ವಾಷಿಂಗ್ಟನ್[ಮಾ.07]: 88 ವರ್ಷದ ಡೊರೋತಿ ಕೈಂಬಲ್ ಹಾಗೂ 89 ವರ್ಷದ ಜೀನ್ ಕೈಂಬಲ್ ಈ ದಂಪತಿ ಮದುವೆಯಾಗಿ 60 ವರ್ಷಗಳಾಗಿವೆ. ಆದರೀಗ ಜೀವನದ ಈ ಹಂತದಲ್ಲಿ ಈ ವೃದ್ಧ ದಂಪತಿಯನ್ನು ಕೊರೋನಾ ವೈರಸ್ ದೂರ ಮಾಡಿದೆ. 

ಹೌದು ಸದ್ಯ ಜೀನ್ ವಾಷಿಂಗ್ಟನ್ ನ ಲೈಫ್ ಕೇರ್ ಸೆಂಟರ್ ನಲ್ಲಿ 'ಕೈದಿ' ಯಾಗಿದ್ದಾರೆ. ಇಲ್ಲಿ Covid-19 ನಿಂದ ಬಳಲುತ್ತಿದ್ದ ಸುಮಾರು 10 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಹೀಗಿರುವಾಗ ಡೊರೋತಿ ತನ್ನ ಸಂಗಾತಿಯನ್ನು ನೊಡಲು ಬಂದಾಗ ಗಾಜಿನ ಗೋಡೆಯನ್ನಿಡಲಾಗಿದೆ. ಬೇರೆ ವಿಧಿ ಇಲ್ಲದ ಅವರು ತನ್ನ ಜೀವನ ಸಂಗಾತಿಯೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಆ ಕ್ಷಣದ ಪೋಟೋ ಒಂದು ಸದ್ಯ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದರವರೆಲ್ಲರೂ ಭಾವುಕರಾಗಿದ್ದಾರೆ.

ಮಗನೊಂದಿಗೆ ಲೈಫ್ ಕೇರ್ ಸೆಂಟರ್ ಗೆ ತೆರಳಿದ ಡೊರೋತಿ

CNN ವರದಿಯನ್ವಯ ಜೀನ್ ಕೈಂಬಲ್ ವಾಷಿಂಗ್ಟನ್ ನ ಕಿರ್ಕ್ ಲ್ಯಾಂಡ್ ನಲ್ಲಿರುವ ಲೈಫ್ ಕೇರ್ ಸೆಂಟರ್ ನಲ್ಲಿ ದಾಖಲಾಗಿದ್ದಾರೆ. ಇಲ್ಲಿ ಅವರಿಗೆಂದೇ ಒಂದು ಪ್ರತ್ಯೇಕ ಕೋಣೆ ಇದೆ. ಇಲ್ಲಿ ಅವರು ಏಕಾಂಗಿಯಾಗೇ ಇದ್ದಾರೆ. ಇಲ್ಲಿ ದಾಖಲಾಗಿರುವ ರೋಗಿಗಳ ಕುಟುಂಬ ಸದಸ್ಯರಿಗೆ ಒಳಗೆ ಪ್ರವೇಶಿಸಲು ಅನುಮತಿ ಇಲ್ಲ. ಹೀಗಿರುವಾಗ ಡೊರೊತಿ ತನ್ನ ಜೀವನ ಸಂಗಾತಿಯನ್ನು ಭೇಟಿಯಾಗಲು ಅವರ ಕೋಣೆಯ ಕಿಟಕಿ ಬಳಿ ತಲುಪಿದ್ದಾರೆ. ಇಬ್ಬರೂ ಪರಸ್ಪರ ನೋಡಿ, ಫೋನ್ ಮೂಲಕ ಮಾತನಾಡಿದ್ದಾರೆ. ಹೀಗಿದ್ದರೂ ಇವರಿಬ್ಬರೂ ಬಹಳ ದೂರವಿದ್ದರು. ಇಲ್ಲಿರುವ ರೋಗಿಗಳನ್ನು ಸಂಪರ್ಕಿಸಲು ಇರುವ ದಾರಿ ಇದೊಂದೇ.

ರೋಗಿಗಳ ಮೇಲಿದೆ ವೈದ್ಯಾಧಿಕಾರಿಗಳ ಗಮನ

ರಾಜ್ಯದ ಒಟ್ಟು 70ರಲ್ಲಿ ಒಟ್ಟು 8 ಪ್ರಕರಣಗಳು ಈ ಕೇಂದ್ರಕ್ಕೆ ಸಂಬಂಧಿಸಿವೆ. ಇಲ್ಲಿ ಈವರೆಗೂ ಒಟ್ಟು 17 ಮಂದಿ ಮೃತರಾಗಿದ್ದು, ಇವರಲ್ಲಿ 7 ಮಂದಿ ಈ ಲೈಫ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಆಗಿದ್ದಾರೆ.