ನವದೆಹಲಿ(ಮೇ  29)  ಚೀನಾದ ವುಹಾನ್ ಲ್ಯಾಬ್ ನಿಂದ ಕೃತಕ ಕೊರೋನಾ ವೈರಸ್ ಲೀಕ್ ಆಯಿತು ಎಂಬ ಮಾತು ಪದೇ ಪದೇ ಕೇಳಿಬರುವ ಸಂಗತಿ.    ಹಾಗಾದರೆ ನಿಜಕ್ಕೂ ವೈರಸ್ ಹುಟ್ಟಿಕೊಂಡಿದ್ದು ಎಲ್ಲಿಂದ?

ಅಮೆರಿಕ ಅಧ್ಯಕ್ಷ ಬೈಡನ್  ಈ ವಿಚಾರದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದ್ದಾರೆ.  ಚರ್ಚಿತ ವಿಚಾರಗಳ ಮೇಲೆ ಒಂದು ರೌಂಡ್ ಅಪ್ ಹಾಕಿಕೊಂಡು ಬರೋಣ

ಏನಿದು ಲ್ಯಾಬ್-ಲೀಕ್ ಥಿಯರಿ? 
ಚೀನಾದ ವುಹಾನ್ ಲ್ಯಾಬ್ ನಿಂದ ಕೊರೋನಾ ವೈರಸ್ ಆಕಸ್ಮಿಕವಾಗಿ ಲೀಕ್ ಆಗಿದೆ ಅಥವಾ ಕಾರಣವನ್ನಿಟ್ಟುಕೊಂಡೆ ಲೀಕ್ ಮಾಡಲಾಗಿದೆ ಎನ್ನುವುದು ಒಂದು ಥಿಯರಿ. 

ವುಹಾನ್ ಇಸ್ಟಿಟ್ಯೂಟ್ ಆಫ್ ವೈರೋಲಜಿ ಒಂದು ದಶಕದಿಂದಲೂ ಕೊರೋನಾ ವೈರಸ್ ಬಗ್ಗೆ ಸಂಶೋಧನೆ ಮಾಡುತ್ತಿತ್ತು ಎಂಬ ಸಂಗತಿಯೂ ಇಲ್ಲಿ ಪ್ರಮುಖವಾಗುತ್ತದೆ.

ಮಧುಮೇಹಿಗಳು ಕೊರೋನಾದಿಂದ ಬಚಾವಾಗೋದು ಹೇಗೆ? 

ವುಹಾನ್ ಮಾಂಸ ಮಾರುಕಟ್ಟೆಯಿಂದ ಕೆಲವೇ ಕಿಮೀ ಅಂತರದಲ್ಲಿ ಈ ಸಂಶೋಧನಾ ಕೇಂದ್ರ ಇದೆ ಎನ್ನುವುದು ಇನ್ನೊಂದು ಪಾಯಿಂಟ್. ಲ್ಯಾಬ್ ನಿಂದ ಲೀಕ್ ಆದ ವೈರಸ್ ಮಾರುಕಟ್ಟೆ ಸೇರಿಕೊಂಡಿತು. ಪ್ರಾಣಿ ಜನ್ಯವಾಗಿಯೇ ಈ ವೈರಸ್ ಹುಟ್ಟಿಕೊಂಡಿತು.

ಈ ಥಿಯರಿಯನ್ನು ಮೊದಲ ಸಾರಿ ಮುಂದಿಟ್ಟಿದ್ದು ಅಂದಿನ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್.  ಚೀನಾ ಜೈವಿಕ ಅಸ್ತ್ರದ ರೀತಿ  ಇದನ್ನು ಬಳಕೆ ಮಾಡಿಕೊಂಡಿತು ಎನ್ನುವುದು ಆರೋಪ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ  ಬಹಳಷ್ಟು ಚರ್ಚೆ ನಡೆದಿದೆ. ಸಂಶೋಧಕರು, ವಿಜ್ಞಾನಿಗಳು ಅಭಿಪ್ರಾಯ ಮಂಡನೆ ಮಾಡಿದ್ದಾರೆ.

ಮತ್ತೆ ಈ ವಿಚಾರ ಯಾಕೆ ಚರ್ಚೆಗೆ ಬಂತು? 
ಕೊರೋನಾ ನಿಯಂತ್ರಣಕ್ಕೆ ಹೋರಾಟ ಒಂದು ಕಡೆಯಾದರೆ ಇದು ಹುಟ್ಟಿಕೊಂಡಿದ್ದು ಹೇಗೆ ಎನ್ನುವುದನ್ನು ಮತ್ತೆ ವಿಜ್ಞಾನಿಗಳು ಚರ್ಚೆಗೆ ಎಳೆದುಕೊಂಡರು. 

