ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಅರ್ಥಪೂರ್ಣ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಅಥವಾ ಕೆಟ್ಟ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕ ಇರಾನ್ ಗಡಿಯ ಸುತ್ತಮುತ್ತ ಭಾರಿ ಸೇನಾ ಜಮಾವಣೆ ಮಾಡಿದೆ.
ವಾಷಿಂಗ್ಟನ್ (ಫೆ.19): ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತು ಸೇನಾ ಚಟುವಟಿಕೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಗುಡುಗಿದ್ದಾರೆ. "ಇರಾನ್ ತಕ್ಷಣವೇ ಅರ್ಥಪೂರ್ಣವಾದ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ. ಇದರ ನಡುವೆ ಶನಿವಾರದಿಂದ ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕದ ಸೇನಾಪಡೆಗಳು ಸಿದ್ದವಾಗಿದೆ ಅನ್ನೋ ವರದಿಗಳು ಕೇಳಿಬಂದಿವೆ.
ವಾಷಿಂಗ್ಟನ್‌ನಲ್ಲಿ ನಡೆದ 'ಬೋರ್ಡ್ ಆಫ್ ಪೀಸ್'ನ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಟ್ರಂಪ್, "ನಾವು ಇರಾನ್ ಜೊತೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಲೇಬೇಕು. ಮಾತುಕತೆಗಳು ನಡೆಯುತ್ತಿವೆ, ಆದರೆ ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಇತಿಹಾಸದಿಂದ ಸಾಬೀತಾಗಿದೆ. ಇರಾನ್ ನಮ್ಮೊಂದಿಗೆ ಶಾಂತಿಯ ಹಾದಿಯಲ್ಲಿ ಕೈಜೋಡಿಸಬೇಕು, ಇಲ್ಲವಾದಲ್ಲಿ ಕೆಟ್ಟ ಸಂಗತಿಗಳು ಖಂಡಿತವಾಗಿ ಜರುಗಲಿವೆ" ಎಂದು ನೇರವಾಗಿಯೇ ಹೇಳಿದರು.
ಪಟ್ಟು ಹಿಡಿದಿರುವ ಅಮೆರಿಕ
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರೋಕ್ಷ ಮಾತುಕತೆಗಳು ನಡೆಯುತ್ತಿವೆ. ಅಮೆರಿಕದ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜ್ಯಾರೆಡ್ ಕುಶ್ನರ್ ಅವರು ಮಧ್ಯವರ್ತಿಗಳ ಮೂಲಕ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕಿ ಅವರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎನ್ನುವುದು ಅಮೆರಿಕದ ಪಟ್ಟು. ಆದರೆ, ಇರಾನ್ ಇದು ನಮ್ಮ ಸಾರ್ವಭೌಮ ಹಕ್ಕು ಮತ್ತು ಇದು ಕೇವಲ ನಾಗರಿಕ ಸಂಶೋಧನೆಗಾಗಿ ಎಂದು ವಾದ ಮಾಡಿದೆ.
ಯುದ್ಧದ ಕಾರ್ಮೋಡ: ಅಮೆರಿಕದ ಭಾರಿ ಸೇನಾ ಜಮಾವಣೆ
ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕ ಇರಾನ್ ಗಡಿಯ ಸುತ್ತಮುತ್ತ ಭಾರಿ ಸೇನಾ ಜಮಾವಣೆ ಮಾಡಿದೆ. 50ಕ್ಕೂ ಹೆಚ್ಚು ಸುಧಾರಿತ ಯುದ್ಧ ವಿಮಾನಗಳು (F-22, F-35 ಮತ್ತು F-16) ನಿಯೋಜನೆ ಮಾಡಲಾಗಿದೆ. ನೌಕಾಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಹೆಚ್ಚುವರಿ ಪಡೆಗಳ ಇರಾನ್‌ನ ಸುತ್ತಮುತ್ತ ಇರಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಿಲಿಟರಿ ಡ್ರಿಲ್ ನಡೆಸುತ್ತಿದ್ದು, ತಮ್ಮ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಸಿದೆ. ಇರಾನ್ ಈಗ ಅಮೆರಿಕದ ಆತಂಕಗಳನ್ನು ಹೇಗೆ ಬಗೆಹರಿಸಲಿದೆ ಎಂಬ ಬಗ್ಗೆ ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಈ ದಾಖಲೆಯು ಮುಂದಿನ ದಿನಗಳಲ್ಲಿ ಶಾಂತಿ ಸ್ಥಾಪನೆಯಾಗುತ್ತದೆಯೇ ಅಥವಾ ಯುದ್ಧದತ್ತ ನಾಂದಿ ಹಾಡುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ.

ಇರಾನ್ ಸನಿಹದಲ್ಲಿ ಅಮೆರಿಕದ ಸೇನಾ ಜಮಾವಣೆಯ ಚಿತ್ರ. ಕೃಪೆ: ಇಂಡಿಯಾ ಟುಡೇ


