* ಲಸಿಕೆ ಪಡೆದವರ ದೇಹದಲ್ಲೂ ವೈರಲ್‌ ಲೋಡ್‌ ಹೆಚ್ಚು!* ಲಸಿಕೆ ಪಡೆದವರಿಂದಲೂ ಇನ್ನೊಬ್ಬರಿಗೆ ಸೋಂಕು ಪ್ರಸರಣ* ರೂಪಾಂತರಿ ಡೆಲ್ಟಾವೈರಸ್‌ನ ಮತ್ತಷ್ಟುತೀವ್ರತೆ ಬೆಳಕಿಗೆ* ಅಮೆರಿಕದಲ್ಲಿ ಲಸಿಕೆ ಪಡೆದವರ ಆಸ್ಪತ್ರೆ ದಾಖಲಾತಿ ಪ್ರಮಾಣ ಏರಿಕೆ* 2 ಡೋಸ್‌ ಲಸಿಕೆ ಪಡೆದಾಯ್ತು ಎಂದು ಮೈಮರೆತರೆ ಕಾದಿದೆ ಅಪಾಯ

ವಾಷಿಂಗ್ಟನ್‌(ಆ. 01): ಕೋವಿಡ್‌ ಎರಡೂ ಡೋಸ್‌ ಲಸಿಕೆ ಪಡೆದಿದ್ದಾಯ್ತು. ಇನ್ನೇನು ನಮಗೂ ಸೋಂಕು ಬರದು, ನಮ್ಮಿಂದ ಇನ್ನೊಬ್ಬರಿಗೂ ಸೋಂಕು ಹರಡದು ಎಂದು ಜನ ಮೈಮರೆತಿರುವ ಹೊತ್ತಿನಲ್ಲೇ, ಅಮೆರಿಕದಿಂದ ಬಂದಿರುವ ಅಧ್ಯಯನ ವರದಿಯೊಂದು ಭಾರೀ ಆತಂಕಕಾರಿ ಸುದ್ದಿಯನ್ನು ಹೊರಹಾಕಿದೆ. ಲಸಿಕೆ ಪಡೆಯದೇ ಇದ್ದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಾಗ (ಬ್ರೇಕ್‌ಥ್ರೂ ಇನ್ಫೆಕ್ಷನ್ಸ್‌) ಅವರ ದೇಹದಲ್ಲಿ ಇರುವಷ್ಟೇ ಪ್ರಮಾಣದ ‘ಕೊರೋನಾ ವೈರಸ್‌ ಲೋಡ್‌’, ಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಕಾಣಿಸಿಕೊಂಡವರಲ್ಲಿ ಪತ್ತೆಯಾಗುತ್ತಿದೆ. ಜೊತೆಗೆ ಹೀಗೆ ಬ್ರೇಕ್‌ಥ್ರೂ ಇನ್ಫೆಕ್ಷನ್ಸ್‌ಗೆ ತುತ್ತಾದವರು ತಮ್ಮಿಂದ ಇತರರಿಗೆ ಸೋಂಕನ್ನು ಹಬ್ಬಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಇನ್ನೊಂದು ಆತಂಕದ ವಿಷಯವೆಂದರೆ ಇಂಥದ್ದೊಂದು ಅಪಾಯಕಾರಿ ಬೆಳವಣಿಗೆ ಕಾರಣವಾಗಿರುವುದು, ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡು ಇದೀಗ ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ರೂಪಾಂತರಿ ಡೆಲ್ಟಾವೈರಸ್‌. ಈ ಮೊದಲು ಪತ್ತೆಯಾಗಿದ್ದ ಕೊರೋನಾ ತಳಿಗಳು, ಲಸಿಕೆ ಪಡೆದವರಲ್ಲಿ ಸೋಂಕಿಗೆ ಕಾರಣವಾಗುತ್ತಿದ್ದವಾದರೂ, ವೈರಸ್‌ ಲೋಡ್‌ನ ಪ್ರಮಾಣ ಕಡಿಮೆ ಇರುತ್ತಿತ್ತು. ಆದರೆ ಡೆಲ್ಟಾವಿಷಯದಲ್ಲಿ ಅದು ಪೂರ್ಣ ವಿರುದ್ಧವಾಗಿದೆ. ಲಸಿಕೆ ಪಡೆಯದಿದ್ದವರಲ್ಲಿ ಇದ್ದಷ್ಟೇ ಪ್ರಮಾಣದ ವೈರಸ್‌, ಲಸಿಕೆ ಪಡೆದವರಲ್ಲೂ ಕಾಣಿಸಿಕೊಳ್ಳುತ್ತಿದೆ.

