ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿರುವ ಫಿನ್ಲೆಂಡ್‌ನ ಪ್ರಧಾನಿ ಸನ್ನಾ ಮರಿನ್‌, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 19 ವರ್ಷಗಳ ದಾಂಪತ್ಯ ಜೀವನವನ್ನು ಕೊನೆ ಮಾಡುತ್ತಿರುವುದಾಗಿ ಮರಿನ್‌ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನವದೆಹಲಿ (ಮೇ.11): ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಫಿನ್ಲೆಂಡ್‌ ದೇಶದ ಪ್ರಧಾನಿ ಸನ್ನಾ ಮರಿನ್‌, ಅಧಿಕಾರವನ್ನು ತೊರೆಯಲು ಸಜ್ಜಾಗಿದ್ದಾರೆ. ಅದರ ಬೆನ್ನಲ್ಲಿಯೇ ಅವರ ವೈಯಕ್ತಿಕ ಜೀವನದಲ್ಲಿಯೂ ಕೂಡ ಬಿರುಗಾಳಿ ಎದ್ದಿದ್ದು, ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಬುಧವಾರ ಘೋಷಣೆ ಮಾಡಿದ್ದಾರೆ. "ನಾವು ಒಟ್ಟಿಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ನಾವು 19 ವರ್ಷಗಳ ಕಾಲ ಒಟ್ಟಿಗೆ ಇರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ" ಎಂದು ಮರಿನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ. ತನ್ನ ಸ್ವಂತ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿರುವ ಸನ್ನಾ ಮರಿನ್‌, ವಿಚ್ಛೇದನವಾದರೂ ಪತಿ ಮಾರ್ಕಸ್ ರೈಕೊನೆನ್ ನನಗೆ ಉತ್ತಮ ಸ್ನೇಹಿತರಾಗಿ ಇರುತ್ತಾರೆ ಎಂದು ಹೇಳಿದ್ದಾರೆ. ಸನ್ನಾ ಮರಿನ್‌ ಹಾಗೂ ರೈಕೊನೆನ್‌ ಜೋಡಿಗೆ ಐದು ವರ್ಷದ ಮಗಳಿದ್ದು, "ನಾವು ಕುಟುಂಬವಾಗಿ ಒಟ್ಟಿಗೆ ಸಮಯ ಕಳೆಯುವುದನ್ನು ಮುಂದುವರಿಸುತ್ತೇವೆ" ಎಂದು ಮರಿನ್ ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ, ಮರಿನ್‌ರ ಸೋಶಿಯಲ್ ಡೆಮೋಕ್ರಾಟ್‌ ಪಕ್ಷ 200 ಸದಸ್ಯರ ಸಂಸತ್ತಿನಲ್ಲಿ 43 ಸ್ಥಾನಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇನ್ನು ಸಂಪ್ರದಾಯವಾದಿ ರಾಷ್ಟ್ರೀಯ ಒಕ್ಕೂಟವು 48 ಸ್ಥಾನಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಲಸೆ ವಿರೋಧಿಯಾಗಿರುವ ಫಿನ್ಸ್ ಪಕ್ಷವು 46 ಸ್ಥಾನಗಳನ್ನು ಗಳಿಸಿದೆ. ರಾಷ್ಟ್ರೀಯ ಒಕ್ಕೂಟವು ಪ್ರಸ್ತುತ ಫಿನ್ಸ್ ಪಾರ್ಟಿಯೊಂದಿಗೆ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿದೆ. 37 ವರ್ಷ ವಯಸ್ಸಿನ ಮರಿನ್ 2019 ರಲ್ಲಿ ವಿಶ್ವದ ಅತ್ಯಂತ ಕಿರಿಯ ಚುನಾಯಿತ ಸರ್ಕಾರದ ಮುಖ್ಯಸ್ಥರಾದರು, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಐದು ಮಹಿಳಾ ಪಕ್ಷದ ನಾಯಕರೊಂದಿಗೆ ಕೇಂದ್ರ-ಎಡ ಒಕ್ಕೂಟವನ್ನು ನಡೆಸುತ್ತಿದ್ದಾರೆ.

