ಸೈನಿಕರ ಕ್ಯಾಂಟಿನ್‌ಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಗಳನ್ನು ಸನ್ಮಾನಿಸಿ, ಸೈನಿಕರ ಕಲ್ಯಾಣಕ್ಕೆ ಸರ್ಕಾರ ಬದ್ಧ ಎಂದು ಹೇಳಿದರು.

ಬೆಂಗಳೂರು (ಮೇ 28): ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕರ ಸೌಲಭ್ಯಗಳನ್ನು ಉತ್ತೇಜಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತದೆ. ಈ ನಿಟ್ಟಿನಲ್ಲಿ 'ಸೈನಿಕರ ಕ್ಯಾಂಟಿನ್‌ಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ 'ಜೈ ಹಿಂದ್ ಸಭಾ' ಕಾರ್ಯಕ್ರಮದಲ್ಲಿ ಭಾರತೀಯ ನಿವೃತ್ತ ಯೋಧ ಸಮೂಹವನ್ನು ಸನ್ಮಾನಿಸಿ, ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಗೌರವಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ನೀವೆಲ್ಲಾ ವೀರ ಮಾತೆಯರು, ದೇಶ ಕಾಯುವ ವೀರರಿಗೆ ಜನ್ಮ ಕೊಟ್ಟಿದ್ದೀರಿ, ಇದು ನಿಮ್ಮ ಪುಣ್ಯ' ಎಂದರು. ಸೈನಿಕರ ಸೇವೆ ಗೌರವಯುತವಾಗಿರುವುದರಿಂದ, ಅವರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದರು. ಇನ್ನು ಸೈನಿಕರ ಸೌಲಭ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ, 'ಸೈನಿಕರ ಕ್ಯಾಂಟಿನ್‌ಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ' ಎಂಬ ಮಹತ್ವದ ಘೋಷಣೆ ಮಾಡಿದರು. ಈ ಘೋಷಣೆಗೆ ಸೈನಿಕರಿಂದ 'ಜೈ'ಕಾರ ಘೋಷಣೆ ಕೇಳಿಬಂದಿತು.

