Asianet Suvarna News Asianet Suvarna News

ಅಮೆರಿಕದ ಯುದ್ಧ ವಿಮಾನವೆಂದು ಭಾವಿಸಿ ಉಕ್ರೇನ್‌ ವಿಮಾನದ ಮೇಲೆ ಇರಾನ್‌ ದಾಳಿ!

ಅಮೆರಿಕದ ಯುದ್ಧ ವಿಮಾನವೆಂದು ಭಾವಿಸಿ ಉಕ್ರೇನ್‌ ವಿಮಾನದ ಮೇಲೆ ಇರಾನ್‌ ದಾಳಿ!| ವಿಮಾನ ಆಕಾಶದಲ್ಲೇ ಬೆಂಕಿಯಿಂದ ಹೊತ್ತಿ ಉರಿದ ವಿಡಿಯೋ ರಿಲೀಸ್‌| ಇದರ ಬೆನ್ನಲ್ಲೇ, ತನಿಖೆಯಲ್ಲಿ ಪಾಲ್ಗೊಳ್ಳಲು ಬೋಯಿಂಗ್‌ಗೆ ಆಹ್ವಾನ| ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ರಾಷ್ಟ್ರಗಳಿಗೂ ಇರಾನ್‌ ಆಹ್ವಾನ

Video shows moment Ukrainian plane plummets to ground after being shot down by Iran missile
Author
Bangalore, First Published Jan 11, 2020, 8:25 AM IST

ಟೆಹ್ರಾನ್‌[ಜ.11]: ಇತ್ತೀಚೆಗಷ್ಟೇ 176 ಮಂದಿ ಪ್ರಯಾಣಿಕರನ್ನು ಬಲಿಪಡೆದ ಉಕ್ರೇನ್‌ ವಿಮಾನ ದುರಂತದಲ್ಲಿ ತನ್ನ ಪಾತ್ರವಿಲ್ಲ ಎಂದು ಇರಾನ್‌ ಪ್ರತಿಪಾದಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಇರಾನ್‌ ಸೇನೆಯೇ ಆಕಸ್ಮಿಕವಾಗಿ ಕ್ಷಿಪಣಿ ದಾಳಿ ಮೂಲಕ ಉಕ್ರೇನ್‌ನ ವಿಮಾನ ಹೊಡೆದುರುಳಿಸಿದೆ ಎಂದು ಸಾಕ್ಷ್ಯ ನೀಡಬಹುದಾದ ವಿಡಿಯೋಗಳು ಬಿಡುಗಡೆಯಾಗಿವೆ.

ಈ ವಿಡಿಯೋ ಬಿಡುಗಡೆ ಬೆನ್ನಲ್ಲೇ, ಮೊದಲಿಗೆ ಇದು ವಿಮಾನದ ಇಂಜಿನ್‌ ವೈಫಲ್ಯದಿಂದ ಸಂಭವಿಸಿದ ದುರಂತವಾಗಿದ್ದು, ಬ್ಲಾಕ್‌ ಬಾಕ್ಸ್‌ ಅನ್ನು ಬೋಯಿಂಗ್‌ ಕಂಪನಿ ಅಥವಾ ಅಮೆರಿಕಕ್ಕೆ ನೀಡುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ಇರಾನ್‌, ಇದೀಗ ಈ ಪ್ರಕರಣದ ತನಿಖೆಗಾಗಿ ಬೋಯಿಂಗ್‌ ಸಂಸ್ಥೆಯನ್ನು ಆಹ್ವಾನಿಸಿದೆ. ಅಲ್ಲದೆ, ಉಕ್ರೇನ್‌ ಹಾಗೂ ವಿಮಾನ ದುರಂತದಲ್ಲಿ ಸಾವಿಗೀಡಾದ ರಾಷ್ಟ್ರಗಳ ತಜ್ಞರನ್ನು ಸಹ ತನಿಖೆಗೆ ಆಹ್ವಾನಿಸಲಾಗಿದೆ ಎಂದು ಇರಾನ್‌ ವಿದೇಶಾಂಗ ಇಲಾಖೆ ತಿಳಿಸಿದೆ.

ಉಕ್ರೇನ್‌ ವಿಮಾನ ಪತನ: 180 ಪ್ರಯಾಣಿಕರ ಸಾವು

ಉಕ್ರೇನ್‌ ಮೂಲದ ವಿಮಾನ ಟೆಹ್ರಾನ್‌ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ ಎರಡು ಕ್ಷಿಪಣಿಗಳನ್ನು ಉಡಾಯಿಸಿ ಹೊಡೆದುರುಳಿಸಿರುವುದು ಉಪಗ್ರಹ ಮಾಹಿತಿಯಿಂದ ದೃಢವಾಗಿದೆ ಎಂದು ಅಮೆರಿಕ ಹೇಳಿದೆ. ಇದಕ್ಕೆ ಪೂರಕವೆಂಬಂತೆ, ವಿಮಾನವು ನಿಲ್ದಾಣದಿಂದ ಹೊರಡು 2 ನಿಮಿಷದಲ್ಲೇ ಆಗಸದಲ್ಲಿ ಯಾವುದಕ್ಕೋ ಡಿಕ್ಕಿ ಹೊಡೆದು ಆಗಸದಲ್ಲೇ ಬೆಂಕಿ ಉಂಡೆಯಂತೆ ಹೊತ್ತಿ ಉರಿದ ವಿಡಿಯೋ ಬಿಡುಗಡೆಯಾಗಿದೆ.

ಈ ಆರೋಪಕ್ಕೆ ಪೂರಕವೆಂಬಂತೆ, ವಿಮಾನ ಉರುಳಿ ಬಿದ್ದ ಸ್ಥಳದಲ್ಲೇ ಇರಾನ್‌ನ ಕ್ಷಿಪಣಿಯ ಅವಶೇಷಗಳು ಪತ್ತೆಯಾಗಿವೆ. ಹೀಗಾಗಿ ಉಕ್ರೇನ್‌ ವಿಮಾನವನ್ನು ಅಮೆರಿಕದ ಯುದ್ಧ ವಿಮಾನವೆಂದೋ ಅಥವಾ ಕ್ಷಿಪಣಿಯೆಂದೋ ತಪ್ಪಾಗಿ ಭಾವಿಸಿ, ದಾಳಿ ನಡೆಸಿ ಹೊಡೆದುರುಳಿಸಿರುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಇರಾನ್‌ ಅಧಿಕಾರಿಗಳು ಹಾಗೂ ಇರಾನ್‌ ಕ್ಯಾಬಿನೆಟ್‌ ವಕ್ತಾರ ಅಲಿ ರಾಬೀ, ಇಂಥ ಆರೋಪಗಳು ವಿಮಾನ ದುರುಂತದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಗಳ ನೋವಿಗೆ ಉಪ್ಪು ಸವರಿದಂತೆ ಎಂದು ಹೇಳಿದ್ದಾರೆ. ಒಂದು ವೇಳೆ ವಿಮಾನವನ್ನು ಇರಾನ್‌ ರಾಷ್ಟ್ರವೇ ಹೊಡೆದುರುಳಿಸಿದೆ ಎಂಬುದಕ್ಕೆ ಪೂರಕ ದಾಖಲೆಗಳನ್ನು ಅಮೆರಿಕ ಅಥವಾ ಕೆನಡಾ ಒದಗಿಸಿದ್ದೇ ಆದಲ್ಲಿ, ಇರಾನ್‌ ಸಾರ್ವಜನಿಕರ ಅಭಿಪ್ರಾಯವೇ ನಾಟಕೀಯ ತಿರುವು ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios