ಇರಾನ್ ಮೇಲೆ ಬಾಂಬ್ ದಾಳಿಗೆ ಸಜ್ಜಾಗಿ ಬಳಿಕ ಹಿಂದೆ ಸರಿದ ಟ್ರಂಪ್!| 10 ನಿಮಿಷವಿದ್ದಾಗ ನಿರ್ಧಾರ ಬದಲಾಯಿಸಿದ್ದ ಅಮೆರಿಕಾ ಅಧ್ಯಕ್ಷ
ವಾಷಿಂಗ್ಟನ್[ಜೂ.22]: ಇರಾನ್ ಅಮೆರಿಕದ ಗೂಢಚರ ಡ್ರೋನ್‌ವೊಂದನ್ನು ಹೊಡೆದುರುಳಿಸಿದ್ದಕ್ಕೆ ಪ್ರತಿಯಾಗಿ ಇರಾನ್ ಮೇಲೆ ವೈಮಾನಿಕ ಬಾಂಬ್ ದಾಳಿಗೆ ಸಜ್ಜಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದ ವಿಷಯ ಬೆಳಕಿಗೆ ಬಂದಿದೆ. ಒಂದು ವೇಳೆ ಅಮೆರಿಕ ದಾಳಿ ನಡೆಸಿದ್ದೇ ಆದಲ್ಲಿ ಅದು ಮತ್ತೊಂದು ಯುದ್ಧಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು ಎನ್ನಲಾಗಿದೆ.
ಇರಾನ್ ಮೇಲೆ ವಾಯು ದಾಳಿಗೆ ಗುರುವಾರ ತಡ ರಾತ್ರಿ ಸೇನೆಗೆ ಆದೇಶಿಸಿದ್ದ ಟ್ರಂಪ್, ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಸರಣಿ ಟ್ವೀಟ್ ಮೂಲಕ ತಮ್ಮ ನಿರ್ಧಾರವನ್ನು ವಿವರಿಸಿರುವ ಟ್ರಂಪ್, ಇರಾನ್ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಆತುರ ಇಲ್ಲ ಎಂದು ಹೇಳಿದ್ದಾರೆ.
‘ದಾಳಿಗೆ 10 ನಿಮಿಷ ಮುನ್ನ ನಾನು ಅದನ್ನು ತಡೆದಿದ್ದೇನೆ. ಈ ದಾಳಿಯಿಂದ 150 ಜನರು ಸಾವನ್ನಪ್ಪಬಹುದು ಎಂದು ಸೇನಾ ಜನರಲ್ ಮಾಹಿತಿ ನೀಡಿದ್ದರು. ಈ ಕಾರಣಕ್ಕಾಗಿ ಇದು ತಕ್ಕ ಪ್ರತ್ಯುತ್ತರ ಅಲ್ಲ ಎಂಬ ತೀಮಾಣಕ್ಕೆ ಬಂದೆ. ಇರಾನ್ ಮೇಲೆ ದಾಳಿಗೆ ಪೆಂಟಗನ್ ಮೂರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿತ್ತು’ ಎಂದು ಟ್ರಂಪ್ ಹೇಳಿದ್ದಾರೆ.
