ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ವಾದ ನಡೆದಿದೆ. ಖನಿಜ ಒಪ್ಪಂದದ ಮಾತುಕತೆ ರದ್ದಾಗಿದ್ದು, ಝೆಲೆನ್ಸ್ಕಿ ಅಮೆರಿಕವನ್ನು ಅವಮಾನಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ವಾಷಿಂಗ್ಟನ್‌ (ಮಾ.1): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ತಡರಾತ್ರಿ ಶ್ವೇತಭವನದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ, ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಝೆಲೆನ್ಸ್ಕಿ ನಡುವೆ ನಡೆದ ಬಿಸಿ ಬಿಸಿ ಚರ್ಚೆ ವಿಶ್ವದಾದ್ಯಂತ ಸುದ್ದಿಯಾಗಿದೆ. ಝೆಲೆನ್ಸ್ಕಿ ಅಮೆರಿಕವನ್ನು ಅವಮಾನಿಸಿದ್ದಾರೆ ಎಂದು ವ್ಯಾನ್ಸ್ ಆರೋಪ ಮಾಡಿದರೆ, ಅದೇ ಸಮಯದಲ್ಲಿ, ಟ್ರಂಪ್ ಉಕ್ರೇನಿಯನ್ ಅಧ್ಯಕ್ಷರನ್ನು ಹಲವಾರು ಬಾರಿ ಖಂಡಿಸಿದರು. ಝೆಲೆನ್ಸ್ಕಿ ಮೂರನೇ ಮಹಾಯುದ್ಧಕ್ಕಾಗಿ ಜೂಜಾಡುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದರು. ಇದರ ನಂತರ, ಕೋಪಗೊಂಡ ಝೆಲೆನ್ಸ್ಕಿ ಮಾತುಕತೆಯಿಂದ ಏಕಾಏಕಿಯಾಗಿ ಹೊರನಡೆದು, ತಮ್ಮ ಕಪ್ಪು SUV ಅಲ್ಲಿ ಹೋಟೆಲ್‌ಗೆ ತೆರಳಿದರು. ಖನಿಜಗಳ ಕುರಿತು ಇಬ್ಬರು ನಾಯಕರ ನಡುವೆ ಒಪ್ಪಂದ ಮಾಡಿಕೊಳ್ಳಬೇಕಿತ್ತು, ಆದರೆ ಈ ಮಾತುಕತೆಯನ್ನು ಏಕಾಏಕಿ ರದ್ದುಗೊಳಿಸಲಾಯಿತು.

ಝೆಲೆನ್ಸ್ಕಿ ಸಿದ್ಧವಾಗಿ ಬಂದಿದ್ದಾರೆ ಎಂದ ಟ್ರಂಪ್‌: ರಾತ್ರಿ 10 ಗಂಟೆ ಸುಮಾರಿಗೆ ಟ್ರಂಪ್ ಅವರನ್ನು ಭೇಟಿ ಮಾಡಲು ಶ್ವೇತಭವನಕ್ಕೆ ಝೆಲೆನ್ಸ್ಕಿ ಆಗಮಿಸಿದಾಗ, ಟ್ರಂಪ್ ಶ್ವೇತಭವನದ ಬಾಗಿಲಿಗೆ ಬಂದು ಅವರನ್ನು ಸ್ವಾಗತಿಸಿದರು. ಇಬ್ಬರೂ ಕೈಕುಲುಕಿದರು, ನಂತರ ಟ್ರಂಪ್ ಝೆಲೆನ್ಸ್ಕಿಯ ಕಡೆಗೆ ಬೆರಳು ತೋರಿಸಿ ಮಾಧ್ಯಮಗಳಿಗೆ, 'ಅವರು ಇಂದು ಚೆನ್ನಾಗಿ ಸಿದ್ಧರಾಗಿ ಬಂದಿದ್ದಾರೆ' ಎಂದು ಹೇಳಿದರು.

