* ಬ್ರಿಟನ್‌ ಮಾದರಿಗಿಂತ 60% ಹೆಚ್ಚು ವೇಗವಾಗಿ ಹಬ್ಬುತ್ತೆ ‘ಡೆಲ್ಟಾ’* ಲಸಿಕೆ ಕ್ಷಮತೆಯನ್ನೂ ಕುಂದಿಸುತ್ತೆ ಭಾರತದ ರೂಪಾಂತರಿ ಕೋವಿಡ್‌* ಬ್ರಿಟನ್‌ನ ಹೊಸ ಸೋಂಕಿತರಲ್ಲಿ 90%ರಷ್ಟು ಭಾರತ ರೂಪಾಂತರಿ

ಲಂಡನ್‌(ಜೂ.12): ಮೊದಲು ಭಾರತದಲ್ಲಿ ಪತ್ತೆಯಾದ, ಸೋಂಕು ಹಾಗೂ ಸಾವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾದ ‘ಡೆಲ್ಟಾ’ ಎಂಬ ರೂಪಾಂತರಿ ಕೊರೋನಾ ವೈರಸ್‌ ಲಸಿಕೆಯ ಕ್ಷಮತೆಯನ್ನೂ ಕುಂದಿಸುವ ಶಕ್ತಿ ಹೊಂದಿದೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಬಿ1.617.2 ಎಂಬ ಹೆಸರಿನ ಈ ಕಳವಳಕಾರಿ ರೂಪಾಂತರಿ ಕೊರೋನಾ, ಬ್ರಿಟನ್‌ನಲ್ಲಿ ಪತ್ತೆಯಾಗಿದ್ದ ಆಲ್ಛಾ ಎಂಬ ರೂಪಾಂತರಿಗಿಂತ ಶೇ.60ರಷ್ಟುವೇಗವಾಗಿ ಹಬ್ಬುತ್ತದೆ. ಬ್ರಿಟನ್‌ನಲ್ಲಿ ಪತ್ತೆಯಾಗುತ್ತಿರುವ ಹೊಸ ಸೋಂಕಿತರ ಪೈಕಿ ಶೇ.90ರಷ್ಟುಮಂದಿಯಲ್ಲಿ ಡೆಲ್ಟಾಸೋಂಕು ಕಂಡುಬರುತ್ತಿದೆ. ಡೆಲ್ಟಾಸೋಂಕಿತರ ಸಂಖ್ಯೆ ಬ್ರಿಟನ್‌ನಲ್ಲಿ ಕಳೆದ ವಾರ 29892 ಇದ್ದದ್ದು ಈಗ 42323ಕ್ಕೆ ಏರಿಕೆಯಾಗಿದೆ ಎಂದು ಬ್ರಿಟನ್‌ನ ಆರೋಗ್ಯ ತಜ್ಞರು ಶುಕ್ರವಾರ ವರದಿ ಬಿಡುಗಡೆ ಮಾಡಿದ್ದಾರೆ.

ಒಂದು ಡೋಸ್‌ ಲಸಿಕೆ ಪಡೆದವರಲ್ಲಿ ಡೆಲ್ಟಾಸೋಂಕು ಕಾಣಿಸಿಕೊಂಡರೆ ಲಸಿಕೆಯ ಕ್ಷಮತೆ ಪ್ರಮಾಣ ಶೇ.15ರಿಂದ ಶೇ.20ರಷ್ಟುಕಡಿಮೆಯಾಗಿದೆ. ಎರಡೂ ಡೋಸ್‌ ಲಸಿಕೆ ಪಡೆದವರಲ್ಲಿ ಡೆಲ್ಟಾವಿರುದ್ಧ ಹೋರಾಡುವ ಶಕ್ತಿ ಹೆಚ್ಚಿರುತ್ತದೆ. ಆದರೆ ಆಲ್ಛಾಗೆ ಹೋಲಿಸಿದರೆ ಅದು ಕಡಿಮೆ ಎಂದು ಅಧ್ಯಯನ ಹೇಳುತ್ತದೆ.

ಬ್ರಿಟನ್‌ನಲ್ಲಿ ಡೆಲ್ಟಾಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯೇ ಅದರ ವಿರುದ್ಧ ಅಸ್ತ್ರ. ಒಂದು ಡೋಸ್‌ಗಿಂತ ಎರಡೂ ಡೋಸ್‌ ಲಸಿಕೆ ಪಡೆದವರಲ್ಲಿ ಗಮನಾರ್ಹ ಪ್ರಮಾಣದ ರಕ್ಷಣೆ ಸಿಗುತ್ತದೆ. ಲಸಿಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯ ಕಡಿಮೆಯಾಗುತ್ತದೆಯೇ ಹೊರತು ಆ ಅಪಾಯ ನಿರ್ನಾಮ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.