Fact Check| ಈ ಹಕ್ಕಿಯ ವಿಡಿಯೋ ಸೆರೆ ಹಿಡಿಯಲು 62 ದಿನ ಬೇಕಾಯ್ತಂತೆ!
ವಿವಿಧ ರೀತಿಯಲ್ಲಿ ಮಿಮಿಕ್ರಿ ಮಾಡುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಪೋಸ್ಟ್ ಮಾಡಿ ಇದು ಎಂದೂ ಕಾಣದ ಅಪರೂಪದ ಹಕ್ಕಿ ಎಂದು ಹೇಳಲಾಗಿದೆ. ಇದು ನಿಜಾನಾ? ಇಲ್ಲಿದೆ ವಿವರ
ಕ್ಯಾನ್‌ಬೆರಾ[ಡಿ.06]: ವಿವಿಧ ರೀತಿಯಲ್ಲಿ ಮಿಮಿಕ್ರಿ ಮಾಡುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಪೋಸ್ಟ್ ಮಾಡಿ ಇದು ಎಂದೂ ಕಾಣದ ಅಪರೂಪದ ಹಕ್ಕಿ ಎಂದು ಹೇಳಲಾಗಿದೆ.
ಈ ಹಕ್ಕಿಯು ಕೇವಲ ಪಕ್ಷಿಯಂತೆ ಕೂಗದೆ ಕಾರು, ಅಲಾರಂ, ಗನ್ ಶೂಟ್ ಕ್ಯಾಮೆರಾ ಶಟ್ಟರ್ ಹೀಗೆ ತರಹೇವಾರಿ ರೀತಿ ಮಿಮಿಕ್ರಿ ಮಾಡುತ್ತಿದೆ. ಇದರೊಂದಿಗೆ, ‘ತಮಿಳಿನಲ್ಲಿ ಈ ಹಕ್ಕಿಯನ್ನು ಸುರಗಾ ಎಂದು ಕರೆಯಲಾಗುತ್ತದೆ. ಈ ಹಕ್ಕಿಯ ವಿಡಿಯೋ ಮಾಡಲು 19 ಫೋಟೋಗ್ರಾಫರ್‌ಗಳು 62 ದಿನ ಪ್ರಯತ್ನ ಪಟ್ಟಿದಾರೆ. ವಿರಳವಾದ ಈ ಪಕ್ಷಿಯ ವಿಡಿಯೋವನ್ನು ಆದಷ್ಟುಶೇರ್ ಮಾಡಿ’ ಎಂದು ಒಕ್ಕಣೆ ಬರೆಲಾಗಿದೆ.
ಸದ್ಯ ಇದೀಗ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಬಾರೀ ವೈರಲ್ ಆಗುತ್ತಿದೆ. ಪಾಂಡೀಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆದರೆ ನಿಜಕ್ಕೂ ಇದು ಅಪರೂಪದ ಪಕ್ಷಿಯೇ ಎಂದು ಬೂಮ್ ಲೈವ್ ಪರಿಶೀಲಿಸಿದಾಗ ಇದು ವಿರಳವಾಗಿ ಕಂಡುಬರುವ ಪಕ್ಷಿ ಏನಲ್ಲ ಎಂದು ತಿಳಿದುಬಂದಿದೆ.
ಈ ಪಕ್ಷಿ ವಿಡಿಯೋ ಸೆರೆ ಹಿಡಿಯಲು 19 ಫೋಟೋಗ್ರಾಫರ್‌ಗಳು ಪ್ರಯತ್ನಿಸಿದ್ದರು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಹಾಗೆಯೇ ಕ್ಯಾಮೆರಾ ಶಟ್ಟರ್ ರೀತಿ ಕೂಗುವ ಪಕ್ಷಿ ಆಸ್ಪ್ರೇಲಿಯಾದ ಲೈರ್ ಹಕ್ಕಿ. ಆಸ್ಪ್ರೇಲಿಯಾ ನ್ಯೂಸ್ ವೆಬ್‌ಸೈಟ್‌ವೊಂದರಲ್ಲಿ ಈ ಹಕ್ಕಿಯ ಇದೇ ರೀತಿಯ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಅದರಲ್ಲಿ ಲೈರ್ ಹಕ್ಕಿ ಅನೇಕ ರೀತಿಯ ಮಿಮಿಕ್ರಿ ಮಾಡುತ್ತದೆ ಎಂದು ಬರೆಯಲಾಗಿದೆ.
ಸದ್ಯ ಇದೇ ವಿಡಿಯೋ ಅಪ್‌ಲೋಡ್ ಮಾಡಿ, ಅಪರೂಪದ ವಿಡಿಯೋ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ. ವಾಸ್ತವಾಗಿ ಲೈರ್ ಹಕ್ಕಿಗಳು ಮರಳುಗಾಡು ಪ್ರದೇಶದಲ್ಲಿ ಕಂಡುಬರುತ್ತವೆ.