ಯುದ್ಧದ ಚಿತ್ರಗಳನ್ನು ಟ್ರಂಪ್‌ ತೋರಿಸಿದ ಝೆಲೆನ್ಸ್ಕಿ: ಇಬ್ಬರೂ ಅಧ್ಯಕ್ಷರು ಶ್ವೇತಭವನದ ಓವಲ್ ಹೌಸ್ ತಲುಪಿದರು. ಇಲ್ಲಿ ಮಾಧ್ಯಮಗಳ ಮುಂದೆ ಇಬ್ಬರ ನಡುವಿನ ಸಂಭಾಷಣೆ ಪ್ರಾರಂಭವಾಯಿತು. ಟ್ರಂಪ್ ಮತ್ತು ಝೆಲೆನ್ಸ್ಕಿ ಒಟ್ಟಾಗಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಸಾಧ್ಯವಾದರೆ ಅದು ತುಂಬಾ ಒಳ್ಳೆಯದು ಎಂದು ಹೇಳಿದರು. ಝೆಲೆನ್ಸ್ಕಿ ಟ್ರಂಪ್ ಅವರಿಗೆ ಯುದ್ಧದ ಚಿತ್ರಗಳನ್ನು ತೋರಿಸಿದರು.

ಶಾಂತಿ ಒಪ್ಪಂದದಲ್ಲಿ ಪುಟಿನ್ ಜೊತೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದ ಝೆಲೆನ್ಸ್ಕಿ: ಟ್ರಂಪ್ ಜೊತೆಗಿನ ಮಾತುಕತೆ ಸಮಯದಲ್ಲಿ, ಝೆಲೆನ್ಸ್ಕಿ, 'ಶಾಂತಿ ಒಪ್ಪಂದದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ಯಾವುದೇ ರಾಜಿ ಮಾಡಿಕೊಳ್ಳಬಾರದು' ಎಂದು ಹೇಳಿದರು.

ಇದರ ಬಗ್ಗೆ ಟ್ರಂಪ್, 'ಈ ಯುದ್ಧವು ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ಹೆಚ್ಚಿನ ಪಡೆಗಳನ್ನು ಕಳುಹಿಸಬೇಕಾಗಿಲ್ಲ ಎಂದು ಭಾವಿಸುತ್ತೇವೆ. ಖನಿಜ ಒಪ್ಪಂದವನ್ನು ನಾನು ಪ್ರಶಂಸಿಸುತ್ತೇನೆ, ಏಕೆಂದರೆ ನಮಗೆ ಅದು ಅಗತ್ಯವಾಗಿತ್ತು. ನಮ್ಮ ದೇಶವನ್ನು ಈಗ ನ್ಯಾಯಯುತವಾಗಿ ನಡೆಸಿಕೊಳ್ಳಲಾಗುತ್ತಿದೆ' ಎಂದರು.

'ನಾನು ರಷ್ಯಾ ಮತ್ತು ಉಕ್ರೇನ್ ಎರಡರೊಂದಿಗೂ ಸಮನ್ವಯ ಸಾಧಿಸದಿದ್ದರೆ, ಯಾವುದೇ ಒಪ್ಪಂದ ಸಾಧ್ಯವಾಗುತ್ತಿರಲಿಲ್ಲ. ನಾನು ಪುಟಿನ್ ಜೊತೆಗಿಲ್ಲ ಅಥವಾ ಬೇರೆ ಯಾರೊಂದಿಗೂ ಇಲ್ಲ. ನಾನು ಅಮೆರಿಕದ ಜೊತೆ ಮಾತ್ರ'

ಟ್ರಂಪ್ ಮತ್ತು ಝೆಲೆನ್ಸ್ಕಿ ಸುಮಾರು 30 ನಿಮಿಷಗಳ ಕಾಲ ಉತ್ತಮ ಮಾತುಕತೆ ನಡೆಸಿದರು. ಆದರೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಂಭಾಷಣೆಗೆ ಅಡ್ಡಿಪಡಿಸಿದಾಗ ಅದು ವಾದಕ್ಕೆ ತಿರುಗಿತು.

