ಭಾರತ-ಚೀನಾ ನಡುವೆ ಯುದ್ಧದ ಭೀತಿ ತೀವ್ರಗೊಂಡಿದೆ. ಉಭಯ ದೇಶಗಳ ಮಿಲಿಟರಿ ಪ್ರಾಬಲ್ಯವನ್ನು ಹೋಲಿಸಿ ನೋಡಿದರೆ ಭಾರತದ ಸೇನೆಯಲ್ಲಿ ಚೀನಾಕ್ಕಿಂತ ಹೆಚ್ಚಿರುವುದು ಸೈನಿಕರ ಸಂಖ್ಯೆ ಮಾತ್ರ. ಯುದ್ಧ ವಿಮಾನಗಳು, ಹಡಗುಗಳು, ಹೆಲಿಕಾಪ್ಟರ್‌, ಟ್ಯಾಂಕ್‌, ಶಸ್ತ್ರಾಸ್ತ್ರಗಳೂ ಸೇರಿದಂತೆ ಇನ್ನೆಲ್ಲ ಮೂಲಸೌಕರ್ಯ ಚೀನಾದ ಬಳಿಯೇ ಹೆಚ್ಚಿದೆ. ಆದರೂ ಈ ವಿಷಯದಲ್ಲಿ ಭಾರತ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಏಕೆಂದರೆ ವ್ಯೂಹಾತ್ಮಕವಾಗಿ, ರಾಜತಾಂತ್ರಿಕವಾಗಿ ಮತ್ತು ಇತರ ದೇಶಗಳ ಬೆಂಬಲ ಪಡೆದುಕೊಳ್ಳುವ ವಿಷಯದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ. ಆದರೆ, ಚೀನಾ ಈಗ ಯುದ್ಧ ನಡೆಸುವುದಾದರೆ ಸಾಂಪ್ರದಾಯಿಕ ಯುದ್ಧದ ಬದಲಾಗಿ ಸೈಬರ್‌ ಯುದ್ಧವನ್ನೇ ದೊಡ್ಡ ಪ್ರಮಾಣದಲ್ಲಿ ನಡೆಸಲು ರಹಸ್ಯವಾಗಿ ಸಿದ್ಧತೆ ಮಾಡಿಕೊಂಡಿದೆ. ಇದು ಭಾರತವನ್ನು ನಿಜಕ್ಕೂ ಕಂಗೆಡಿಸುವ ವಿಚಾರ. ಏಕೆಂದರೆ ಈ ವಿಷಯದಲ್ಲಿ ಚೀನಾದ ಮುಂದೆ ಭಾರತದ ಸಿದ್ಧತೆ ಯಾತಕ್ಕೂ ಸಾಲದು. ಸೈಬರ್‌ ಯುದ್ಧಕ್ಕೆ ಚೀನಾ ಏನೇನು ತಯಾರಿ ಮಾಡಿಕೊಂಡಿದೆ? ವಿಸ್ತೃತ ಮಾಹಿತಿ ಇಲ್ಲಿದೆ.

ಯುದ್ಧೋನ್ಮಾದ: 12 ಸುಖೋಯ್‌, 21 ಮಿಗ್‌ ವಿಮಾನ ಖರೀದಿಗೆ ಭಾರತ ನಿರ್ಧಾರ..!

