ತೋಶಾಖಾನಾ ಹಗರಣದಲ್ಲಿ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್’ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಚುನಾವಣಾ ಆಯೋಗ ವಜಾ ಮಾಡಿದೆ.
ಇಸ್ಲಾಮಾಬಾದ್ (ಆ.8): ತೋಶಾಖಾನಾ ಹಗರಣದಲ್ಲಿ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್’ (Pakistan Tehreek-e-Insaf ) ಪಕ್ಷದ ಅಧ್ಯಕ್ಷ ಹುದ್ದೆಯಿಂದ ಚುನಾವಣಾ ಆಯೋಗ ವಜಾ ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 70 ವರ್ಷದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಶಿಕ್ಷೆಗೆ ಒಳಗಾದ ಬಳಿಕ 5 ವರ್ಷ ಚುನಾವಣಾ ರಾಜಕೀಯದಿಂದಲೂ ಕಾನೂನು ಪ್ರಕಾರ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರನ್ನು ಪಕ್ಷಾಧ್ಯಕ್ಷ ಹುದ್ದೆಯಿಂದ ಆಯೋಗ ವಜಾ ಮಾಡಿದೆ ಎಂದು ಹೇಳಲಾಗಿದೆ. ಈ ನಡುವೆ, ಇಮ್ರಾನ್ ಅವರನ್ನು ಜೈಲಿನಲ್ಲಿ ಸಿ ದರ್ಜೆ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಸರಿಯಾಗಿ ಊಟ-ತಿಂಡಿ, ಹಾಸಿಗೆ ನೀಡುತ್ತಿಲ್ಲ. ವಕೀಲರ ಭೇಟಿಗೂ ಅವಕಾಶ ಕೊಡುತ್ತಿಲ್ಲ ಎಂದು ಅವರ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ವಿಶ್ವದಾಖಲೆ ವೀರನಿಗೆ ಜೈಲು ಫಿಕ್ಸ್!: ಏನದು ತೋಷಖಾನಾ ಪ್ರಕರಣ..?
ಶಿಕ್ಷೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕಾನೂನು ಪ್ರಕಾರ ಇಮ್ರಾನ್, 5 ವರ್ಷ ಕಾಲ ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳುವ ಮೇಲೆ ನಿರ್ಬಂಧ ತನ್ನಿಂತಾನೇ ಜಾರಿಗೆ ಬಂದಿದೆ. ಹೀಗಾಗಿ ಇಮ್ರಾನ್ ರಾಜಕೀಯ ಜೀವನಕ್ಕೆ ದೊಡ್ಡ ಆಘಾತ ಎದುರಾಗಿದೆ. ಇದರ ಬೆನ್ನಲ್ಲೇ ಇಮ್ರಾನ್‌ಗೆ ಶಿಕ್ಷೆ ಹಾಗೂ ಬಂಧನ ವಿರೋಧಿಸಿ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ಇಮ್ರಾನ್ ಮೇಲ್ಮನವಿ ಸಲ್ಲಿಸುವ ಅವಕಾಶ ಹೊಂದಿದ್ದಾರೆ. ಇದರ ಬೆನ್ನಲ್ಲೇ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಅವರ ಬೆಂಬಲಿಗರು ಹೇಳಿದ್ದಾರೆ.