ವಾನ್ಸ್‌ (JD Vance): ಉಕ್ರೇನ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಯ ಹಾದಿಯು ರಾಜತಾಂತ್ರಿಕತೆಯ ಮೂಲಕ ಇರುತ್ತದೆ. ಅಧ್ಯಕ್ಷ ಟ್ರಂಪ್ ಮಾಡುತ್ತಿರುವುದು ಇದನ್ನೇ. ನಿಮ್ಮ ವರ್ತನೆ ತುಂಬಾ ಅಗೌರವದಿಂದ ಕೂಡಿದೆ. ಇದು ಸರಿಯಾದ ರಾಜತಾಂತ್ರಿಕತೆಯಲ್ಲ. ಈ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನೀವು ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಹೇಳಬೇಕು...

ಝೆಲೆನ್ಸ್ಕಿ (ವಾನ್ಸ್‌ಗೆ ಪ್ರತಿಕ್ರಿಯೆ ನೀಡುತ್ತಾ): 2014 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗ, ಹಲವಾರು ಮಾತುಕತೆಗಳು ನಡೆದವು. 2019 ರಲ್ಲಿ, ನಾನು ಒಂದು ಒಪ್ಪಂದಕ್ಕೆ ಸಹಿ ಹಾಕಿದೆ, ಮತ್ತು ಕದನ ವಿರಾಮವನ್ನು ಜಾರಿಗೆ ತರಲಾಗುವುದು ಎಂದು ನನಗೆ ಭರವಸೆ ನೀಡಲಾಯಿತು. ಎರಡೂ ಕಡೆಯ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತು. ಆದರೆ ಪುಟಿನ್ ಈ ಒಪ್ಪಂದವನ್ನು ಮುರಿದು 2022 ರಲ್ಲಿ ದೊಡ್ಡ ದಾಳಿಯನ್ನು ಪ್ರಾರಂಭಿಸಿದರು.

ಝೆಲೆನ್ಸ್ಕಿ (ವಾನ್ಸ್‌ರತ್ತ ನೋಡುತ್ತಾ): ಇದು ಯಾವ ರೀತಿಯ ರಾಜತಾಂತ್ರಿಕತೆ, ಜೆ.ಡಿ. ವ್ಯಾನ್ಸ್? ಅದರ ಅರ್ಥವೇನು?

ವಾನ್ಸ್: ನಿಮ್ಮ ದೇಶಕ್ಕೆ ಆಗುತ್ತಿರುವ ವಿನಾಶವನ್ನು ನಿಲ್ಲಿಸುವ ರಾಜತಾಂತ್ರಿಕತೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ.


ವಾನ್ಸ್: ಓವಲ್ ಕಚೇರಿಗೆ ಬಂದು ಅಮೇರಿಕನ್ ಮಾಧ್ಯಮಗಳ ಮುಂದೆ ಇದನ್ನು ಪ್ರಸ್ತಾಪಿಸುವುದು ನಿಮ್ಮ ನಾಚಿಕೆಗೇಡಿನ ವರ್ತನೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಬಳಿ ಅಗತ್ಯ ಸೇನೆ ಇಲ್ಲದ ಕಾರಣ ನೀವು ಗಡಿಯಲ್ಲಿ ದುರ್ಬಲರಾಗಿದ್ದೀರಿ. ಯುದ್ಧದಲ್ಲಿ ನಿಮಗೆ ಸಹಾಯ ಮಾಡಿದ್ದಕ್ಕಾಗಿ ನೀವು ಅಧ್ಯಕ್ಷ ಟ್ರಂಪ್‌ಗೆ ಧನ್ಯವಾದ ಹೇಳಬೇಕು.

ಝೆಲೆನ್ಸ್ಕಿ (ವಾನ್ಸ್‌ಗೆ ಅಡ್ಡಿಪಡಿಸುತ್ತಾ): ನೀವು ಉಕ್ರೇನ್‌ಗೆ ಹೋಗಿದ್ದೀರಾ, ಅಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನೀವು ಎಂದಾದರೂ ನೋಡಿದ್ದೀರಾ? ನೀವು ಒಮ್ಮೆ ಬಂದು ನೋಡಬೇಕು...