ಸೈಬರ್‌ ಯುದ್ಧಕ್ಕೆಂದೇ ಪ್ರತ್ಯೇಕ ವಿಭಾಗ

ಭಾರತದಲ್ಲಿ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಎಂಬ ಮೂರು ವಿಭಾಗಗಳಿವೆ. ಆದರೆ, ಚೀನಾದಲ್ಲಿ ಐದು ವಿಭಾಗಗಳಿವೆ. ಅವುಗಳಲ್ಲಿ ಸೈಬರ್‌ ವಿಭಾಗವೂ ಒಂದು. ಚೀನಾದಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆ, ಅಂತರಿಕ್ಷ ಪಡೆ ಹಾಗೂ ಸೈಬರ್‌ ಪಡೆ ಎಂಬ ವಿಭಾಗಗಳಿವೆ. ಅಂತರಿಕ್ಷದಲ್ಲಿ ಯುದ್ಧ ನಡೆದರೆ ಅಂತರಿಕ್ಷ ಪಡೆ ಅದನ್ನು ಎದುರಿಸಲಿದೆ. ಹ್ಯಾಕಿಂಗ್‌ ಮಾಡುವುದು ಹಾಗೂ ಇಂಟರ್ನೆಟ್‌ ಮೂಲಕ ಬೇರೆ ದೇಶಗಳ ಸೈಬರ್‌ ಸೌಕರ್ಯಗಳನ್ನು ಧ್ವಂಸಗೊಳಿಸುವ ಕೆಲಸವನ್ನು ಸೈಬರ್‌ ಪಡೆ ಮಾಡಲಿದೆ.

1997 ರಿಂದಲೇ ಸೈಬರ್‌ ಯುದ್ಧಕ್ಕೆ ತಯಾರಿ

ಭಾರತದಲ್ಲಿ ಇವತ್ತಿಗೂ ಸೈಬರ್‌ ಪಡೆ ಎಂಬುದು ಇಲ್ಲ. ಆದರೆ, ಚೀನಾ 23 ವರ್ಷಗಳ ಹಿಂದೆಯೇ ಸೈಬರ್‌ ಯುದ್ಧಕ್ಕೆ ತಯಾರಿ ಆರಂಭಿಸಿದೆ. 1997ರಲ್ಲಿ ಅಮೆರಿಕ ಹಾಗೂ ಇತರ ಪಾಶ್ಚಾತ್ಯ ರಾಷ್ಟ್ರಗಳ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡಲು 100 ಸದಸ್ಯರ ಘಟಕವೊಂದನ್ನು ಚೀನಾದ ಸೆಂಟ್ರಲ್‌ ಮಿಲಿಟರಿ ಕಮಿಷನ್‌ ಆರಂಭಿಸಿತ್ತು. ಅಂದಿನಿಂದ ಈ ಘಟಕ ಬೆಳೆಯುತ್ತಾ ಹೋಗಿ ಅತ್ಯಾಧುನಿಕ ಸೈಬರ್‌ ಯುದ್ಧ ಸಲಕರಣೆ ಮತ್ತು ತಂತ್ರಗಳನ್ನು ತನ್ನದಾಗಿಸಿಕೊಳ್ಳುತ್ತಾ ಸಾಗಿದೆ. ಸೈಬರ್‌ ಸಮರಕ್ಕೆ ನೆರವು ನೀಡುವುದಕ್ಕೆಂದೇ ಚೀನಾದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಿವೆ. ಸೈಬರ್‌ ಯುದ್ಧಕ್ಕೆಂದು ಚೀನಾ ಪ್ರತ್ಯೇಕ ನೀತಿ ಕೂಡ ಹೊಂದಿದೆ.

ಚೀನಾದ ರಹಸ್ಯ ಪತ್ತೆಹಚ್ಚಿದ್ದು ಅಮೆರಿಕ!

23 ವರ್ಷಗಳಿಂದ ಚೀನಾ ತನ್ನ ಸೈಬರ್‌ ಪಡೆಯ ಮೂಲಕ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡುತ್ತಾ, ಸೂಕ್ಷ್ಮ ಮಾಹಿತಿಗಳನ್ನು ಕದಿಯುತ್ತಾ ಬಂದಿದ್ದರೂ ಅದು ಮೊದಲ ಬಾರಿ ಜಗತ್ತಿಗೆ ಗೊತ್ತಾಗಿದ್ದು 2013ರಲ್ಲಿ. ಅಮೆರಿಕದ ಸೈಬರ್‌ ಸೆಕ್ಯುರಿಟಿ ಸಂಸ್ಥೆ ಇದನ್ನು ಪತ್ತೆಹಚ್ಚಿತು. ಆಗ ಜಗತ್ತಿನಾದ್ಯಂತ ನಡೆದ ದೊಡ್ಡ ದೊಡ್ಡ ಸೈಬರ್‌ ದಾಳಿಗಳ ಹಿಂದೆ ಚೀನಾದ ಸೇನೆ ಇದೆ ಎಂಬ ಸಂಗತಿ ಬೆಳಕಿಗೆ ಬಂದಿತು.

