ಟೆಹ್ರಾನ್‌[ಜ.12]: 176 ಜನರನ್ನು ಬಲಿ ಪಡೆದ ಇತ್ತೀಚಿನ ಉಕ್ರೇನ್‌ ವಿಮಾನ ದುರಂತಕ್ಕೆ ತಾನೇ ಕಾರಣ ಎಂದು ಕೊನೆಗೂ ಇರಾನ್‌ ತಪ್ಪೊಪ್ಪಿಕೊಂಡಿದೆ. ವಿಮಾನ ಅಪಘಾತಕ್ಕೀಡಾಗಿದೆ. ಅದರ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ವಾದಿಸಿಕೊಂಡೇ ಬಂದಿದ್ದ ಇರಾನ್‌, ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಅಲ್ಲದೆ ಈ ಕುರಿತು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವದ್‌ ಝರೀಪ್‌ ಕ್ಷಮೆಯನ್ನೂ ಯಾಚಿಸಿದ್ದಾರೆ.

ಇದೇ ವೇಳೆ ಇರಾನ್‌ ದಾಳಿಯಲ್ಲಿ ತನ್ನ ವಿಮಾನ ಪತನಗೊಂಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸಿ$್ಕ, ತಪ್ಪಿತಸ್ಥರನ್ನು ಇರಾನ್‌ ಶಿಕ್ಷಿಸಬೇಕು ಜೊತೆಗೆ ಘಟನೆ ಸಂಬಂಧ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸೂಚಿಸಿದ್ದಾರೆ.

ಅಮೆರಿಕದ ಯುದ್ಧ ವಿಮಾನವೆಂದು ಭಾವಿಸಿ ಉಕ್ರೇನ್‌ ವಿಮಾನದ ಮೇಲೆ ಇರಾನ್‌ ದಾಳಿ!

ನಾವೇ ಹೊಡೆದಿದ್ದು?:

ಇರಾನ್‌ ಮತ್ತು ಅಮೆರಿಕದ ನಡುವಿನ ಯುದ್ಧ ಭೀತಿ ನಡುವೆಯೇ ಟೆಹ್ರಾನ್‌ ಹೊರವಲಯಲ್ಲಿ ಸಂಭವಿಸಿದ್ದ ಉಕ್ರೇನ್‌ ವಿಮಾನ ಅಪಘಾತ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಅಮೆರಿಕದ ಜೊತೆಗಿನ ತ್ವೇಷಮಯ ವಾತಾವರಣ ಸಂದರ್ಭದಲ್ಲೇ ರಾಜಧಾನಿ ಟೆಹ್ರಾನ್‌ನ ಮಿಲಿಟರಿ ಪ್ರದೇಶವೊಂದರ ಮೇಲೆ ಅನುಮಾನಾಸ್ಪದ ಹಾರಾಟ ಕಂಡುಬಂದ ಹಿನ್ನೆಲೆಯಲ್ಲಿ ನಮ್ಮ ಕ್ರಾಂತಿಕಾರಿ ಸೇನೆಯ ಯೋಧರು, ಕ್ಷಿಪಣಿ ದಾಳಿ ಮೂಲಕ ಅದನ್ನು ಹೊಡೆದುರುಳಿಸಿದ್ದರು.

ಇದಕ್ಕಾಗಿ ತಾನು ಕ್ಷಮೆ ಯಾಚಿಸುತ್ತೇನೆ. ಜೊತೆಗೆ, ಮುಂದಿನ ದಿನಗಳಲ್ಲಿ ಇಂಥ ತಪ್ಪುಗಳು ಮರುಕಳಿಸದಿರುವಂತೆ ಎಚ್ಚರ ವಹಿಸುವುದಾಗಿ ಇರಾನ್‌ ಸರ್ಕಾರ ಮತ್ತು ಸೇನೆ ಹೇಳಿಕೊಂಡಿವೆ. ಅಲ್ಲದೆ ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ಪ್ರಯಾಣಿಕರ ವಿಮಾನ ಪತನಕ್ಕೆ ಕಾರಣೀಭೂತರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಪರಿಸ್ಥಿತಿ ಎದುರಿಸಲು ಸಜ್ಜಾಗಿ

ಅಪಘಾತಕ್ಕೆ ತುತ್ತಾದ ವಿಮಾನದಲ್ಲಿ ಹೆಚ್ಚಿನ ಪ್ರಯಾಣಿಕರು ಇರಾನ್‌ ಹಾಗೂ ಇರಾನ್‌-ಕೆನಡಾ ಪ್ರಜೆಗಳೇ ಹೆಚ್ಚಾಗಿದ್ದ ಕಾರಣಕ್ಕೆ, ದೇಶದ ನಾಗರಿಕರು ಇರಾನ್‌ ಸರ್ಕಾರದ ವಿರುದ್ಧವೇ ಪ್ರತಿಭಟನೆ ಅಥವಾ ದಂಗೆ ಏಳುವ ಭೀತಿ ಎದುರಾಗಿದೆ. ಹೀಗಾಗಿ, ಈ ಮಾಹಿತಿ ಬಹಿರಂಗದಿಂದ ಎದುರಾಗುವ ಯಾವುದೇ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿರುವಂತೆ ಇರಾನ್‌ ಪರಮೋಚ್ಚ ನಾಯಕ ಅಯತುಲ್ಲಾ ಅಲಿ ಖಮೇನಿ ಅವರು, ಸರ್ಕಾರ ಮತ್ತು ಸೇನೆಗೆ ಸೂಚನೆ ನೀಡಿದ್ದಾರೆ.

ಉಕ್ರೇನ್‌ ವಿಮಾನ ಪತನ: 180 ಪ್ರಯಾಣಿಕರ ಸಾವು!