ವಾನ್ಸ್: ನಾನು ಅದರ ಬಗ್ಗೆ ಓದಿದ್ದೇನೆ ಮತ್ತು ನೋಡಿದ್ದೇನೆ. ಆದರೆ ನಿಮ್ಮ ದೇಶದ ವಿನಾಶವನ್ನು ತಡೆಯಲು ಬಯಸುವ ದೇಶದ ಆಡಳಿತಕ್ಕೆ ಅಗೌರವ ತೋರಿಸುವುದು ಸರಿ ಎಂದು ನೀವು ಭಾವಿಸುತ್ತೀರಾ?

ಝೆಲೆನ್ಸ್ಕಿ: ನೀವು ಯುದ್ಧದಲ್ಲಿರುವಾಗ, ಎಲ್ಲರಿಗೂ ಸಮಸ್ಯೆಗಳಿರುತ್ತವೆ. ಭವಿಷ್ಯದಲ್ಲಿ, ಈ ಯುದ್ಧವು ಅಮೆರಿಕದ ಮೇಲೂ ಪರಿಣಾಮ ಬೀರುತ್ತದೆ.

(ಅಮೆರಿಕದ ಮೇಲೂ ಪರಿಣಾಮ ಬೀರುತ್ತದೆ ಅನ್ನೋ ಮಾತು ಕೇಳಿ ಟ್ರಂಪ್ ಸಿಟ್ಟಿಗೆದ್ದರು ಮತ್ತು ವಾಗ್ವಾದದಲ್ಲಿ ಸೇರಿಕೊಂಡರು)


ಟ್ರಂಪ್: ನಾವು ಏನು ಅನುಭವಿಸಬೇಕು ಎಂದು ನೀವು ಹೇಳಬೇಡಿ. ನಾವು ಏನು ಅನುಭವಿಸಬೇಕು ಎಂದು ನೀವು ಹೇಳುವ ಸ್ಥಿತಿಯಲ್ಲಿಲ್ಲ.

ಝೆಲೆನ್ಸ್ಕಿ: ನಾನು ನಿಮಗೆ ಹೇಳುತ್ತಿಲ್ಲ. ನಾನು ಅವರ (ವಾನ್ಸ್) ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ...
(ಟ್ರಂಪ್ ಮತ್ತೆ ಝೆಲೆನ್ಸ್ಕಿಯನ್ನು ಮೌನಗೊಳಿಸಿದರು.)

ಟ್ರಂಪ್ (ಬೆರಳು ತೋರಿಸುತ್ತಾ): ನೀವು ನಮಗೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ನೀವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಜೂಜಾಡುತ್ತಿದ್ದೀರಿ. ನೀವು ಮೂರನೇ ಮಹಾಯುದ್ಧದ ಸಾಧ್ಯತೆಯೊಂದಿಗೆ ಜೂಜಾಡುತ್ತಿದ್ದೀರಿ. ನೀವು ಈ ದೇಶವನ್ನು ಅವಮಾನಿಸುತ್ತಿದ್ದೀರಿ.

ಝೆಲೆನ್ಸ್ಕಿ (ಮಧ್ಯಪ್ರವೇಶಿಸುತ್ತಾ): ಈ ಯುದ್ಧದ ಆರಂಭದಿಂದಲೂ ನಾವು ಒಂಟಿಯಾಗಿದ್ದೇವೆ ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ.

ಟ್ರಂಪ್ (ಕೋಪದಿಂದ): ನೀವು ಒಂಟಿಯಲ್ಲ. ನೀವು ಸಂಪೂರ್ಣವಾಗಿ ಒಂಟಿಯಲ್ಲ. ಈ ಮೂರ್ಖ ಅಧ್ಯಕ್ಷ (ಬೈಡೆನ್‌) ಮೂಲಕ ನಾವು ನಿಮಗೆ $350 ಬಿಲಿಯನ್ ನೀಡಿದ್ದೇವೆ.