ಸೇನೆಗೆ ಪರಮಾಧಿಕಾರ, ಶಸ್ತ್ರಾಸ್ತ್ರ ಬಳಕೆಗೂ ಅನುಮತಿ: ತಂಟೆಗೆ ಬಂದ್ರೆ ಚೀನಾಗೆ ಶಾಸ್ತಿ!

ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ (ಭಾರತ ಇದೇ ಪ್ರದೇಶದಲ್ಲಿದೆ) ಯುದ್ಧ ನಡೆದರೆ ಅಮೆರಿಕದ ಸೈಬರ್‌ ಪಡೆಯಿಂದ ಭಾರಿ ಅಪಾಯವಿದೆ. ‘ಮಾಹಿತಿ ಯುದ್ಧ’ದ ಮೂಲಕ ಚೀನಾ ಯಾವ ದೇಶವನ್ನು ಬೇಕಾದರೂ ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬುದನ್ನು ಅಮೆರಿಕ ಕಂಡುಕೊಂಡಿತು. ಅಮೆರಿಕಕ್ಕೆ ಚೀನಾದ ಸೈಬರ್‌ ಪಡೆಯ ಬಗ್ಗೆ ಮಾಹಿತಿ ದೊರೆತ ಮೇಲೂ 2018ರಲ್ಲಿ ಈ ಪಡೆ ಅಮೆರಿಕದ ಸೇನಾಪಡೆಯ ಜೊತೆ ಕೆಲಸ ಮಾಡುವ ಖಾಸಗಿ ಗುತ್ತಿಗೆದಾರ ಕಂಪನಿಯೊಂದರ 614 ಜಿ.ಬಿ. ರಹಸ್ಯ ಮಾಹಿತಿಗಳನ್ನು ಕದ್ದಿತ್ತು. ಇದರಿಂದ ಅಮೆರಿಕದ ನೌಕಾಪಡೆಯ ರಹಸ್ಯಗಳನ್ನೆಲ್ಲ ಚೀನಾ ತಿಳಿದುಕೊಂಡಿತ್ತು.

ಚೀನಾ ಏಕೆ ಸೈಬರ್‌ ಪಡೆ ಕಟ್ಟಿಕೊಂಡಿದೆ?

1. 2025ರ ವೇಳೆಗೆ ಚೀನಾ ಜಾಗತಿಕ ಇಂಟರ್ನೆಟ್‌ ಸೂಪರ್‌ಪವರ್‌ ರಾಷ್ಟ್ರವಾಗಿ ಹೊರಹೊಮ್ಮುವ ಗುರಿ ಹಾಕಿಕೊಂಡಿದೆ. ತನ್ಮೂಲಕ ತನ್ನ ಸೇನಾಪಡೆಯ ಇತರ ವಿಭಾಗಗಳಿಗೆ ಇರುವಷ್ಟೇ ಶಕ್ತಿಯನ್ನು ಸೈಬರ್‌ ಪಡೆಗೂ ಸಂಪಾದನೆ ಮಾಡಿಕೊಳ್ಳಲು ಹೊರಟಿದೆ.

2. ಮುಂದೆ ಯುದ್ಧ ನಡೆದರೆ ಚೀನಾ ತನ್ನ ಸಾಂಪ್ರದಾಯಿಕ ಸೈನಿಕ ಪಡೆಗಳನ್ನು ಮೊದಲಿಗೆ ಬಳಸುವ ಬದಲು ಸೈಬರ್‌ ಪಡೆಯನ್ನೇ ಬಳಸಲು ನಿರ್ಧರಿಸಿದೆ. ತನ್ಮೂಲಕ ತನಗೆ ಹೆಚ್ಚು ನಷ್ಟವಾಗುವುದನ್ನು ತಪ್ಪಿಸಿಕೊಳ್ಳಲಿದೆ.

