ರಾಷ್ಟ್ರೀಯ ರಕ್ಷಣಾ ಮಾಹಿತಿ ಸೇರಿದಂತೆ ಹಲವು ರಹಸ್ಯ ದಾಖಲೆಗಳನ್ನು ಕದ್ದೊಯ್ದ ಆರೋಪವನ್ನು ಡೊನಾಲ್ಡ್‌ ಟ್ರಂಪ್‌ ಮೇಲೆ ಹೊರಿಸಲಾಗಿದೆ.

ಮಿಯಾಮಿ (ಜೂನ್ 10, 2023): ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ 300ಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ಕದ್ದೊಯ್ದ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಗುರುವಾರ ದೋಷಾರೋಪ ಹೊರಿಸಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅಮೆರಿಕದ ಹಾಲಿ ಅಥವಾ ಮಾಜಿ ಅಧ್ಯಕ್ಷರೊಬ್ಬರು ಕ್ರಿಮಿನಲ್‌ ಆರೋಪ ಎದುರಿಸಬೇಕಾದ ಕುಖ್ಯಾತಿಯನ್ನು ಟ್ರಂಪ್‌ ತಮ್ಮದಾಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ರಕ್ಷಣಾ ಮಾಹಿತಿ ಸೇರಿದಂತೆ ಹಲವು ರಹಸ್ಯ ದಾಖಲೆಗಳನ್ನು ಕದ್ದೊಯ್ದ ಆರೋಪವನ್ನು ಡೊನಾಲ್ಡ್‌ ಟ್ರಂಪ್‌ ಮೇಲೆ ಹೊರಿಸಲಾಗಿದೆ. ಡೊನಾಲ್ಡ್‌ ಟ್ರಂಪ್‌ ವಿರುದ್ಧ ಒಟ್ಟು 7 ಆರೋಪಗಳನ್ನು ಹೊರಿಸಲಾಗಿದ್ದು, ಅವುಗಳನ್ನು ಮಂಗಳವಾರ ಡೊನಾಲ್ಡ್‌ ಟ್ರಂಪ್‌ ನ್ಯಾಯಾಲಯಕ್ಕೆ ಹಾಜರಾದ ವೇಳೆ ಬಹಿರಂಗಪಡಿಸಲಾಗುವುದು. ದೇಶದ್ರೋಹಕ್ಕೆ ಸಮನಾದ ಆರೋಪ ಎದುರಿಸುತ್ತಿರುವ ಟ್ರಂಪ್‌ ದೋಷಿ ಎಂದು ಸಾಬೀತಾದಲ್ಲಿ ಜೈಲು ಸೇರಬೇಕಾಗಿ ಬರಲಿದೆ. 

ಇದನ್ನು ಓದಿ: ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್‌ ಮಾಡಿದೆ: ಡೊನಾಲ್ಡ್‌ ಟ್ರಂಪ್‌ ಟೀಕೆ

ಈಗಾಗಲೇ ಲೈಂಗಿಕ ಕಿರುಕುಳ ಪ್ರಕರಣದಲ್ಲೂ ದೋಷಾರೋಪಕ್ಕೆ ಗುರಿಯಾಗಿರುವ ಟ್ರಂಪ್‌ಗೆ ಇದೀಗ ಈ ಪ್ರಕರಣ ಕೂಡಾ ಮೈಮೇಲೇರಿ ಕುಳಿತಿರುವ ಕಾರಣ, ವರ್ಷಾಂತ್ಯಕ್ಕೆ ನಡೆಯಬೇಕಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ರೇಸ್‌ನಲ್ಲಿ ಮುಜುಗರ ಎದುರಿಸಬೇಕಾಗಿ ಬಂದಿದೆ. ಈ ನಡುವೆ ತಮಗೆ ದಾಖಲೆಗಳನ್ನು ಕೊಂಡೊಯ್ಯುವ ಎಲ್ಲಾ ಅಧಿಕಾರವೂ ಇದೆ ಎಂದು ಈ ಮೊದಲು ಕೂಡಾ ಸಮರ್ಥಿಸಿಕೊಂಡಿದ್ದ ಡೊನಾಲ್ಡ್‌ ಟ್ರಂಪ್‌, ಗುರುವಾರದ ಬೆಳವಣಿಗೆಯನ್ನು ದ್ವೇಷದ ರಾಜಕಾರಣ ಎಂದು ಬಣ್ಣಿಸಿದ್ದಾರೆ.

ಏನಿದು ಪ್ರಕರಣ?:
ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಶ್ವೇತಭವನದಿಂದ 300 ದಾಖಲೆಗಳನ್ನು ಡೊನಾಲ್ಡ್‌ ಟ್ರಂಪ್‌ ಫ್ಲೋರಿಡಾದಲ್ಲಿರುವ ತಮ್ಮ ಎಸ್ಟೇಟ್‌ಗೆ ಹೊತ್ತೊಯ್ದಿದ್ದರು. ಅಲ್ಲಿಗೆ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ 100ಕ್ಕೂ ಹೆಚ್ಚು ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು. ಅಲ್ಲದೆ, ದಾಖಲೆಗಳನ್ನು ಎಫ್‌ಬಿಐ ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನೆಗೇ ಎಫ್‌ಬಿಐ ದಾಳಿ: ಬೈಡೆನ್‌ ನಿವಾಸ 13 ಗಂಟೆ ತಲಾಶ್‌..!