ಭಾರತದ ಸಂಸತ್ತಿನಲ್ಲಿ ಕ್ಯಾನ್‌ಸ್ಮೋಕ್‌ ಬಳಸಿದ ದಿನವೇ  ಪೊಲೆಂಡ್‌ ಸಂಸತ್ತಿನೊಳಗೆ ಫೈರ್‌ ಎಸ್ಟಿಂಗ್ವಿಷರ್‌ ಪ್ರಯೋಗಿಸಿದ ಸಂಸದ. ಯಹೂದಿಗಳ ಆಚರಣೆಗೆ ಆಕ್ಷೇಪಣೆ ಮಾಡಲು ಕೃತ್ಯ. 

ವಾರ್ಸಾ: ಭಾರತದ ಸಂಸತ್ತಿನಲ್ಲಿ ಕ್ಯಾನ್‌ಸ್ಮೋಕ್‌ ಬಳಸಿದ ದಿನವೇ ಅತ್ತ ಪೋಲೆಂಡ್‌ ಸಂಸತ್‌ನಲ್ಲೂ ಅಂಥದ್ದೇ ಘಟನೆ ನಡೆದಿದೆ. ಯೂಹೂದಿಗಳ ಧಾರ್ಮಿಕ ಆಚರಣೆಯ ಭಾಗವಾಗಿ ಸಂಸತ್‌ ಭವನದೊಳಗೆ ಹಚ್ಚಲಾಗಿದ್ದ ಕ್ಯಾಂಡಲ್‌ ಅನ್ನು ಆರಿಸಲು ಸಂಸದ ಗ್ರೆಗೋಜ್‌ ಬ್ರೌನ್‌ ಫೈರ್‌ ಎಸ್ಟಿಂಗ್ವಿಷರ್‌ (ಬೆಂಕಿ ನಿಯಂತ್ರಿಸಲು ಬಳಸುವ ಉಪಕರಣ) ಬಳಸಿ ಆತಂಕ ಸೃಷ್ಟಿಸಿದ್ದಾರೆ.

ಬುಧವಾರ ಸಂಸತ್ತಿನ ಆವರಣದೊಳಗೆ ಆಗಮಿಸುತ್ತಲೇ ಪಕ್ಕದಲ್ಲಿ ನೇತು ಹಾಕಿದ್ದ ಫೈರ್‌ ಎಸ್ಟಿಂಗ್ಷಿಷರ್‌ ಅನ್ನು ಕ್ಯಾಂಡಲ್‌ ಮೇಲೆ ಸಿಂಪಡಿಸಿ ಅದನ್ನು ಆರಿಸಿದ್ದಾರೆ. ಈ ಘಟನೆಯಿಂದ ಅಕ್ಕಪಕ್ಕದಲ್ಲಿದ್ದವರೆಲ್ಲಾ ಒಮ್ಮೆ ಆತಂಕಕ್ಕೆ ಒಳಗಾದವರು. ಬಳಿಕ ಅವರ ಕೈನಿಂದ ಫೈರ್‌ ಎಸ್ಟಿಂಗ್ಷಿಷರ್‌ ಕಸಿದುಕೊಳ್ಳಲಾಯ್ತು. ಘಟನೆ ಸಂಬಂಧ ಬ್ರೌನ್‌ರನ್ನು 3 ತಿಂಗಳ ಕಾಲ ಸಂಸತ್ತಿನಿಂದ ಅಮಾನತು ಮಾಡಲಾಗಿದ್ದು, 6 ತಿಂಗಳ ವೇತನ ರದ್ದು ಪಡಿಸಲಾಗಿದೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ರೌನ್‌, ‘ಸಂಸತ್ತಿನಲ್ಲಿ ಯಹೂದಿಗಳ ಹನುಕ್ಕಾ ಆಚರಣೆಯನ್ನು ವಿರೋಧಿಸುವ ಸಲುವಾಗಿ ಈ ಕೃತ್ಯ ಮಾಡಿದ್ದೇನೆ. ಹನುಕ್ಕಾ ಆಚರಣೆಯನ್ನು ಮಾಡುವವವರೆಲ್ಲ ಪಿಶಾಚಿಗಳು’ ಎಂದು ಜರಿದಿದ್ದಾನೆ.