3. ಯುದ್ಧ ನಡೆದರೆ ಬೇರೆ ದೇಶಗಳ ಉಪಗ್ರಹಗಳನ್ನು ನಿಷ್ಕಿ್ರಯಗೊಳಿಸಿ ಆ ದೇಶದ ಮಾಹಿತಿ ವ್ಯವಸ್ಥೆಯನ್ನೇ ಮಣ್ಣುಪಾಲು ಮಾಡುವ ಉದ್ದೇಶ ಹೊಂದಿದೆ. ಹೀಗೆ ಮಾಡಿದರೆ ಸೇನಾಪಡೆಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದೇ ಆ ದೇಶಗಳಿಗೆ ಕಷ್ಟವಾಗಿ ಯುದ್ಧ ಮಾಡುವುದು ಅಸಾಧ್ಯವಾಗಲಿದೆ.

4. ತಾನು ಯುದ್ಧ ನಡೆಸುವ ದೇಶ ಯಾವ್ಯಾವ ವಿಭಾಗದಲ್ಲಿ ದುರ್ಬಲವಾಗಲಿದೆ ಎಂಬುದನ್ನು ಚೀನಾ ತನ್ನ ಸೈಬರ್‌ ಪಡೆಯ ಮೂಲಕ ಕಂಡುಹಿಡಿಯುತ್ತದೆ. ಆ ವಿಭಾಗಗಳ ಮೇಲೇ ಮೊದಲು ದಾಳಿ ನಡೆಸಿ ಶತ್ರುರಾಷ್ಟ್ರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

5. ಇಂದು ಎಲ್ಲಾ ದೇಶಗಳ ಹಣಕಾಸು ಸಂಸ್ಥೆಗಳು, ಬ್ಯಾಂಕಿಂಗ್‌, ಎಲೆಕ್ಟ್ರಿಕಲ್‌, ನೀರು, ಒಳಚರಂಡಿ, ರೈಲ್ವೆ, ಟೆಲಿಕಮ್ಯುನಿಕೇಶನ್‌ ವಿಭಾಗಗಳು ಇಂಟರ್ನೆಟ್‌ ಹಾಗೂ ಸಾಫ್ಟ್‌ವೇರ್‌ಗಳನ್ನೇ ಅವಲಂಬಿಸಿವೆ. ಚೀನಾದ ಸೈಬರ್‌ ಪಡೆ ಇವುಗಳನ್ನು ಹ್ಯಾಕ್‌ ಮಾಡಿ ಶತ್ರುರಾಷ್ಟ್ರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಲಿದೆ.

ಕಂಪ್ಯೂಟರ್‌ ಜತೆ ವೈರಸ್‌ ಕೂಡ ರಫ್ತು!

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಚೀನಾದ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೋಡೆಮ್‌, ಟೆಲಿಕಮ್ಯುನಿಕೇಶನ್‌ ಹಾರ್ಡ್‌ವೇರ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇವುಗಳನ್ನು ರಫ್ತು ಮಾಡುವಾಗಲೇ ವೈರಸ್‌, ಟ್ರೋಜನ್‌, ಮಾಲ್‌ವೇರ್‌ಗಳನ್ನು ಚೀನಾ ಇವುಗಳ ಒಳಗಿರಿಸಿ ಕಳಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಉಪಕರಣಗಳಿಂದ ಚೀನಾಕ್ಕೆ ನಿರಂತರವಾಗಿ ಮಾಹಿತಿ ರವಾನೆಯಾಗುತ್ತಿದೆ. ಯುದ್ಧ ನಡೆದರೆ ಚೀನಾ ಇವುಗಳನ್ನು ಬಳಸಿಕೊಳ್ಳಲಿದೆ.

ಹುತಾತ್ಮರ ಬಲಿದಾನಕ್ಕೆ ನ್ಯಾಯ ಒದಗಿಸಿ: ಮೌನ ಮುರಿದ ಮಾಜಿ ಪ್ರಧಾನಿ ಡಾ. ಸಿಂಗ್!

