Asianet Suvarna News Asianet Suvarna News

ಯೂರೋಪ್ ಮತ್ತೆ ಕೊರೋನಾ ಹಾಟ್‌ಸ್ಪಾಟ್; WHO

ಇನ್ನೇನು ಕೊರೋನಾ ವೈರಸ್ ಅಬ್ಬರ ತಣ್ಣಗಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಇದೀಗ ಯೂರೋಪ್‌ನಲ್ಲಿ ಮತ್ತೆ ಕೋವಿಡ್ 19 ರಣಕೇಕೆ ಜೋರಾಗಿದೆ. ಇದೀಗ ಯೂರೋಪ್ ಮತ್ತೆ ಕೊರೋನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Europe coronavirus hotspots says WHO Report kvn
Author
London, First Published Oct 31, 2020, 7:26 AM IST

ಲಂಡನ್(ಅ.31)‌: ಮಾರ್ಚ್‍- ಏಪ್ರಿಲ್‌ ಅವಧಿಯಲ್ಲಿ ಕೊರೋನಾ ರಣಕೇಕೆಯಿಂದ ನಲುಗಿಹೋಗಿ, ಬಳಿಕ ಚೇತರಿಸಿಕೊಂಡಿದ್ದ ಯುರೋಪ್‌ ಭಾಗ ಮತ್ತೊಮ್ಮೆ ಕೊರೋನಾದ ಪ್ರಮುಖ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಇನ್ನೇನು ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದು, ಜಾಗತಿಕ ಆರ್ಥಿಕತೆ ಸರಿದಾರಿಗೆ ಬರಬಹುದು ಎಂಬ ವರದಿಗಳ ಬೆನ್ನಲ್ಲೇ ಹೊರಬಿದ್ದಿರುವ ಈ ಸುದ್ದಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಗುರುವಾರ ವಿಶ್ವದಾದ್ಯಂತ ದಾಖಲೆಯ 5.46 ಲಕ್ಷ ಹೊಸ ಸೋಂಕಿತರ ಪತ್ತೆಯಾಗಿದ್ದು, ಇದರಲ್ಲಿ ಯುರೋಪ್‌ ದೇಶಗಳ ಪಾಲೇ 2.8 ಲಕ್ಷದಷ್ಟಿದೆ. ಅಂದರೆ ಒಟ್ಟು ಸೋಂಕಿತರಲ್ಲಿ ಶೇ.51ರಷ್ಟು ಪಾಲು ಈ ದೇಶಗಳದ್ದೇ ಆಗಿದೆ. ಗುರುವಾರ ವಿಶ್ವದ 15 ದೇಶಗಳಲ್ಲಿ ತಲಾ 10, 000ಕ್ಕಿಂತ ಹೆಚ್ಚು ಕೇಸು ದಾಖಲಾಗಿದ್ದು, ಈ ಪೈಕಿ 10 ಯುರೋಪ್‌ ದೇಶಗಳದ್ದು ಎಂಬ ಅಂಕಿ ಅಲ್ಲಿನ ಭೀಕರತೆಯನ್ನು ಎತ್ತಿ ಹೇಳಿದೆ.

ಭಾರೀ ಏರಿಕೆ:

ಕಳೆದೊಂದು ವಾರದಲ್ಲಿ 15 ಲಕ್ಷ ಮಂದಿ ಸೋಂಕಿತರು ಈ ಭಾಗದಲ್ಲಿ ಕಂಡುಬಂದಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ ಗಡಿಯನ್ನು ದಾಟಿದೆ. ಒಂದು ವಾರದಲ್ಲಿ ಸಾವಿನ ಸಂಖ್ಯೆ ಶೇ.30ರಷ್ಟುಹೆಚ್ಚಳವಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪರೀಕ್ಷೆ- ಪಾಸಿಟಿವಿಟಿ ದರ ಕೂಡ ಹೊಸ ಎತ್ತರಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಐರೋಪ್ಯ ಪ್ರಾದೇಶಿಕ ನಿರ್ದೇಶಕ ಹನ್ಸ್‌ ಕ್ಲುಗ್‌ ತಿಳಿಸಿದ್ದಾರೆ. ಐರೋಪ್ಯ ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣ ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್‌ ಎಂಬುದು ಈ ದೇಶಗಳ ಕೊನೆಯ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಆಟ ನಿಲ್ಲಿಸಿದ ಕೊರೋನಾ: ರಾಜ್ಯದ ಜನತೆಗೆ ಬಿಗ್ ರಿಲೀಫ್...!

ವಾಸ್ತವವಾಗಿ ಯುರೋಪ್‌ನಲ್ಲಿ 44 ದೇಶಗಳು ಇವೆ. ಆದರೆ ಡಬ್ಲ್ಯುಎಚ್‌ಒ ತನ್ನ ಲೆಕ್ಕಾಚಾರಕ್ಕೆ ರಷ್ಯಾ ಹಾಗೂ ಕೇಂದ್ರ ಏಷ್ಯಾದ ದೇಶಗಳಾದ ತಜಿಕಿಸ್ತಾನ, ಉಜ್ಬೇಕಿಸ್ತಾನ, ಕಜಖ್‌ಸ್ತಾನ, ತುರ್ಕ್ಮೆನಿಸ್ತಾನ ಸೇರಿದಂತೆ 53 ದೇಶಗಳನ್ನು ಯುರೋಪ್‌ ಎಂದು ಪರಿಗಣಿಸಿದೆ.
 

Follow Us:
Download App:
  • android
  • ios