ದುಬೈ(ಮೇ.11): ಸ್ವತಃ ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಭಾರತ, ವೈದ್ಯ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿರುವ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ಕ್ಕೆ 88 ನರ್ಸ್‌ಗಳನ್ನು ರವಾನಿಸುವ ಮೂಲಕ ಮಾನವೀಯತೆ ಮೆರೆದಿದೆ. ಭಾರತ ಈಗಾಗಲೇ 120ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧ, ಔಷಧ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದ, ಭಾರತದ ಈ ಹೊಸ ನಡೆ, ಕೊಲ್ಲಿ ದೇಶಗಳ ಜೊತೆಗಿನ ಸಂಬಂಧವನ್ನು ಇನ್ನಷ್ಟುಬಲಪಡಿಸುವಲ್ಲಿ ನೆರವಾಗಲಿದೆ ಎನ್ನಲಾಗಿದೆ.

ಐದೇ ನಗರಗಳಲ್ಲಿ ದೇಶದ ಅರ್ಧದಷ್ಟು ಸೋಂಕಿತರು!

ಆಸ್ಟರ್‌ ಡಿಎಂ ಹೆಲ್ತ್‌ಕೇರ್‌ ಆಸ್ಪತ್ರೆಯ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 88 ನರ್ಸ್‌ಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಶನಿವಾರ ದುಬೈಗೆ ಕಳುಹಿಸಲಾಗಿದೆ. ಈ ನರ್ಸ್‌ಗಳು 14 ದಿನ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಬಳಿಕ ಅವರನ್ನು ಯುಎಇ ಸರ್ಕಾರ ಅಗತ್ಯವಿರುವೆಡೆಗೆ ನಿಯೋಜನೆ ಮಾಡಲಿದೆ.

ಯುಎಇಯಲ್ಲಿ 17 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಸಾಕಷ್ಟುಸಂಖ್ಯೆಯ ನರ್ಸ್‌ಗಳು ರಜೆಗೆಂದು ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ರೋಗಿಗಳ ಶುಶ್ರೂಷೆಗೆ ವೈದ್ಯಕೀಯ ಸಿಬ್ಬಂದಿಯನ್ನು ರವಾನಿಸುವಂತೆ ಯುಎಇ ಸರ್ಕಾರ ಭಾರತಕ್ಕೆ ಇತ್ತೀಚೆಗೆ ಮೊರೆ ಇಟ್ಟಿತ್ತು.

ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್‌ಡೌನ್‌, ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್‌!

ನರ್ಸ್‌ಗಳ ರವಾನೆಯ ಕ್ರಮದಿಂದ ಉಭಯ ದೇಶಗಳ ನಡುವಣ ದೀರ್ಘಾವಧಿ ಸಂಬಂಧ ಮತ್ತಷ್ಟುಬಲಗೊಳ್ಳಲಿದೆ ಎಂದು ಯುಎಇಯಲ್ಲಿನ ಭಾರತದ ರಾಯಭಾರಿ ಪವನ್‌ ಕಪೂರ್‌ ತಿಳಿಸಿದ್ದಾರೆ.