Asianet Suvarna News Asianet Suvarna News

ಮೇಹುಲ್‌ ಚೋಕ್ಸಿ ವಿರುದ್ಧದ ಪ್ರಕರಣ ಕೈ ಬಿಟ್ಟ ಡೊಮಿನಿಕಾ ಸರ್ಕಾರ; ಭಾರತಕ್ಕೆ ಹಿನ್ನಡೆ

Fugitive Mehul Choksi gets clean chit: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿದ್ದ ಮೇಹುಲ್‌ ಚೋಕ್ಸಿ ವಿರುದ್ಧದ ಪ್ರಕರಣವನ್ನು ಡೊಮಿನಿಕಾ ಸರ್ಕಾರ ರದ್ದುಗೊಳಿಸಿದೆ. ಈ ಮೂಲಕ ಭಾರತಕ್ಕೆ ಪ್ರಕರಣದಲ್ಲಿ ಭಾರೀ ಹಿಂದೇಟಾದಂತಾಗಿದೆ. 

Dominica government gives clean chit to fugitive mehul choksi
Author
Bengaluru, First Published May 21, 2022, 11:53 AM IST

ದೇಶದ ಅತಿದೊಡ್ಡ ಆರ್ಥಿಕ ವಂಚನೆಯ ಪ್ರಮುಖ ಆರೋಪಿ ಮೇಹುಲ್‌ ಚೋಕ್ಸಿ (Fugitive Mehulf Choksi) ವಿರುದ್ಧದ ಪ್ರಕರಣವನ್ನು ಡೊಮಿನಿಕಾ ಸರ್ಕಾರ (Dominican Government) ಕೈಬಿಟ್ಟಿದೆ. ಈ ಮೂಲಕ, ಚೋಕ್ಸಿಯನ್ನು ಕಸ್ಟಡಿಗೆ ಪಡೆಯುವ ಭಾರತದ ಯತ್ನಕ್ಕೆ ಹಿಂದೇಟಾದಂತಾಗಿದೆ. 2018ರಲ್ಲಿ ಮೇಹುಲ್‌ ಚೋಕ್ಸಿ ಭಾರತದಿಂದ ಪರಾರಿಯಾಗಿ ಆಂಟಿಗುವಾ ದ್ವೀಪ (Antigua and Barbuda) ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಅವರನ್ನು ಪತ್ತೆ ಹಚ್ಚಿದ್ದ ಭಾರತೀಯ ತನಿಖಾ ಸಂಸ್ಥೆ (Research and Analysis Wing) ಅವರನ್ನು ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಆದರೆ ಅಲ್ಲಿಂದ ಇದ್ದಕ್ಕಿದ್ದಂತೆ ಚೋಕ್ಸಿ ಮಾಯವಾಗಿದ್ದರು. ನಂತರ ಡೊಮಿನಿಕಾ ದ್ವೀಪದಲ್ಲಿ ವಾಸಿಸುತ್ತಿದ್ದರು. ಎಕ್ಟ್ರಾಡೀಷನ್‌ ಟ್ರೀಟಿ ಅನ್ವಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು. ಈ ಪ್ರಕರಣ ಸಂಬಂಧ ಮೇಹುಲ್‌ ಚೋಕ್ಸಿ ಪರವಾನಗಿ ಇಲ್ಲದೇ ಡೊಮಿನಿಕಾ ದೇಶಕ್ಕೆ ಬಂದಿದ್ದಾರೆ ಎಂಬ ಆರೋಪದ ಮೇಲೆ ಡೊಮಿನಿಕಾ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತ್ತು. 

ಇದೀಗ, ಮೇಹುಲ್‌ ಚೋಕ್ಸಿಗೆ ತಾತ್ಕಾಲಿಕ ಜಯ ಸಿಕ್ಕಿದೆ. ಆಂಟಿಗುವಾದಿಂದ ಮೇ 23, 2021ರಲ್ಲಿ ಮೇಹುಲ್‌ ಚೋಕ್ಸಿ ಕಣ್ಮರೆಯಾಗಿದ್ದರು. ಅದಾದ ಮರು ದಿನ ಡೊಮಿನಿಕಾದಲ್ಲಿ ಕಾಣಿಸಿಕೊಂಡಿದ್ದರು. ಬಹುಕೋಟಿ ವಂಚನೆ ಮಾಡಿರುವ ಚೋಕ್ಸಿ ನವೆಂಬರ್ 2917ರಲ್ಲಿ ಹೂಡಿಕೆ ಯೋಜನೆಯಡಿ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವ ಪಡೆದಿದ್ದರು. ಚೋಕ್ಸಿ ಪರ ವಕೀಲರು, ಭಾರತದ ರಾ ಅಧಕಾರಿಗಳು ಚೋಕ್ಸಿಯವರನ್ನು ಆಂಟಿಗುವಾದಿಂದ ಅಪಹರಿಸಿ, ಹಿಂಸೆ ನೀಡಿ ನಂತರ ಅವರನ್ನು ಡೊಮಿನಿಕಾಗೆ ತಲುಪಿಸಿದ್ದಾರೆ ಎಂದು ಆರೋಪಿಸಿದ್ದರು. 
ಹಂಗೇರಿಯ ಮಹಿಲೆ ಮತ್ತು ಇಬ್ಬರು ಬ್ರಿಟಿಷ್‌ ನಾಗರಿಕರಾದ ಗುರ್ಮಿತ್‌ ಸಿಂಗ್‌ ಮತ್ತು ಗುರ್ಜಿತ್‌ ಸಿಂಗ್‌ ಅವರ ಮೇಲೆ ಚೋಕ್ಸಿ ಪರ ವಕೀಲರು ಆರೋಪ ಮಾಡಿದ್ದರು. ಆದರೆ ಮೂವರೂ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಸುಮಾರು 7-8 ಜನರ ತಂಡ ತಮ್ಮನ್ನು ಅಪಹರಿಸಿ ಡೊಮಿನಿಕಾಗೆ ತಂದಿದ್ದಾರೆ ಎಂದು ಆರೋಪಿಸಿದ್ದರು. 

ಇದೀಗ ಡೊಮಿನಿಕಾ ಸರ್ಕಾರ ಚೋಕ್ಸಿ ಮೇಲಿನ ಪ್ರಕರಣವನ್ನು ಖುಲಾಸೆಗೊಳಿಸಿದೆ. ಆಂಟಿಗುವಾ ರಾಯಲ್‌ ಪೊಲೀಸರ ತನಿಖೆಯ ಪ್ರಕಾರ ಮೇಹುಲ್ ಚೊಕ್ಸಿ ಅಪಹರಣವಾಗಿದ್ದು ನಿಜ ಎಂಬ ಹಿನ್ನೆಲೆಯಲ್ಲಿ ಮೇಹುಲ್‌ ಚೋಕ್ಸಿ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿದೆ. ಡೊಮಿನಿಕಾದಲ್ಲಿ ಚೋಕ್ಸಿ ಬಂಧಿಸಿದಾಗ ವಿರೋಧ ಪಕ್ಷಗಳು ಡೊಮಿನಿಕಾ ಸರ್ಕಾರ ಮತ್ತು ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದವು. ಭಾರತದ ಜತೆ ಕೈಜೋಡಿಸಿ ಉದ್ಯಮಿಯನ್ನು ಅಪಹರಿಸಲು ಸಹಕರಿಸಿದ ಆರೋಪ ಮಾಡಲಾಗಿತ್ತು. 
ಈ ಬಗ್ಗೆ ಮಾತನಾಡಿದ ಮೇಹುಲ್‌ ಚೋಕ್ಸಿ ಪರ ವಕ್ತಾರ "ಮೇಹುಲ್‌ ಚೋಕ್ಸಿ ಅವರ ವಿರುದ್ಧ ಇದ್ದ ಪ್ರಕರಣವನ್ನು ರದ್ದುಗೊಳಿಸಲಾಗಿದೆ. ಇದರರ್ಥ ಅವರ ವಿರುದ್ಧ ಯಾವ ಪ್ರಕರಣವೂ ಇಲ್ಲ ಮತ್ತು ಅವರು ಆಂಟಿಗುವಾ ಮತ್ತು ಬರ್ಬುಡಾ ಮತ್ತು ಡೊಮಿನಿಕಾದಲ್ಲಿ ವಾಸಿಸಲು ಸ್ವತಂತ್ರರು," ಎಂದಿದ್ದಾರೆ. 

