ಜಾಫ್ನಾ(ಮಾ.08): ಇತ್ತೀಚೆಗೆ ಭಾರತದ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಅವರು, ‘ಶ್ರೀಲಂಕಾದಲ್ಲೂ ಬಿಜೆಪಿ ಸ್ಥಾಪಿಸುವ ಉದ್ದೇಶವನ್ನು ನಮ್ಮ ಪಕ್ಷದ ಮುಖಂಡ ಅಮಿತ್‌ ಶಾ ಹೊದಿದ್ದಾರೆ’ ಎಂದು ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಲಂಕಾದ ಜಾಫ್ನಾದಲ್ಲಿ ‘ಶ್ರೀಲಂಕಾ ಭಾರತೀಯ ಜನತಾ ಪಕ್ಷ’ (ಶ್ರೀಲಂಕಾ ಬಿಜೆಪಿ) ಸ್ಥಾಪನೆಯಾಗಿದೆ! ಈ ಕುರಿತ ಫೋಟೋಗಳು ವೈರಲ್‌ ಆಗಿವೆ!!

ಹೌದು. ಅಚ್ಚರಿ ಎನ್ನಿಸಿದರೂ ನಿಜ. ಜಾಫ್ನಾದಲ್ಲಿ ವಿ. ಮುತ್ತುಸಾಮಿ ಎಂಬುವರು ಈ ಪಕ್ಷ ಸ್ಥಾಪಿಸಿದ್ದಾರೆ. ಪಕ್ಷಕ್ಕೆ ತಮಿಳಿನಲ್ಲಿ ‘ಇಲನಾಕಿ ಭಾರತೀಯ ಜನತಾ ಕಚ್ಚಿ’ (ಐಬಿಜೆಕೆ), ಇಂಗ್ಲಿಷ್‌ನಲ್ಲಿ ‘ಶ್ರೀಲಂಕಾ ಭಾರತೀಯ ಜನತಾ ಪಕ್ಷ’ (ಎಸ್‌ಎಲ್‌ಬಿಜೆಪಿ) ಹಾಗೂ ಸಿಂಹಳಿಯಲ್ಲಿ ‘ಶ್ರೀಲಂಕಾ ಭಾರತೀಯ ಜನತಾ ಪಕ್ಷ್ಯ’ (ಎಸ್‌ಎಲ್‌ಬಿಜೆಪಿ) ಎಂದು ಕರೆಯುತ್ತಾರೆ. ಇದು ‘ಬಿಜೆಪಿಯ ಶ್ರೀಲಂಕಾ ಶಾಖೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದೆ.

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮುತ್ತುಸ್ವಾಮಿ, ‘ನಾನು ಮಾ.6ರಂದು ಪಕ್ಷದ ಸ್ಥಾಪನೆ ಮಾಡಿದ್ದು ನಿಜ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಇದು ಲಂಕಾ ತಮಿಳರ ಹಿತ ಕಾಯುವ ಪಕ್ಷ. ಭಾರತದ ಬಿಜೆಪಿಗೂ ನಮಗೂ ಸಂಬಂಧ ಇಲ್ಲ, 6 ವರ್ಷ ಹಿಂದೆಯೇ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸಿದ್ದೆವು’ ಎಂದಿದ್ದಾರೆ.