ಝೆಲೆನ್ಸ್ಕಿ: ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ.

(ವ್ಯಾನ್ಸ್ ಮತ್ತೊಮ್ಮೆ ಈ ವಾಗ್ವಾದಕ್ಕೆ ಪ್ರವೇಶಿಸುತ್ತಾರೆ...)

ವ್ಯಾನ್ಸ್: ಈ ಸಭೆಯಲ್ಲಿ ನೀವು ಒಮ್ಮೆಯಾದರೂ 'ಧನ್ಯವಾದ' ಹೇಳಿದ್ದೀರಾ?

ಝೆಲೆನ್ಸ್ಕಿ: ಹೌದು, ಹಲವು ಬಾರಿ, ಇಂದಿಗೂ ಸಹ...

ವ್ಯಾನ್ಸ್: ಇಲ್ಲ, ನೀವು ಅಕ್ಟೋಬರ್‌ನಲ್ಲಿ ಪೆನ್ಸಿಲ್ವೇನಿಯಾಗೆ ಹೋಗಿ ನಮ್ಮ ಎದುರಾಳಿಯ ಪರವಾಗಿ ಪ್ರಚಾರ ಮಾಡಿದ್ದೀರಿ. ಅಮೆರಿಕ ಮತ್ತು ನಿಮ್ಮ ದೇಶವನ್ನು ಉಳಿಸಲು ಪ್ರಯತ್ನಿಸುತ್ತಿರುವ ಅಧ್ಯಕ್ಷರಿಗೆ ಸ್ವಲ್ಪ ಕೃತಜ್ಞತೆಯನ್ನು ತೋರಿಸಿ.

ಝೆಲೆನ್ಸ್ಕಿ: ನೀವು ಯುದ್ಧದ ಬಗ್ಗೆ ಜೋರಾಗಿ ಮಾತನಾಡಿದ್ದೀರಾ..

(ಟ್ರಂಪ್ ಅವರ ಮಾತನ್ನು ಅಡ್ಡಿಪಡಿಸುತ್ತಾರೆ)

ಟ್ರಂಪ್: ಅವರು (ವ್ಯಾನ್ಸ್) ಜೋರಾಗಿ ಮಾತನಾಡುತ್ತಿಲ್ಲ. ನಿಮ್ಮ ದೇಶವು ಬಹಳ ದೊಡ್ಡ ಬಿಕ್ಕಟ್ಟಿನಲ್ಲಿದೆ.

(ಝೆಲೆನ್ಸ್ಕಿ ಮಾತನಾಡಲು ಪ್ರಯತ್ನಿಸುತ್ತಾರೆ, ಆದರೆ ಟ್ರಂಪ್ ಕೈ ಬೀಸುವ ಮೂಲಕ ಅವರನ್ನು ಅಡ್ಡಿಪಡಿಸುತ್ತಾರೆ.)

ಟ್ರಂಪ್: ಇಲ್ಲ, ಇಲ್ಲ, ನೀವು ಸಾಕಷ್ಟು ಮಾತನಾಡಿದ್ದೀರಿ. ನಿಮ್ಮ ದೇಶವು ದೊಡ್ಡ ತೊಂದರೆಯಲ್ಲಿದೆ.

ಝೆಲೆನ್ಸ್ಕಿ: ನನಗೆ ಗೊತ್ತು, ನನಗೆ ಗೊತ್ತು.

ಟ್ರಂಪ್ (ಗಟ್ಟಿ ದನಿಯಲ್ಲಿ): ನೀವು ಈ ಯುದ್ಧವನ್ನು ಗೆಲ್ಲುತ್ತಿಲ್ಲ. ಆದರೆ ನಮ್ಮ ಕಾರಣದಿಂದಾಗಿ, ನೀವು ಅದರಿಂದ ಸುರಕ್ಷಿತವಾಗಿ ಹೊರಬರಲು ಉತ್ತಮ ಅವಕಾಶವಿದೆ.

