುತ್ತಿದೆ ಎಂದು ಗಾಬರಿಯಿಂದ ವಿಮಾನ ಹಾರುತ್ತಿರುವಾಗಲೇ ಸೀಟಿನಿಂದ ಎದ್ದು ಹೇಗೋ ಅವನು ಮತ್ತು ಇನ್ನೊಬ್ಬ ಸಿಬ್ಬಂದಿ ಕಾಕ್‌ಪಿಟ್ ಪ್ರವೇಶಿಸಿದರು. ಈ ವೇಳೆ ವಿಮಾನ ಮುಂದೆ ಸಾಗದಂತೆ ಪೈಲೆಟ್‌ ಮೇಲೆ ಹಲ್ಲೆ ನಡೆಸಿ ಅಡ್ಡಿಪಡಿಸುತ್ತಿದ್ದ ಇನ್ನೊಬ್ಬ ಪೈಲೆಟ್‌ನನ್ನು ಗಮನಿಸಿದರು. ಬಳಿಕ ಆ ಭಯೋತ್ಪಾದಕ ಪೈಲಟ್‌ನನ್ನು ಎಲ್ಲರೂ ಒಟ್ಟಾಗಿ ಸೇರಿ ಸೋಲಿಸಿದರು. ನಂತರ ಇನ್ನೊಬ್ಬ ಸಿಬ್ಬಂದಿ ಕಾಕ್‌ಪಿಟ್‌ನಲ್ಲಿ ಕುಳಿತು ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಶಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು ಎಂದು ನೆತನ್ಯಾಹು ವಿಮಾನದೊಳಗೆ ನಡೆದ ಘಟನೆ ವಿವರಿಸಿದರು.

ಅಸಾಧಾರ ಧೈರ್ಯ ಪ್ರದರ್ಶಿಸಿದ ವೀರರ ಬಗ್ಗೆ ನೆತನ್ಯಾಹು ಮೆಚ್ಚುಗೆ

ಇಂಥ ಕಠಿಣ ಸಂದರ್ಭದಲ್ಲಿ ಎದೆಗುಂದದೆ ಕಾಕ್‌ಪಿಟ್‌ಗೆ ಪ್ರವೇಶಿಸಿ ಆತಂಕವಾದಿಯನ್ನ ಸೋಲಿಸಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಮಾಡುವ ಮೂಲಕ ನೂರಾರು ಜೀವಗಳನ್ನು ಉಳಿಸಿದ್ದಾರೆ. ಅವರ ಅಸಾಧಾರ ಧೈರ್ಯ ತೋರಿದ ವೀರರಿಗೆ ನಾನು ನಮಸ್ಕರಿಸುತ್ತೇನೆ. ಆ ವೀರರಿಂದ ಇಂದು ದೊಡ್ಡ ದುರಂತವೊಂದು ತಪ್ಪಿದೆ. ಸದ್ಯ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಾಕುವಿನಿಂದ ದಾಳಿ ಮಾಡಿದ ಪೈಲಟ್‌ನನ್ನು ಬಂಧಿಸಲಾಗಿದ್ದು, ಸೌದಿ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ನಿರಂತರ ಸಂಪರ್ಕದಲ್ಲಿದ್ದೇವೆ. ಭವಿಷ್ಯದ ಬೆದರಿಕೆಗಳಿಗೆ ಸಿದ್ಧರಾಗಿರುವಂತೆ ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ರಕ್ತಾಸಿಕ್ತವಾಗಿತ್ತು ಕಾಕ್‌ಪಿಟ್!

ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪ್ರಯಾಣಿಕರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಕೆಲವು ಇಸ್ರೇಲಿ ಪ್ರಯಾಣಿಕರು ದಾಳಿಕೋರನನ್ನು ಹಿಡಿಯಲು ಸಿಬ್ಬಂದಿಗೆ ಸಹಾಯ ಮಾಡಿದರು. ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮಿರಿಯಮ್ ಚಾನೆಲ್ 15 ಗೆ ತಿಳಿಸಿದ್ದು, ಹಾರಾಟದ ಸಮಯದಲ್ಲಿ ಪ್ರಯಾಣಿಕರು ಕಿರುಚಾಡಿದಿರು. ಕಾಕ್‌ಪಿಟ್ ಬಾಗಿಲು ತೆರೆದಾಗ ಒಳಗೆ ರಕ್ತ ಕಂಡು ಮತ್ತಷ್ಟು ಆತಂಕಗೊಂಡರು. ಒಬ್ಬ ಪೈಲಟ್‌ಗೆ ಫೋಲ್ಡ್ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು ಎಂದು ವರದಿ ಮಾಡಿದೆ.

ಇದರ ಬಳಿಕವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಒಂದು ಹಂತದಲ್ಲಿ ಪ್ರಯಾಣಿಕರು ಬದುಕುಳಿಯುವುದಿಲ್ಲ ಎಂದು ಭಾವಿಸಿದ್ದರು ಎಂದು ಮಿರಿಯಮ್ ಹೇಳಿದ್ದಾರೆ. ವಿಮಾನ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನ FZ 1073 (ಬೋಯಿಂಗ್ 737 ಮ್ಯಾಕ್ಸ್ 8), ಮೊದಲು ಅಂತರರಾಷ್ಟ್ರೀಯ ತುರ್ತು ಸಂಕೇತವಾದ 7700 ರ ಸ್ಕ್ವಾಕ್ ಕೋಡ್ ಅನ್ನು ಕಳುಹಿಸಿತು. ಸ್ವಲ್ಪ ಸಮಯದ ನಂತರ, ಅದು 7500 ಕೋಡ್ ಅನ್ನು ಕಳುಹಿಸಿತು, ಇದು ವಿಮಾನದಲ್ಲಿ ಕಾನೂನುಬಾಹಿರ ಹಸ್ತಕ್ಷೇಪವನ್ನು ಸೂಚಿಸುತ್ತದೆ ಇದರಲ್ಲಿ ಸಂಭವನೀಯ ಅಪಹರಣವೂ ಸೇರಿದೆ ಹೀಗಾಗಿ ತುರ್ತು ಸಂದೇಶ ಬರುತ್ತಿದ್ದಂತೆ ಆತಂಕ ಹೆಚ್ಚಿಸಿತ್ತು.

ವಿಮಾನದಲ್ಲಿ ಏನಾಯಿತು ಎಂಬುದನ್ನು ಸಿಗ್ನಲ್ ಮಾತ್ರ ಬಹಿರಂಗಪಡಿಸುವುದಿಲ್ಲ. ವಿಮಾನದಲ್ಲಿ ಸುಮಾರು 180 ಇಸ್ರೇಲಿ ಪ್ರಯಾಣಿಕರಿದ್ದರು. ಸಿಎನ್‌ಎನ್ ವರದಿಯ ಪ್ರಕಾರ, ಪೂರ್ವ ಸಮಯ (ET) ಸುಮಾರು 1:20AM ಸಮಯದಲ್ಲಿ ವಿಮಾನದ ಎತ್ತರವು 34000 ಅಡಿಗಳಿಂದ ಸುಮಾರು 16600 ಅಡಿಗಳಿಗೆ ಅಥವಾ ಸುಮಾರು 17400 ಅಡಿಗಳಿಗೆ ಇಳಿಯಿತು, ನಂತರ ತುರ್ತು ಸಂಕೇತವನ್ನು ನೀಡಲಾಯಿತು. ವಿಮಾನದಿಂದ ಮೊದಲ ತುರ್ತು ಸಂಕೇತವನ್ನು ET ಬೆಳಿಗ್ಗೆ 1:32 ಕ್ಕೆ ಕಳುಹಿಸಲಾಯಿತು ಎಂದು ವರದಿ ಮಾಡಿದೆ.