ಇದನ್ನೂ ಓದಿ: PMLA Cases : ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ!

ಮುಂದುವರೆದ ಅವರು, "ಮೇಹುಲ್‌ ಚೋಕ್ಸಿ ಅವರನ್ನು ಅವರ ಇಚ್ಛೆಯ ವಿರುದ್ಧ ಆಂಟಿಗುವಾದಿಂದ ಅಪಹರಿಸಿ ಬೋಟ್‌ ಮೂಲಕ ಡೊಮಿನಿಕಾಗೆ ಕರೆತಂದಿದ್ದಾರೆ. ಭಾರತದ ಏಜೆಂಟ್‌ಗಳು ಮೇಹುಲ್‌ ಚೋಕ್ಸಿ ಅವರನ್ನು ಅಪಹರಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಡೊಮಿನಿಕಾಗೆ ಅವರೇ ಕರೆದೊಯ್ದು ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇದು ಕಾನೂನುಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಈ ಘಟನೆಯಲ್ಲಿ ಭಾಗಿಯಾದ ಎಲ್ಲರಿಗೂ ತಕ್ಕ ಪಾಠ ಕಲಿಸುತ್ತೇವೆ. ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ," ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: PNB Scam: ಅನಾರೋಗ್ಯ ಕಾಡುತ್ತಿದೆ ನನ್ನನ್ನು ಮತ್ತೆ ಕಿಡ್ನಾಪ್ ಮಾಡಬಹುದು, ಚೋಕ್ಸಿ ವಿಡಿಯೋ ವೈರಲ್

ಮೇಹುಲ್‌ ಚೋಕ್ಸಿ ಮತ್ತು ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಳ್ಳು ದಾಖಲೆ ಸಲ್ಲಿಸಿ 13,500 ಕೋಟಿ ರೂಪಾಯಿಗಳನ್ನು ವಂಚಿಸಿದ್ದರು. ಪ್ರಕರಣ ಬೆಳಕಿಗೆ ಬರುವ ಮುನ್ನವೇ ಇಬ್ಬರೂ ದೇಶದಿಂದ ಪರಾರಿಯಾಗಿದ್ದರು. ನೀರವ್‌ ಮೋದಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಹಸ್ತಾಂತರಕ್ಕಾಗಿಯೂ ಭಾರತ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ. ನೀರವ್‌ ಮೋದಿ, ಮೇಹುಲ್‌ ಚೋಕ್ಸಿ ಮತ್ತು ವಿಜಯ್‌ ಮಲ್ಯಾ ವಿರುದ್ಧ ಸಾಕ್ಷಿಗಳಿದ್ದರೂ, ಕಾನೂನು ತೊಡಕುಗಳಿರುವುದರಿಂದ ಹಿನ್ನಡೆ ಉಂಟಾಗುತ್ತಿದೆ. ಕಳೆದೆರಡು ವರ್ಷಗಳಿಂದ ಈ ಮೂವರ ವಿರುದ್ಧವೂ ಭಾರತ ಸರ್ಕಾರ ಸತತ ಯತ್ನ ಮಾಡುತ್ತಿದೆಯಾದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

Follow Us:
Download App:
  • android
  • ios