ಅಮೆರಿಕ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಡಿಎನ್‌ಎ ಪತ್ತೆ? ಶತಮಾನಗಳ ಜನ್ಮ ರಹಸ್ಯ ಈಗ ಬಯಲು!
ಶತ ಶತಮಾನಗಳಿಂದಲೂ ಕ್ರಿಸ್ಟೋಫರ್ ಕೊಲಂಬಸ್ ಮೂಲದ ಬಗ್ಗೆ ಸಂಶೋಧಕರು ತಲೆ ಕೆಡಿಸಿಕೊಂಡಿದ್ದಾರೆ. ಇದೀಗ ಆತನ ಡಿಎನ್ಎ ಪತ್ತೆಯಾಗಿದೆ ಎನ್ನಲಾಗಿದ್ದು, ಇದರಿಂದ ಗುಟ್ಟಾಗಿದ್ದ ಸತ್ಯ ಬಯಲಾಗಿದೆ.
1451 ರಿಂದ 1506ರವರೆಗೆ ಬದುಕಿ ಅಮೆರಿಕ ಅನ್ವೇಷಣೆಗೆ ಕಾರಣನಾಗಿದ್ದ ಎನ್ನಲಾದ ಕ್ರಿಸ್ಟೋಫರ್ ಕೊಲಂಬಸ್ ಡಿಎನ್ಎ ಈಗ ಪತ್ತೆಯಾಗಿದ್ದು, ಶತಮಾನಗಳ ಬಳಿಕ ಆತನ ಜನ್ಮ ರಹಸ್ಯ ಬಯಲಾಗಿದೆ! 15ನೇ ಶತಮಾನದ ನಾವಿಕ ಕೊಲಂಬಸ್‌ನ ಮೂಲ ಜನ್ಮಸ್ಥಳ ಯಾವುದು ಎಂಬ ಬಗ್ಗೆ ಹಲವಾರು ವರ್ಷಗಳಿಂದ ವ್ಯಾಪಕ ಚರ್ಚೆ ನಡೆಯುತ್ತಲೇ ಇದೆ. ಆದರೆ ಈತನದ್ದೇ ಎಂದು ನಂಬಲಾಗಿರುವ ಡಿಎನ್ಎಯನ್ನು ಸ್ಪೇನ್ ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದು, ಈತನ ಜನ್ಮಸ್ಥಳ ಇಟಲಿಯಲ್ಲ ಬದಲಿಗೆ ಈತನೊಬ್ಬ ಯಹೂದಿ, ಆತ ಸ್ಪೇನ್‌ನ ಸೆಫಾರ್ಡಿಕ್ ಮೂಲದವನು ಎಂದೇ ವಿಶ್ಲೇಷಿಸಲಾಗಿದೆ. ಯಹೂದಿಗಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಪ್ಪಿಸಲು ಆತ ತನ್ನ ನೈಜತೆಯನ್ನು ಮರೆಮಾಚಿದ್ದ ಎಂದು ಸಂಶೋಧಕರು ಈಗ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಯವರೆಗೆ ಈತ ಇಟಲಿಯ ವಾಯವ್ಯ ಕರಾವಳಿಯ ಜೆನೋವಾದವ ಎಂದೇ ಇತಿಹಾಸಕಾರರು ನಂಬಿದ್ದರು. ಆದರೆ ಈಗ ಸೆವಿಲ್ಲೆ ಕ್ಯಾಥೆಡ್ರಲ್‌ನಲ್ಲಿ ಇರುವ ಈತನದ್ದು ಎನ್ನಲಾದ ಡಿಎನ್ಎಯನ್ನು ಪರೀಕ್ಷಿಸಿದ ಬಳಿಕ ಇದರ ಫಲಿತಾಂಶ ಬುಡಮೇಲಾಗಿದೆ. ಸಂಶೋಧನಾ ವರದಿಯ ಕುರಿತು ವಿಧಿವಿಜ್ಞಾನ ಪರಿಣತ ಹಾಗೂ ಸಂಶೋಧಕ ಮಿಗೂಯೆಲ್ ಲೊರೆಂಟೆ ಅವರು ತಮ್ಮ ಕೊಲಂಬಸ್ ಡಿಎನ್ಎ: ದಿ ಟ್ರೂ ಒರಿಜಿನ್' ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದಲ್ಲಿ ಪ್ರಚುರಪಡಿಸಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ಇತ್ತೀಚೆಗೆ ಸ್ಪೇನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಅವರು ಹೇಳುವಂತೆ, ತಮ್ಮ ಬಳಿ ಕ್ರಿಸ್ಟೋಫರ್ ಕೊಲಂಬಸ್ ಹಾಗೂ ಆತನ ಮಗ ಹೆರ್ನಾಂಡೊ ಕೊಲೊನ್ ಇಬ್ಬರ ಡಿಎನ್‌ಎಗಳೂ ಇವೆ. ಎರಡೂ ವೈ (ಪುರುಷ) ವರ್ಣತಂತುಗಳು ಮತ್ತು ಹೆರ್ನಾಂಡೊ ತಾಯಿಯ ಮೈಟೋಕಾಂಡ್ರಿಯ ಡಿಎನ್‌ಎ ಎಲ್ಲವನ್ನೂ ಸಂಶೋಧನೆಗೆ ಒಳಪಡಿಸಲಾಗಿದೆ. ಇವೆಲ್ಲವೂ ಯಹೂದಿ ಮೂಲಕ್ಕೆ ಹೋಲುವ ಲಕ್ಷಣಗಳನ್ನು ತೋರಿಸಿವೆ ಎಂದು ತಿಳಿಸಲಾಗಿದೆ.
ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್ 1 ನಟಿ ಆಗ್ತಾರೆ! ಆಮೀರ್ ಖಾನ್ ಹೇಳಿದ್ದೇನು ಕೇಳಿ
ಸ್ಪೇನ್‌ನಲ್ಲಿ ಆ ಸಮಯಕ್ಕೆ ಧಾರ್ಮಿಕ ಹಗೆತನ ವ್ಯಾಪಕವಾಗಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಕೊಲಂಬಸ್ ತನ್ನ ಯಹೂದಿ ಮೂಲವನ್ನು ಮುಚ್ಚಿಟ್ಟಿರಬಹುದು ಅಥವಾ ಕ್ಯಾಥೋಲಿಸಿಸಂಗೆ ಮತಾಂತರವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ 2003ರಿಂದ ಕೊಲಂಬಸ್ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಗ್ರೆನಡಾ ವಿಶ್ವವಿದ್ಯಾಲಯದ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರೊಫೆಸರ್ ಜಾಸ್ ಆಂಟೋನಿಯೊ ಲೋರೆಂಟೆ ಹಾಗೂ ಇತಿಹಾಸಕಾರ ಮರ್ಸಿಯೆಲ್ ಕ್ಯಾಸ್ಟ್ರೋ ಅವರು ಸೆವಿಲ್ಲೆ ಕ್ಯಾಥೆಡ್ರಲ್‌ನಿಂದ ಕೊಲಂಬಸ್‌ನದ್ದು ಎನ್ನಲಾದ ದೇಹದ ಭಾಗವನ್ನು ಹೊರತೆಗೆದು ಅಂದಿನಿಂದಲೂ ಸಂಶೋಧನೆ ಆರಂಭಿಸಿದ್ದು, ಇದರಿಂದ ತಮಗೆ ಸತ್ಯ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಇದರ ಹೊರತಯಾಗಿಯೂ ಕೊಲಂಬಸ್‌ನ ನಿಜವಾದ ಜನ್ಮಸ್ಥಳ ಯಾವುದು ಎಂದು ಸ್ಪಷ್ಟ ತೀರ್ಮಾನಕ್ಕೆ ಇದುವರೆಗೆ ಬರಲಿಲ್ಲ. ಆದರೆ ಸ್ಪೇನ್ ವ್ಯಾಲೆಂಸಿಯಾ ಅಥವಾ ಪಶ್ಚಿಮ ಯೂರೋಪ್‌ನ ಯಾವುದಾದರೂ ಪ್ರದೇಶ ಇದ್ದಿರಬಹುದು ಎಂದು ಊಹಿಸಲಾಗಿದೆ. ಹಲವು ಶತಮಾನಗಳಿಂದ ನಡೆಯುತ್ತಿರುವ ಕೊಲಂಬಸ್‌ನ ಹುಟ್ಟಿನ ಕುರಿತಾದ ಅಸಂಖ್ಯ ಸಂಶೋಧನೆ, ಪ್ರತಿಪಾದನೆಗಳನ್ನು ತಳ್ಳಿಹಾಕಿರುವ ಲೋರೆಂಟೆ, ಡಿಎನ್‌ಎ ಫಲಿತಾಂಶವು ಬಹುತೇಕ ನಿಖರ ವಿಶ್ವಾಸಾರ್ಹ ಎಂದಿದ್ದಾರೆ. ಈ ಮೊದಲು ನಡೆದಿರುವ ಸಂಶೋಧನೆ ಪ್ರಕಾರ ಕೊಲಂಬಸ್ ಪೋಲ್ಯಾಂಡ್, ಪೋರ್ಚುಗಲ್‌ನಂತಹ ದೇಶದಲ್ಲಿಯೂ ಜನಿಸಿರಬಹುದು ಎಂಬ ವಾದಗಳಿವೆ.