ಝೆಲೆನ್ಸ್ಕಿ (ಟ್ರಂಪ್‌ ಮಾತಿಗೆ ಅಡ್ಡಿಪಡಿಸುತ್ತಾ): ಯುದ್ಧದ ಆರಂಭದಿಂದಲೂ ನಾವು ಒಂಟಿಯಾಗಿದ್ದೇವೆ...

(ಈ ನಡುವೆ, ಝೆಲೆನ್ಸ್ಕಿ ತನ್ನ ಮಾತನ್ನು ಪೂರ್ತಿ ಮಾಡಲು ಹೋಗುತ್ತಾರೆ, ಆದರೆ ಟ್ರಂಪ್ ಅವರಿಗೆ ಮಾತನಾಡಲು ಬಿಡುವುದಿಲ್ಲ.)

ಟ್ರಂಪ್: ನೀವು ಒಬ್ಬಂಟಿಯಾಗಿರಲಿಲ್ಲ. ಮೂರ್ಖ ಅಧ್ಯಕ್ಷ (ಬಿಡನ್) ಮೂಲಕ ನಾವು ನಿಮಗೆ $350 ಬಿಲಿಯನ್ ನೀಡಿದ್ದೇವೆ. ನಿಮಗೆ ಮಿಲಿಟರಿ ಉಪಕರಣಗಳನ್ನು ನೀಡಿದ್ದೇವೆ. ನಮ್ಮಲ್ಲಿ ಶಸ್ತ್ರಾಸ್ತ್ರಗಳಿಲ್ಲದಿದ್ದರೆ, ಈ ಯುದ್ಧವು ಎರಡು ವಾರಗಳಲ್ಲಿ ಕೊನೆಗೊಳ್ಳುತ್ತಿತ್ತು.

ಝೆಲೆನ್ಸ್ಕಿ: 3 ದಿನಗಳು... ಎಲ್ಲವೂ 3 ದಿನಗಳಲ್ಲಿ ಮುಗಿಯುತ್ತದೆ ಎಂದು ಪುಟಿನ್ ಹೇಳಿದ್ದರು.

ಟ್ರಂಪ್: ಇದು ಅರ್ಥವಿಲ್ಲ... ಈ ರೀತಿ ನಿಭಾಯಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ನಿಮ್ಮ ಮನೋಭಾವವನ್ನು ನೀವು ಬದಲಾಯಿಸಿಕೊಳ್ಳಬೇಕು.


(ಮಾತಿನ ಮಧ್ಯದಲ್ಲಿ ವಾನ್ಸ್ ಮತ್ತೆ ಪ್ರವೇಶಿಸುತ್ತಾರೆ.)

ವಾನ್ಸ್‌: ಅದನ್ನು ಬಿಡಿ, ಧನ್ಯವಾದ ಹೇಳಿ.

ಝೆಲೆನ್ಸ್ಕಿ: ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ.

ವಾನ್ಸ್‌: ನೀವು ಮಾಧ್ಯಮಗಳಿಗೆ ಹೀಗೆ ಮಾತನಾಡುತ್ತಿದ್ದೀರಿ, ಆದರೆ ನೀವು ತಪ್ಪು ಎಂದು ನಮಗೆ ತಿಳಿದಿದೆ.

(ಟ್ರಂಪ್ ಮತ್ತೆ ಮಾತಿನ ಮಧ್ಯ ಪ್ರವೇಶಿಸುತ್ತಾರೆ.)