ಚೀನಾದಲ್ಲಿ ವಿದ್ಯಾರ್ಥಿಗಳೂ ಸೈಬರ್‌ ಸೈನಿಕರು!

ತನ್ನ ಸೈಬರ್‌ ಪಡೆಯಲ್ಲಿ ಚೀನಾ ಕೇವಲ ಸೈಬರ್‌ ತಜ್ಞರನ್ನಷ್ಟೇ ಬಳಸಿಕೊಳ್ಳುತ್ತಿಲ್ಲ. ಬದಲಿಗೆ, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ದೇಶಭಕ್ತ ಹ್ಯಾಕರ್‌ಗಳನ್ನೂ ಬಳಸಿಕೊಂಡು ಮಾಹಿತಿ ಕದಿಯುವ ಕೆಲಸ ಮಾಡುತ್ತಿದೆ. ಇವರೆಲ್ಲ ರಹಸ್ಯ ಯೋಧರಾಗಿದ್ದಾರೆ. ಇನ್ನು, ಅಧಿಕೃತವಾಗಿಯೂ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ಸೆಕ್ಯುರಿಟಿ ತಜ್ಞರನ್ನು ಸೈಬರ್‌ ಪಡೆಯ ಹ್ಯಾಕರ್‌ಗಳಾಗಿ ಚೀನಾ ನೇಮಕ ಮಾಡಿಕೊಳ್ಳುತ್ತದೆ. ಸದ್ಯ ಇಂತಹ 30,000 ನೌಕರರು ಹಾಗೂ 250 ಹ್ಯಾಕರ್‌ ಗುಂಪುಗಳು ಚೀನಾದ ಸೈಬರ್‌ ಪಡೆಯಲ್ಲಿವೆ ಎನ್ನಲಾಗಿದೆ.

ಚೀನಾದ ಸೈಬರ್‌ ಪಡೆಯ ಅಂಗಸಂಸ್ಥೆಗಳು

- ಪಿಎಲ್‌ಎ (ಪೀಪಲ್ಸ್‌ ಲಿಬರೇಶನ್‌ ಆರ್ಮಿ) 3ನೇ ವಿಭಾಗ: ಇದರಲ್ಲಿ ಸಿಗ್ನಲ್‌ ಇಂಟೆಲಿಜೆನ್ಸ್‌, ಕಂಪ್ಯೂಟರ್‌ ನೆಟ್‌ವರ್ಕ್ ಡಿಫೆನ್ಸ್‌ ಹಾಗೂ ಕಂಪ್ಯೂಟರ್‌ ನೆಟ್‌ವರ್ಕ್ ಎಕ್ಸ್‌ಪ್ಲಾಯ್ಟೇಶನ್‌ ಎಂಬ ಉಪ ವಿಭಾಗಗಳಿವೆ.

- ಪಿಎಲ್‌ಎ 4ನೇ ವಿಭಾಗ: ಇದರಲ್ಲಿ ಎಲೆಕ್ಟ್ರಾನಿಕ್‌ ವಾರ್‌ಫೇರ್‌, ಕಂಪ್ಯೂಟರ್‌ ನೆಟ್‌ವರ್ಕ್ ದಾಳಿ, ಇಂಟಿಗ್ರೇಟೆಡ್‌ ನೆಟ್‌ವರ್ಕ್ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಎಂಬ ವಿಭಾಗಗಳಿವೆ.

- ಐಡಬ್ಲ್ಯು ಮಿಲಿಶಿಯಾ ಯುನಿಟ್ಸ್‌

- ಸ್ಟ್ರಾಟಜಿಕ್‌ ಸಪೋರ್ಟ್‌ ಫೋರ್ಸ್‌: ಗುಪ್ತಚರ, ಮಾಹಿತಿ, ಎಲೆಕ್ಟ್ರಾನಿಕ್‌ ವಾರ್‌ಫೇರ್‌ ವಿಭಾಗಗಳನ್ನು ಸೈಬರ್‌ ಪಡೆಯಲ್ಲಿ ಬಳಸಿಕೊಳ್ಳಲು ಸಮನ್ವಯದ ಕೆಲಸವನ್ನು ಈ ವಿಭಾಗ ಮಾಡುತ್ತದೆ.