ಜೊತೆಗೆ, ಹೀಗೆ ಬ್ರೇಕ್‌ಥ್ರೂ ಇನ್ಪೆಕ್ಷನ್ಸ್‌ಗೆ ತುತ್ತಾದವರು ಆಸ್ಪತ್ರೆಗೆ ದಾಖಲಾಗುವ ಮತ್ತು ಅವರ ಸಾವಿನ ಪ್ರಮಾಣವೂ ನಿಧಾನವಾಗಿ ಏರಿಕೆಯಾಗುತ್ತಿದೆ ಎಂದು ಶುಕ್ರವಾರ ಬಿಡುಗಡೆಯಾದ ವರದಿ ಹೇಳಿದೆ.

ಅಧ್ಯಯನ:

ಅಮೆರಿಕದ ಮೆಸಾಚ್ಯುಸೆಟ್ಸ್‌ ರಾಜ್ಯದ ಪ್ರಾವಿನ್ಸ್‌ಟೌನ್‌ನಲ್ಲಿ ಲಸಿಕೆ ನೀಡಿಕೆ ಪ್ರಮಾಣ ಅತ್ಯಂತ ಹೆಚ್ಚಿದ್ದರೂ, ಅಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಪ್ರಮಾಣ ಭಾರೀ ಏರಿಕೆಯಾಗಿತ್ತು. ಅಲ್ಲಿ ಕೆಲ ತಿಂಗಳ ಹಿಂದೆ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಬಳಿಕ ಬೀಚ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ಪ್ರಮಾಣದ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂಥವುಗಳಲ್ಲಿ ಭಾರೀ ಪ್ರಮಾಣದಲ್ಲಿ ಜನ ಭಾಗಿಯಾಗಿದ್ದು, ಮತ್ತು ಅವರಲ್ಲಿ ಸೋಂಕು ಹಬ್ಬಿದ್ದು ಕಂಡುಬಂದಿತ್ತು.

ಈ ಪೈಕಿ 470 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ ವೇಳೆ, ಲಸಿಕೆ ಪಡೆಯದೇ ಸೋಂಕಿಗೆ ತುತ್ತಾದವರು ಮತ್ತು ಲಸಿಕೆ ಪಡೆದ ಬಳಿಕವೂ ಸೋಂಕಿಗೆ ತುತ್ತಾದವರ ದೇಹದಲ್ಲಿ ಹೆಚ್ಚು ಕಡಿಮೆ ಒಂದೇ ಪ್ರಮಾಣದ ವೈರಸ್‌ ಪತ್ತೆಯಾಗಿದೆ.

ಈ ಪೈಕಿ ಎರಡೂ ಡೋಸ್‌ ಲಸಿಕೆ ಪಡೆದ ಶೇ.80ರಷ್ಟುಜನರಲ್ಲಿ ಕಫ, ತಲೆನೋವು, ಗಂಟಲುನೋವು, ಮಾಂಸಖಂಡಗಳ ನೋವು ಮತ್ತು ಜ್ವರಕ್ಕೆ ತುತ್ತಾಗಿದ್ದರು ಎಂದು ಅಧ್ಯಯನ ವರದಿ ಹೇಳಿದೆ.

ಈ ಮೊದಲಿನ ಲೆಕ್ಕಾಚಾರದ ಅನ್ವಯ, ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ, ಕಾಣಿಸಿಕೊಂಡರೂ ಅವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ, ಅವರು ಆಸ್ಪತ್ರೆ ದಾಖಲಾಗುವ, ಸಾವನ್ನಪ್ಪುವ ಪ್ರಮಾಣ ಕಡಿಮೆ, ಜೊತೆಗೆ ಇಂಥವರಿಂದ ಬೇರೆಯವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿತ್ತು. ಆದರೆ ಅಮೆರಿಕದ ಪ್ರಾವಿನ್ಸ್‌ಟೌನ್‌ನ ಅಧ್ಯಯನ ವರದಿಯು ಈ ಎಲ್ಲಾ ಲೆಕ್ಕಾಚಾರಗಳನ್ನು ಪೂರ್ಣವಾಗಿ ನಂಬುವಂತಿಲ್ಲ ಎಂದು ಎಚ್ಚರಿಸುವ ಮೂಲಕ, ಪ್ರತಿಯೊಬ್ಬರೂ ಕೋವಿಡ್‌ ಮಾರ್ಗಸೂಚಿಯನ್ನು ಇನ್ನಷ್ಟುಕಠಿಣವಾಗಿ ಪಾಲಿಸಬೇಕಾದ ಅನಿವಾರ್ಯತೆಯನ್ನು ಹೇಳಿದೆ. ಜೊತೆಗೆ ಲಸಿಕೆ ಪಡೆದವರಿಗೆ ಮಾಸ್ಕ್‌ ಧರಿಸುವುದರಿಂದ, ಸಾಮಾಜಿಕ ಅಂತರ ಕಾಪಾಡುವುದರಿಂದ ನೀಡಲಾಗಿದ್ದ ವಿನಾಯ್ತಿ ತೆಗೆದು ಹಾಕಬೇಕಾದ ಅಗತ್ಯವನ್ನು ಪ್ರತಿಪಾದಿಸಿದೆ.