ಟ್ರಂಪ್: ನೀವು ಧನ್ಯವಾದ ಹೇಳಬೇಕು. ಜನರು ಸಾಯುತ್ತಿದ್ದಾರೆ. ನೀವು ಯುದ್ಧದಲ್ಲಿ ಬಹಳ ಹಿಂದುಳಿದಿದ್ದೀರಿ. ನಾನು ಕದನ ವಿರಾಮ ಮಾಡುವುದಿಲ್ಲ ಎಂದು ನೀವು ಯಾವಾಗಲೂ ಹೇಳುತ್ತೀರಿ (ಝೆಲೆನ್ಸ್ಕಿಯನ್ನು ಅನುಕರಿಸಿ) ಆದರೆ ನೀವು ಅದನ್ನು ಮಾಡಬೇಕು.

ಟ್ರಂಪ್: ಇದೀಗ ಕದನ ವಿರಾಮ ಸಾಧ್ಯವಾದರೆ, ನಾನು ನಿಮ್ಮನ್ನು ಹಾಗೆ ಮಾಡಲು ಕೇಳುತ್ತೇನೆ, ಆದ್ದರಿಂದ ಗುಂಡುಗಳು ನಿಲ್ಲುತ್ತವೆ.

ಝೆಲೆನ್ಸ್ಕಿ (ಶಾಂತ ಸ್ವರದಲ್ಲಿ) : ಖಂಡಿತ, ನಾನು ಯುದ್ಧವನ್ನು ನಿಲ್ಲಿಸಲು ಬಯಸುತ್ತೇನೆ... ನನಗೆ ಖಾತರಿಗಳನ್ನು ಹೊಂದಿರುವ ಕದನ ವಿರಾಮ ಬೇಕು. ಕದನ ವಿರಾಮದ ಬಗ್ಗೆ ಉಕ್ರೇನ್ ಜನರು ಏನು ಯೋಚಿಸುತ್ತಾರೆ ಎಂದು ನೀವು ಕೇಳುತ್ತೀರಿ.

ಇಷ್ಟೆಲ್ಲಾ ಆದ ಬಳಿಕ ಟ್ರಂಪ್‌ ಹಾಗೂ ಝೆಲೆನ್ಸ್ಕಿ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌.

ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಬರೆದುಕೊಂಡಿದ್ದು,
'ನಾವು ಇಂದು ಶ್ವೇತಭವನದಲ್ಲಿ ಬಹಳ ಮುಖ್ಯವಾದ ಸಭೆಯನ್ನು ನಡೆಸಿದ್ದೇವೆ. ಒತ್ತಡದ ಚರ್ಚೆಯಿಲ್ಲದೆ ಎಂದಿಗೂ ಅರ್ಥವಾಗದ ವಿಷಯಗಳನ್ನು ನಾವು ಕಲಿತಿದ್ದೇವೆ. ಭಾವನೆಗಳ ನಡುವೆ ಏನೆಲ್ಲಾ ಹೊರಬರುತ್ತದೆ ಅನ್ನೋದು ಅಚ್ಚರಿ ತರುತ್ತದೆ. ಅಮೆರಿಕ ಶಾಂತಿಯನ್ನು ತರಲು ಪ್ರಯತ್ನಿಸುವುದನ್ನು ಮುಂದುವರಿಸಿದರೆ, ಅಧ್ಯಕ್ಷ ಝೆಲೆನ್ಸ್ಕಿ ಶಾಂತಿಗೆ ಸಿದ್ಧರಿರುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ಯುದ್ಧದಲ್ಲಿ ನಮ್ಮ ಭಾಗವಹಿಸುವಿಕೆಯು ಮಾತುಕತೆಗಳಲ್ಲಿ ಅವರಿಗೆ ದೊಡ್ಡ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಭಾವಿಸುತ್ತಾರೆ. ನಮಗೆ ಯಾವುದೇ ಪ್ರಯೋಜನ ಬೇಡ, ನನಗೆ ಶಾಂತಿ ಬೇಕು. ಅಮೆರಿಕದ ಗೌರವಾನ್ವಿತ ಓವಲ್ ಕಚೇರಿಯಲ್ಲಿ ಝೆಲೆನ್ಸ್ಕಿ ಅಮೆರಿಕವನ್ನು ಅವಮಾನಿಸಿದರು. ಅವರು ನಿಜವಾಗಿಯೂ ಶಾಂತಿಗೆ ಸಿದ್ಧರಾದಾಗ ಮಾತ್ರ ಅವರು ಹಿಂತಿರುಗಬಹುದು'

