ಅಧ್ಯಕ್ಷ ಹುದ್ದೆಯಿಂದ ಟ್ರಂಪ್‌ ವಜಾ ಪ್ರಕ್ರಿಯೆ ಆರಂಭ| ಸಂಸತ್‌ನಲ್ಲಿ ಡೆಮಾಕ್ರೆಟಿಕ್‌ ಸಂಸದರಿಂದ ಮಸೂದೆ ಮಂಡನೆ

ವಾಷಿಂಗ್ಟನ್(ಜ.12)‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ವಾಗ್ದಂಡನೆ (ವಜಾ ಮಾಡುವ) ವಿಧಿಸುವ ಐತಿಹಾಸಿಕ ಪ್ರಕ್ರಿಯೆಯೊಂದಕ್ಕೆ ಅಮೆರಿಕ ಸಂಸತ್‌ನಲ್ಲಿ ಸೋಮವಾರ ಚಾಲನೆ ನೀಡಲಾಗಿದೆ. ಒಂದು ವೇಳೆ ಗೊತ್ತುವಳಿ ಕುರಿತು ಚರ್ಚೆ ನಡೆದು, ಮತದಾನದ ಬಳಿಕ ವಾಗ್ದಂಡನೆ ವಿಧಿಸಿದ್ದೇ ಆದಲ್ಲಿ ಅದು, ಅಮೆರಿಕ ಇತಿಹಾಸದಲ್ಲೇ ಅಮೆರಿಕ ಅಧ್ಯಕ್ಷರೊಬ್ಬರ ವಿರುದ್ಧ ಎರಡು ಬಾರಿ ವಾಗ್ದಂಡನೆ ನಡೆಸಿದ ಮೊದಲ ಘಟನೆಯಾಗಲಿದೆ.

ಇತ್ತೀಚೆಗೆ ಅಮೆರಿಕ ಸಂಸತ್‌ ಮೇಲೆ ನಡೆದ ದಾಳಿ ಘಟನೆಗೆ ಚಿತಾವಣೆ ನೀಡಿದ ಮತ್ತು ದಂಗೆಗೆ ಕಾರಣರಾದ ಆರೋಪಗಳನ್ನು ಹೊರಿಸಿ ವಿಪಕ್ಷ ಡೆಮಾಕ್ರೆಟ್‌ ಸಂಸದರು ಸೋಮವಾರ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನು ಮಂಡಿಸಿದರು. ಅದರಲ್ಲಿ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮತ್ತು ಸಂಪುಟದ ಸದಸ್ಯರಿಗೆ ಕೂಡಲೇ ಟ್ರಂಪ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ತಕ್ಷಣವೇ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷದ ಸಂಸದರು ಕೂಡಲೇ ಮತದಾನಕ್ಕೆ ಅವಕಾಶವಾಗದಂತೆ ತಡೆದರು.

ಆದರೆ ಪಟ್ಟುಬಿಡದ ಡೆಮಾಕ್ರೆಟ್‌ ಸಂಸದರು ಎರಡನೇ ಬಾರಿ ಗೊತ್ತುವಳಿ ಮಂಡಿಸುವ ಮೂಲಕ, ಸಂವಿಧಾನದ 25ನೇ ತಿದ್ದುಪಡಿಯನ್ನು ಜಾರಿಗೊಳಿಸುವ ಮೂಲಕ ಟ್ರಂಪ್‌ರನ್ನು ಶ್ವೇತಭವನದಿಂದ ಹೊರಹಾಕುವಂತೆ ಉಪಾಧ್ಯಕ್ಷ ಮೈಕ್‌ ಪೆನ್ಸ್‌ಗೆ ಸೂಚಿಸಿದರು. ಒಂದು ವೇಳೆ ಗೊತ್ತುವಳಿ ಅಂಗೀಕಾರವಾದರೆ ಈ ಕುರಿತು ವಾರಾಂತ್ಯದಲ್ಲಿ ಮತದಾನ ನಡೆದು, ಬಳಿಕ ಟ್ರಂಪ್‌ಗೆ ವಾಗ್ದಂಡನೆ ವಿಧಿಸುವ ಸಾಧ್ಯತೆ ಇದೆ.

ಜೊತೆಗೆ ಟ್ರಂಪ್‌ ಅವರ ಅಧ್ಯಕ್ಷೀಯ ಇತಿಹಾಸಕ್ಕೆ ಮತ್ತೊಂದು ದೊಡ್ಡ ಕಪ್ಪುಚುಕ್ಕೆ ಸೇರಿದಂತೆ ಆಗಲಿದೆ.