- ರಹಸ್ಯ ಯೋಧರು: ಇವರಲ್ಲಿ ಸರ್ಕಾರದಿಂದ ರಹಸ್ಯವಾಗಿ ಸಂಬಳ ಪಡೆಯುವ ಚಾಣಾಕ್ಷ ವಿದ್ಯಾರ್ಥಿಗಳು, ದೇಶಭಕ್ತ ಹ್ಯಾಕರ್‌ಗಳು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಭದ್ರತಾ ತಜ್ಞರು ಮುಂತಾದವರಿದ್ದಾರೆ.

ಖಾಸಗಿ ಕಂಪನಿಗಳಿಂದಲೂ ಸರ್ಕಾರಕ್ಕೆ ನೆರವು

ಆಘಾತಕಾರಿ ಸಂಗತಿಯೆಂದರೆ ಚೀನಾ ಮೂಲದ ಜಾಗತಿಕ ಕಂಪನಿಗಳಾದ ಹುವೈ, ಝಡ್‌ಟಿಇ ಮುಂತಾದ ಸಿವಿಲ್‌ ಟೆಲಿಕಮ್ಯುನಿಕೇಶನ್‌ ಕಂಪನಿಗಳು ಕೂಡ ಚೀನಾದ ಸೈಬರ್‌ ಪಡೆಯ ಭಾಗವೇ ಆಗಿವೆ. ಇವು ಚೀನಾ ಸರ್ಕಾರದಿಂದ ಧನಸಹಾಯ ಪಡೆದು ಸಾಕಷ್ಟುಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತವೆ. ಬೇರೆ ದೇಶಗಳ ಕಂಪನಿಗಳನ್ನು ಆಕ್ರಮಣಕಾರಿಯಾಗಿ ಖರೀದಿಸುವ ಮೂಲಕವೂ ಇವು ಚೀನಾ ಸರ್ಕಾರಕ್ಕೆ ನೆರವು ನೀಡುತ್ತವೆ ಎನ್ನಲಾಗಿದೆ.

ಚೀನಾ ಸೈಬರ್‌ ಪಡೆಯಿಂದ ಭಾರತಕ್ಕೆ ಏನು ಅಪಾಯ?

ಸೈಬರ್‌ ಸುರಕ್ಷತೆಯಲ್ಲಿ ಭಾರತ ತುಂಬಾ ದುರ್ಬಲವಿದೆ. ನಮ್ಮ ದೇಶದ ಕಂಪ್ಯೂಟರ್‌ ಹಾಗೂ ಇಂಟರ್ನೆಟ್‌ ನೆಟ್‌ವರ್ಕ್ಗಳು ದೊಡ್ಡ ಪ್ರಮಾಣದಲ್ಲಿ ವೈರಸ್‌ಗಳಿಂದ ತುಂಬಿವೆ ಎಂದು ಭಾರತದ ಸೈಬರ್‌ ಸುರಕ್ಷತಾ ಕಂಪನಿಗಳು ನಡೆಸಿರುವ ಅಧ್ಯಯನದಲ್ಲೇ ತಿಳಿದುಬಂದಿದೆ. ಡಿಆರ್‌ಡಿಒ, ಎನ್‌ಟಿಪಿಸಿ, ಪೊಲೀಸ್‌, ಪಿಡಬ್ಲ್ಯುಡಿ, ಹಣಕಾಸು, ಅಂತರಿಕ್ಷ ಸಂಶೋಧನಾ ಸಂಸ್ಥೆ ಹಾಗೂ ಸಚಿವಾಲಯಗಳಲ್ಲಿರುವ ಕಂಪ್ಯೂಟರ್‌ಗಳನ್ನೂ ಕೂಡ ಸುಲಭವಾಗಿ ಹ್ಯಾಕ್‌ ಮಾಡಬಹುದು ಎಂದು ಈ ಅಧ್ಯಯನ ಹೇಳಿದೆ.