ಅಮೆರಿಕಕ್ಕೆ ಧನ್ಯವಾದ ಎಂದು ಬರೆದ ಝೆಲೆನ್ಸ್ಕಿ 'ಧನ್ಯವಾದಗಳು ಅಮೆರಿಕ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ಈ ಭೇಟಿಗೆ ಧನ್ಯವಾದಗಳು. ಅಮೆರಿಕ ಅಧ್ಯಕ್ಷರು, ಕಾಂಗ್ರೆಸ್ ಮತ್ತು ಅಮೇರಿಕನ್ ಜನರಿಗೆ ಧನ್ಯವಾದಗಳು. ಉಕ್ರೇನ್‌ಗೆ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಬೇಕು, ಮತ್ತು ನಾವು ಅದಕ್ಕಾಗಿ ಕೆಲಸ ಮಾಡುತ್ತಿದ್ದೇವೆ.'

ಅಮೆರಿಕ ಅಧ್ಯಕ್ಷೀಯ ಕಚೇರಿಯಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ - ಜೆಲೆನ್‌ಸ್ಕಿ ಕೂಗಾಟ!

ಖನಿಜ ಒಪ್ಪಂದಕ್ಕಾಗಿ ಅಮೆರಿಕಕ್ಕೆ ಬಂದಿದ್ದ ಝೆಲೆನ್ಸ್ಕಿ: ಝೆಲೆನ್ಸ್ಕಿ ಮತ್ತು ಟ್ರಂಪ್ ನಡುವಿನ ಈ ಸಭೆಯಲ್ಲಿ ಖನಿಜಗಳ ಕುರಿತು ಒಪ್ಪಂದ ಮಾಡಿಕೊಳ್ಳಬೇಕಿತ್ತು, ಆದರೆ ಈ ಒಪ್ಪಂದ ರದ್ದಾಗಿತ್ತು. ಉಕ್ರೇನ್ ಅಮೆರಿಕಕ್ಕೆ ಅಪರೂಪದ ಭೂಮಿಯ ವಸ್ತುಗಳನ್ನು ನೀಡಲು ಸಿದ್ಧವಾಗಿತ್ತು. ಈ ಒಪ್ಪಂದಕ್ಕೆ ಪ್ರತಿಯಾಗಿ, ಉಕ್ರೇನ್‌ನ ಮರು-ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಅಮೆರಿಕ ಹೇಳಿದೆ. ಕಳೆದ ಒಂದು ತಿಂಗಳಿನಿಂದ ಟ್ರಂಪ್ ಉಕ್ರೇನ್ ಮೇಲೆ ಅಪರೂಪದ ಖನಿಜಗಳನ್ನು ನೀಡಬೇಕೆಂದು ಒತ್ತಡ ಹೇರುತ್ತಿದ್ದರು. ಇದು ಸಂಭವಿಸದಿದ್ದರೆ ಅಮೆರಿಕದ ಹಣವನ್ನು ನಿಲ್ಲಿಸುವುದಾಗಿ ಅವರು ಬೆದರಿಕೆ ಹಾಕಿದ್ದರು.

ವಿಶ್ವದ ಅತ್ಯಂತ ಘಾತಕ Five Eyes ಗುಪ್ತಚರ ಟೀಮ್‌ನಿಂದ ಕೆನಡಾ ಹೊರಹಾಕಲು ಡೊನಾಲ್ಡ್‌ ಟ್ರಂಪ್‌ ಪ್ಲ್ಯಾನ್‌

ವೈಟ್‌ಹೌಸ್‌ ವಾಕ್ಸಮರ.. ಓವಲ್‌ ಹೌಸ್‌ನಲ್ಲಿ ಅಧ್ಯಕ್ಷರ ರಂಪಾಟ! | Donald Trump VS Volodymyr Zelenskyy