ಮಗುವಿನಂತೆ ಅತ್ತು ಕಸ ಕೇಳುವ ಡಸ್ಟ್‌ಬಿನ್: ಚೀನಾದ ವೀಡಿಯೋ ಸಖತ್ ವೈರಲ್
ಚೀನಾದ ಬೀದಿಗಳಲ್ಲಿ ಓಡಾಡುವ ಮಾತನಾಡುವ ಕಸದ ತೊಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಕ್ಕಳಂತೆ ಬೊಬ್ಬೆ ಹೊಡೆಯುವ ಈ ಕಸದ ತೊಟ್ಟಿ ಜನರಿಂದ ಕಸ ಪಡೆದು ಸ್ವಚ್ಛತೆ ಕಾಪಾಡಲು ಸಹಾಯ ಮಾಡುತ್ತಿದೆ.
ತಾನು ಉತ್ಪಾದಿಸಿದ ವಸ್ತುಗಳಿಗೆ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ ಜಗತ್ತಿನಲ್ಲಿ ಎಲ್ಲೋ ಇಲ್ಲದ ಚಿತ್ರ ವಿಚಿತ್ರಗಳನ್ನು ಕಂಡು ಹಿಡಿಯುವುದರಲ್ಲಿ ಚೀನಾ ಫೇಮಸ್, ಬೀದಿಯಲ್ಲಿ ಓಡಾಡುವ ರೊಬೋಟೋ ನಾಯಿಗಳಿಂದ ಹಿಡಿದು ಇನ್ನು ಅನೇಕ ವಿಚಿತ್ರವೆನಿಸುವ ವಸ್ತುಗಳನ್ನು ಚೀನಾ ಪತ್ತೆ ಮಾಡಿದೆ. ಅದೇ ರೀತಿ ಚೀನಾದ ಬೀದಿಗಳಲ್ಲಿ ಓಡಾಡುತ್ತಿರುವ ಡಸ್ಟ್‌ಬಿನ್ (ಕಸದ ಬುಟ್ಟಿ) ಸಾಕಷ್ಟು ಸದ್ದು ಮಾಡುತ್ತಿದೆ. ಹೌದು ಎಲ್ಲೆಡೆ ಡಸ್ಟ್‌ಬಿನ್‌ಗಳು ಇರಿಸಿದಲ್ಲೇ ಇದ್ದರೆ, ಇಲ್ಲಿ ಮಾತ್ರ ಅತ್ತಿಂದಿತ್ತಾ ಓಡಾಡುತ್ತಾ ಜನರನ್ನು ಅಚ್ಚರಿಗೊಳಿಸುತ್ತಿದೆ. ಬರೀ ಇಷ್ಟೇ ಅಲ್ಲ ಈ ಡಸ್ಟ್‌ಬಿನ್ ಮಕ್ಕಳಂತೆ ಬೊಬ್ಬೆ ಹೊಡೆದು ಕಿರುಚುವುದನ್ನು ಕೂಡ ಕೇಳಬಹುದು.
ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಬಂದಿದೆ. ಅಂದಹಾಗೆ ಚೀನಾದ ಹಾಂಗ್‌ಕಾಂಗ್ ನಗರದಲ್ಲಿದ್ದ ಈ ವಿಶೇಷ ಡಸ್ಟ್‌ಬಿನ್‌ನ ವೀಡಿಯೋವನ್ನು ಡಿಜಿಟಲ್ ಕ್ರಿಯೇಟರ್ ಆಗಿರುವ ಲಕ್ಕಿಸ್ಟೇರಿ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ತುಂಬಾ ಮುದ್ದೆನಿಸುತ್ತಿದೆ. ಇದರೊಂದಿಗೆ ನಾನು ಇಡೀ ದಿನ ಮಾತನಾಡಬಹುದು ಎನಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ನೆರಳೆ ಹಾಗೂ ಬಳಿ ಮಿಶ್ರಿತ ಬಣ್ಣದ ಈ ಸಂಚಾರಿ ಕಸದ ತೊಟ್ಟಿ, ಅನಿಮೇಟೆಡ್ ಧ್ವನಿಯನ್ನು ಹೊಂದಿದ್ದು, ಇದು ಬೀದಿಯಲ್ಲಿ ಅತ್ತಿತ್ತ ಓಡಾಡುತ್ತಾ ಸುತ್ತಲೂ ತಿರುಗಾಡುತ್ತದೆ. ಅಲ್ಲದೇ ತಮಾಷೆಯ ರೀತಿಯಲ್ಲಿ ಅಳುವ ಇದು ' ನಾನು ಕಸ ತಿನ್ನಬೇಕು ಇಲ್ಲಿ ನಿಜವಾಗಿಯ ಯಾರೂ ಇಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲದೇ ವಿಚಿತ್ರವಾಗಿ ಜನರನ್ನು ಸೆಳೆಯುವ ಈ ಕಸದ ತೊಟ್ಟಿ, ಅವರ ಬಳಿ ಸೋದರಿ ನಿಮ್ಮ ಬಳಿ ಏನಾದರು ಕಸ ಇದೆಯೇ ಎಂದು ಕೇಳುತ್ತದೆ. ಕಸದ ಬುಟ್ಟಿಯ ಮನವಿ ಕೇಳಿದ ಮಹಿಳೆಯೊಬ್ಬರು ಅದರೊಳಗೆ ಸ್ವಲ್ಪ ಕಸವನ್ನು ಹಾಕುತ್ತಾರೆ. ಇದಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸುವ ಕಸದ ತೊಟ್ಟಿ ಆಹಾ ಆಹಾ ಅದು ಇಲ್ಲಿದೆ ಎನ್ನುತಾ ಯಮ್ ಯಮ್ ಯಮ್ ಎಂದು ಸವಿಯುತ್ತಾ ಕಸ ತಿನ್ನುವಂತೆ ಧ್ವನಿ ಮಾಡುತ್ತದೆ.
ಹೀಗೆ ಜನರ ಬಳಿ ಮಾತನಾಡಿ ಅವರಿಂದ ಕಸ ಪಡೆಯುವ ಈ ಕಸದ ತೊಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಅನೇಕರು ಈ ಸೃಜನಾತ್ಮಕವೆನಿಸುವ ಈ ಕೆಲಸವನ್ನು ಹೊಗಳಿದ್ದು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಜನರನ್ನು ಸ್ವಚ್ಛತೆಯತ್ತ ಪ್ರೋತ್ಸಾಹಿಸಲು ಒಳ್ಳೆಯ ಯೋಜನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ನಾನು ಇದಕ್ಕೆ ಇಡೀ ಜೀವನಕ್ಕೆ ಸಾಕಾಗುವಷ್ಟು ಆಹಾರ ನೀಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಇದು ಅಳುವುದನ್ನು ನೋಡಿದರೆ ಈಗಲೇ ನನ್ನ ಬಳಿ ಇರುವ ಕಸವನ್ನೆಲ್ಲಾ ನೀಡೋಣ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಮುದ್ದಾದ ಐಡಿಯಾ ಆಗಿದ್ದು, ಜನರಿಗೆ ಕೂಗಿ ಕೂಗಿ ಹೇಳುವ ಬದಲು ಇಂತಹದೊಂದು ಡಸ್ಟ್‌ಬಿನನ್ನು ರಸ್ತೆಯಲ್ಲಿಟ್ಟರೆ ಯಾರು ಕೂಡ ರಸ್ತೆಲ್ಲಿ ಕಸ ಎಸೆಯಲಾರರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅದನ್ನು ತನ್ನ ಮಾಜಿ ಗೆಳತಿಗೆ ಹೋಲಿಸಿದ್ದು, ನನ್ನ ಮಾಜಿ ಅಲ್ಲೇನೂ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.