ಈ ಸಂಸ್ಥೆಗಳೂ ಸೇರಿದಂತೆ ಭಾರತದ ರೈಲ್ವೆ, ಇಂಧನ, ಟೆಲಿಕಮ್ಯುನಿಕೇಶನ್‌ ಮುಂತಾದ ಸಂಸ್ಥೆಗಳಲ್ಲಿ ಚೀನಾದ ಹುವೈ ಮುಂತಾದ ಕಂಪನಿಗಳ ರೌಟರ್‌ಗಳು ಹಾಗೂ ಇತರ ಹಾರ್ಡ್‌ವೇರ್‌ಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಈ ಉಪಕರಣಗಳನ್ನು ಚೀನಾ ಸುಲಭವಾಗಿ ಹ್ಯಾಕ್‌ ಮಾಡುತ್ತದೆ. ಇನ್ನು, ಜಗತ್ತಿನಾದ್ಯಂತ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಬಳಸುವ ಸಿಲಿಕಾನ್‌ ಇಂಟಿಗ್ರೇಟೆಡ್‌ ಮೈಕ್ರೋಚಿಪ್‌ಗಳು ತಯಾರಾಗುವುದೇ ಚೀನಾದಲ್ಲಿ. ಅಮೆರಿಕ ಹಾಗೂ ಯುರೋಪ್‌ನ ಬ್ರ್ಯಾಂಡ್‌ಗಳಲ್ಲೂ ಇವೇ ಮೈಕ್ರೋಚಿಪ್‌ಗಳು ಬಳಕೆಯಾಗುತ್ತವೆ.

ಚೀನಾದ ಮುಂದಿನ ಗುರಿ ಏನು ಗೊತ್ತಾ?

ತನ್ನ ಸೈಬರ್‌ ಸಮರ ಪಡೆಗೆ ಇನ್ನಷ್ಟುಶಕ್ತಿ ತುಂಬಲು ಚೀನಾ ದೊಡ್ಡ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆಯ ಸಂಶೋಧನೆಯಲ್ಲಿ ಬಂಡವಾಳ ತೊಡಗಿಸಿದೆ. ಮೊದಲಿಗೆ, ಈ ವರ್ಷಾಂತ್ಯದೊಳಗೆ ಜಗತ್ತಿನ ಎಲ್ಲಾ ದೇಶಗಳಿಗೆ ಕೃತಕ ಬುದ್ಧಿಮತ್ತೆಯ ಬಳಕೆಗೆ ಬೇಕಾದ ಸಲಕರಣೆಗಳನ್ನು ತಾನೇ ಪೂರೈಸುವ ಗುರಿ ಹೊಂದಿದೆ. ನಂತರ 2025ರ ವೇಳೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಗತ್ತೇ ನಿಬ್ಬೆರಗಾಗುವಂತಹ ಯಾವುದಾದರೂ ಸಂಶೋಧನೆ ಮಾಡುವ ಉದ್ದೇಶ ಹೊಂದಿದೆ. ನಂತರ 2030ರ ವೇಳೆಗೆ ತನ್ನ ದೇಶದ ಔದ್ಯೋಗಿಕ ಕ್ಷೇತ್ರ ಹಾಗೂ ರಕ್ಷಣಾ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯನ್ನು ಸರ್ವೇಸಾಮಾನ್ಯವಾಗಿ ಬಳಕೆ ಮಾಡಲಿದೆ. ಆಗ ಸೈಬರ್‌ ಸುರಕ್ಷತೆಯ ವಿಷಯದಲ್ಲಿ ಬೇರೆ ದೇಶಗಳು ಪ್ರಗತಿ ಸಾಧಿಸಿದರೂ ಅವುಗಳಿಗಿಂತ ಚೀನಾ 10 ಹೆಜ್ಜೆ ಮುಂದೆ ಇರಲಿದೆ.