ಪ್ರಧಾನಿಯಾಗಿದ್ದಾಗ ತಮಗೆ ಬಂದ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ ತೋಶಾಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್‌ನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಇಮ್ರಾನ್ ಖಾನ್‌ಗೆ ಶನಿವಾರ ಜೈಲುಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸಿದೆ. ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲುಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಪಾಕ್ ಬಜೆಟ್ 14 ಲಕ್ಷ ಕೋಟಿ: ಸಾಲ ತೀರಿಸಲೆಂದೇ 7 ಲಕ್ಷ ಕೋಟಿ ರೂ. ಮೀಸಲು
ಇಮ್ರಾನ್ ಅವರು ಪ್ರಕರಣದಲ್ಲಿ ತಾವು ತೋಶಾಖಾನಾ ಅಕ್ರಮ ಎಸಗಿಲ್ಲ ಎಂದು ಬಿಂಬಿಸಲು, ಖೊಟ್ಟಿದಾಖಲೆಗಳನ್ನು ಸೃಷ್ಟಿಸಿದ್ದು ಹಾಗೂ ತೋಶಾಖಾನಾ ಕಾಣಿಕೆಗಳ ಕುರಿತು ನಕಲಿ ವಿವರಗಳನ್ನು ಚುನಾವಣಾ ಸ್ಪರ್ಧೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು ರುಜುವಾತಾಗಿದೆ. ಹೀಗಾಗಿ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ. ಪಾಕಿಸ್ತಾನದ ಚುನಾವಣಾ ಆಯೋಗ ಕಳೆದ ವರ್ಷ ಇಮ್ರಾನ್ ವಿರುದ್ಧ ಭ್ರಷ್ಟಚಾರದ ಪ್ರಕರಣ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಅವರನ್ನು ಈ ಹಿಂದೆ ಸಂಸತ್ ಸದಸ್ಯತ್ವದಿಂದಲೂ ವಜಾಗೊಳಿಸಲಾಗಿತ್ತು.
ಏನಿದು ತೋಶಾಖಾನಾ ಪ್ರಕರಣ?
ತೋಶಾಖಾನಾ ಎಂಬುದು ಪಾಕಿಸ್ತಾನದ ಸರ್ಕಾರಿ ಹುದ್ದೆಗಳಲ್ಲಿರುವ ವ್ಯಕ್ತಿಗೆ ಬಂದ ಉಡುಗೊರೆಗಳನ್ನು ಸಂಗ್ರಹಿಸಿಡುವ ಇಲಾಖೆ. 2018ರಲ್ಲಿ ಪ್ರಧಾನಿಯಾದ ಇಮ್ರಾನ್ ಖಾನ್ ತಮಗೆ ಬಂದ ಉಡುಗೊರೆಗಳ ಬಗ್ಗೆ ಇಲ್ಲಿಗೆ ಮಾಹಿತಿ ನೀಡಿರಲಿಲ್ಲ. ಬಳಿಕ ಅವರೇ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕನಿಷ್ಠ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ, ಸರ್ಕಾರಕ್ಕೆ ಹಣ ನೀಡಿ ಈ ಉಡುಗೊರೆಗಳನ್ನು ತಾವು ಖರೀದಿಸಿದ್ದಾಗಿಯೂ ಅವರು ಹೇಳಿದ್ದರು. ಇದರ ವಿರುದ್ಧ ಚುನಾವಣಾ ಆಯೋಗ ಹಾಗೂ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷ ದೂರು ದಾಖಲಿಸಿ, ಇಮ್ರಾನ್ ವಿಷಯ ಮುಚ್ಚಿಡುತ್ತಿದ್ದು, ಇನ್ನೂ ಅನೇಕ ವಿದೇಶಿ ಉಡುಗೊರೆ ಮಾರಿಕೊಂಡು ದುಡ್ಡು ಮಾಡಿಕೊಂಡಿದ್ದಾರೆ ಎಂದು ದೂರಿದ್ದವು. ಇಮ್ರಾನ್ ಮಾರಾಟ ಮಾಡಿದ ಉಡುಗೊರೆಗಳ ಪೈಕಿ ಸೌದಿಯ ರಾಜ ನೀಡಿದ್ದ ಗ್ರಾಫ್ ವಾಚ್, ರೋಲೆಕ್ಸ್ ವಾಚುಗಳು, ದುಬಾರಿ ಕಫ್ಲಿಂಕ್‌ಗಳು, ಪೆನ್ ಹಾಗೂ ಉಂಗುರಗಳು ಸೇರಿವೆ.