ನಮ್ಮ ಸೈನಿಕರು ಪಹಲ್ಗಾಮ್ ಘಟನೆ ಆದ ಮೇಲೆ ಉಗ್ರರ ನೆಲೆಗಳನ್ನ ಪತ್ತೆ ಹಚ್ಚಿ ದ್ವಂಸ ಮಾಡಿದ್ದಾರೆ. ಇದು ಇಡೀ ಭಾರತದ ಹೆಮ್ಮೆಯ ವಿಚಾರ. ಶಿಷ್ಟರ ರಕ್ಷಣೆ ದುಷ್ಟರ ಸಂಹಾರದ ರೀತಿಯಲ್ಲಿ ಉಗ್ರರ ತಾಣಗಳನ್ನ ಗುರುತಿಸಿ ದ್ವಂಸ ಮಾಡಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಸನ್ಮಾನ ಮಾಡಿದ್ದಾರೆ. ನೀವೆಲ್ಲಾ ವೀರ ಮಾತೆಯರು ದೇಶ ಕಾಯುವವರಿಗೆ ಜನ್ಮ ಕೊಟ್ಟಿದ್ದೆ ಪುಣ್ಯ. ಸೈನಿಕರ ಕಲ್ಯಾಣ ಮಂಡಳಿ ರಚನೆಗೆ ಎಲ್ಲಾ ಪ್ರಯತ್ನ ಮಾಡುತ್ತೇವೆ. ನೀವೆಲ್ಲಾ ದೇಶದ ಜೊತೆ ಇದ್ದೀರಾ, ನಾವೆಲ್ಲಾ ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಇವತ್ತು ದೇಶಾದ್ಯಂತ ಎಐಸಿಸಿಯಿಂದ ಜೈಹಿಂದ್ ಸಭಾ ಕಾರ್ಯಕ್ರಮ ಅಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ‌ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಅಚ್ಚುಕಟ್ಟಾಗಿ ಏರ್ಪಾಡು ಮಾಡಿರುವ ಎಲ್ಲರಿಗೂ ನಮಸ್ಕಾರ ಹೇಳುತ್ತೇನೆ. ಇಷ್ಟೊಂದು ಜನ ಸೈನಿಕರು ಸೇರ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿ ಎಲ್ಲರು ಶ್ರಮವಹಿಸಿ ಜವಾಬ್ದಾರಿಯಿಂದ ಕಾರ್ಯಕ್ರಮ ಏರ್ಪಾಡು ಮಾಡಿದ್ದಾರೆ. ಭಾರತ ಪಾಕಿಸ್ತಾನ ವಿಭಜನೆ ಆದ್ಮಲೆ ನಮಗೂ ಪಾಕಿಸ್ತಾನಕ್ಕೂ ತಿಕ್ಕಾಟ ಇದೆ. ಅವರು ಸಮ್ಮನೆ ಇರೋದಿಲ್ಲಾ, ಕಾಲು ಕೆರೆದುಕೊಂಡು ಬರ್ತಾರೆ. ಅವರು ಉಗ್ರರನ್ನ ಸಾಕಿಕೊಂಡಿದ್ದಾರೆ. ಶಿಕ್ಷಕರು, ತಂದೆ ತಾಯಿಗಳನ್ನ ನಡೆಸಿಕೊಳ್ಳುವಂತೆ ಸೈನಿಕರನ್ನ ನಡೆಸಿಕೊಳ್ತೇವೆ. ದೇಶದ ಜನರ ರಕ್ಷಣೆ ಆಗಬೇಕಾದರೆ ಸೈನಿಕರೆ ಕಾರಣ. ದೇಶದ ರಕ್ಷಣೆ ವಿಚಾರ ಬಂದಾಗ ಎಲ್ಲರು ಒಗ್ಗಟ್ಟಾಗುತ್ತೇವೆ. ನಾವೆಲ್ಲರು ನಿಮ್ಮ ಜೊತೆ ಇದ್ದೇವೆ. ತ್ಯಾಗ ಮನೋಭಾವದಿಂದ ದೇಶದ ರಕ್ಷಣೆ ಮಾಡುತ್ತೀರಿ. ಇದು‌‌ ಸೈನಿಕರ ಜವಾಬ್ದಾರಿ ಮಾತ್ರ ಅಲ್ಲಾ ದೇಶದ 140 ಕೋಟಿ ಜನರ ಜವಾಬ್ದಾರಿ ಎಂದು ಹೇಳಿದರು.

ಪಾಪ ಕಮಲ್ ಹಾಸನ್‌ಗೆ ಕನ್ನಡದ ಬಗ್ಗೆ ಗೊತ್ತಿಲ್ಲ:

ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಕನ್ನಡ ಭಾಷೆಗೆ ದೀರ್ಘ ಕಾಲದ ಇತಿಹಾಸ ಇದೆ. ಪಾಪ ಕಮಲ್ ಹಾಸನ್ ಅವರಿಗೆ ಕನ್ನಡ ‍ಭಾಷೆಯ ಇತಿಹಾಸದ ಬಗ್ಗೆ ಗೊತ್ತಿಲ್ಲ. ಇನ್ನು ರಾಜ್ಯದ ಹಲವೆಡೆ ಮಳೆ ಹಾಗೂ ಮಳೆ ಹಾನಿ ವಿಚಾರದ ಬಗ್ಗೆ ಮತನಾಡಿ, ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಈಗಾಗಲೇ ಹೇಳಿದ್ದೇನೆ. ಮಳೆ ಅನಾಹುತ, ಭೂಮಿ ಕುಸಿತ, ಮರ ಬಿದ್ದಿರುವ ಪ್ರದೇಶ, ರಸ್ತೆ ಅಡಚಣೆಯನ್ನ ಕೂಡಲೇ ಅಟೆಂಡ್ ಮಾಡಬೇಕು ಅಂತ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.