ತನ್ನ ದೇಶವನ್ನು ನ್ಯಾಟೋಗೆ ಸೇರ್ಪಡೆ ಮಾಡುವುದರಿಂದ ಹಿಡಿದು ಎಣ್ಣೆ ಪಾರ್ಟಿ ಮಾಡುವ ಮೂಲಕ ಸುದ್ದಿಯಾಗಿದ್ದು, ಸನ್ನಾ ಮರಿನ್ ದಶಕಗಳಲ್ಲಿ ಫಿನ್‌ಲ್ಯಾಂಡ್‌ನ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯಾಗಿದ್ದರು ಆದರೆ ಅದೇನೇ ಇದ್ದರೂ ಧ್ರುವೀಕರಣದ ವ್ಯಕ್ತಿಯಾಗಿಯೇ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮರಿನ್‌ ಅವರ ಜನಪ್ರಿಯತೆಯು ಉತ್ತುಂಗಕ್ಕೇರಿತು, ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಶ್ರೇಷ್ಠ ನಾಯಕಿ ಎನ್ನುವ ಖ್ಯಾತಿಯನ್ನೂ ಗಳಿಸಿದ್ದರು. ಆದರೆ, ಅಷ್ಟೇ ಶೀಘ್ರದಲ್ಲಿ ಆಕೆಯ ಪ್ರಖ್ಯಾತಿ ಇಳಿದುಹೋಯಿತು. ಆಕೆಯ ವೈಯಕ್ತಿಕ ಜೀವನ ದಿನಪತ್ರಿಕೆಗಳಲ್ಲಿ ಸುದ್ದಿಯಾದವು.

ಆಗಸ್ಟ್ 2022 ರಲ್ಲಿ, ಫಿನ್ನಿಷ್ ಸೆಲೆಬ್ರಿಟಿಗಳ ಗುಂಪಿನೊಂದಿಗೆ ಮರಿನ್ ಪಾರ್ಟಿ ಮಾಡಿದ ಸೋಶಿಯಲ್ ಮೀಡಿಯಾದ ವೀಡಿಯೊಗಳು ಸೋರಿಕೆಯಾದವು ಪ್ರಪಂಚದಾದ್ಯಂತ ಇದು ಸುದ್ದಿಯಾಗಿದ್ದವು. ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿದರೂ, ಇದನ್ನು ಸಾಬೀತು ಪಡಿಸುವ ಸಲುವಾಗಿ ಡ್ರಗ್‌ ಟೆಸ್ಟ್‌ ಅನ್ನೂ ಮಾಡಿಸಿಕೊಂಡಿದ್ದರು.

ಡ್ರಗ್ಸ್‌ ಸೇವಿಸಿರಲಿಲ್ವಂತೆ ಫಿನ್ಲೆಂಡ್‌ ಪ್ರಧಾನಿ: ಪರೀಕ್ಷೆಯಲ್ಲಿ ಸಾಬೀತು..!

ಕೆಲವರು ಆಕೆಯ ಖಾಸಗಿ ಜೀವನದ ಹಕ್ಕನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಇಂಥ ಹಗರಣಗಳು ಅವರ ಕಚೇರಿಗೆ ಸರಿಹೊಂದುವುದಿಲ್ಲ ಮತ್ತು ಅವರ ಅನನುಭವದ ಸಾಕ್ಷಿಯಾಗಿದೆ. ಮರಿನ್ ಅವರ ಸರ್ಕಾರವು ಔಪಚಾರಿಕವಾಗಿ ರಾಜೀನಾಮೆ ನೀಡಿದೆ ಆದರೆ ಹೊಸ ಸರ್ಕಾರ ರಚನೆ ಮತ್ತು ನೇಮಕಾತಿಯ ತನಕ ಉಸ್ತುವಾರಿ ಆಧಾರದ ಮೇಲೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ.

ಫಿನ್ಲೆಂಡ್‌ ಪ್ರಧಾನಿ ಪಾರ್ಟಿ ವಿಡಿಯೋ ವೈರಲ್‌: ಡ್ರಗ್ಸ್ ತೆಗೆದುಕೊಂಡಿದ್ದರೇ ಜಗತ್ತಿನ ಕಿರಿಯ ಪಿಎಂ..?