ವೈರಸ್ ಜಗತ್ತನ್ನು ಆವರಿಸುವುದಕ್ಕೂ ಮುನ್ನ ಅಂದರೆ  2019  ರ ನವೆಂಬರ್ ನಲ್ಲಿಯೇ ವುಹಾನ್ ನಲ್ಲಿ ವೈರಸ್ ಕುರಿತಾದ ಸಂಶೋಧನೆ ನಡೆದ ದಾಖಲೆ ಇದೆ ಎನ್ನುವುದೇ ಮುನ್ನೆಲೆಗೆ ಬರಲು ಆಧಾರ. ಯುಎಸ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಆಹಾರ.

ಈ ಲೀಕ್ ವಿಚಾರವನ್ನು ತನಿಖೆ ಮಾಡಿ ಎಂದು ಟ್ರಂಪ್ ನೇಮಿಸಿದ್ದ ತಂಡವನ್ನು ಬೈಡನ್ ಕಿತ್ತು ಹಾಕಿದ್ದಾರೆ.  ಏನೇ ಆದರೂ ಲೀಕ್  ಗಿದೆಯೇ ಇಲ್ಲವೋ ಎಂಬುದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎನ್ನುವುದು ಬೈಡನ್ ಮೆಡಿಕಲ್ ಅಡೈಸರ್ ಅಂಥೋನಿ ಫೌಸಿ ಮಾತು.

ಬೈಡನ್ ಸಹ ಪಟ್ಟು ಸಡಿಲಿಸಿಲ್ಲ. ಇದು ಮಾನವನಿಗೆ ಹೇಗೆ  ಬಂತು? ಪ್ರಾಣಿಯಿಂದ  ಮಾನವನಿಗೆ ಹರಡಿತೆ? ಸಂಪೂರ್ಣ ಮಾಹಿತಿ ಬೇಕು ಎಂದೇ ಕುಳಿತುಕೊಂಡಿದ್ದಾರೆ. ಇನ್ನೊಂದು ಕಡೆ ಲೀಕ್ ಥಿಯರಿಯ ಕ್ರೆಡಿಟ್ ಪಡೆದುಕೊಳ್ಳಲು ಟ್ರಂಪ್ ಮಾಧ್ಯಮ ಹೇಳಿಕೆಯನ್ನು ನೀಡಿದ್ದಾರೆ.

ಕೊರೋನಾ ಕಂಡುಹಿಡಿಯುವ ಮೂರು ವಿಧಾನ

ವಿಜ್ಞಾನಿಗಳ ಯೋಚನೆ ಏನು? 
ಲೀಕ್ ಥೇರಿ ಹಿಂದೆ ಬಿದ್ದ ವಿಜ್ಞಾನಿಗಳಿಗೆ ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಈ  ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. 

ಹನ್ನೆರಡು ಜನ ವಿಜ್ಞಾನಿಗಳ ತಂಡ ಈ ವರ್ಷದ ಆರಂಭದಲಲ್ಲಿ ವುಹಾನ್ ಗೆ ತೆರಳಿ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದೆ. ವರದಿಯನ್ನು ಸಿದ್ಧಮಾಡುವತ್ತ ಹೆಜ್ಜೆ ಇಟ್ಟಿದೆ. ಸರಿಯಾದ ಡೇಟಾ ಸಿಗುವವರೆಗೂ ಏನೂ ಹೇಳಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಡಬ್ಲ್ಯುಎಚ್‌ ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೂಡ ಹೊಸ ತನಿಖೆಗೆ ಕರೆ ನೀಡಿದ್ದಾರೆ. ಎಲ್ಲ ಹೇಳಿಕೆಗಳನ್ನು ಮುಕ್ತವಾಗಿ ದಾಖಲಿಸಿಕೊಳ್ಳಿ ಎಂದು ತಿಳಿಸಿದ್ದಾರೆ.  ನಿಸರ್ಗದತ್ತವಾಗಿ ವೈರಸ್ ಹುಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಈ  ತನಿಖೆಯ ಮೂಲ ಆಧಾರ.

ಈ ತನಿಖೆಯಿಂದ ಚೀನಾಕ್ಕೆ ಆಗುವುದೇನು? 
ಚೀನಾ ಹೇಳುವಂತೆ ಕೊರೋನಾ ವೈರಸ್ ಸಮುದ್ರ ಮಾರ್ಗದಲ್ಲಿ ಬಂದಿದೆ. ಕೆಲ ಆಹಾರ ಸಾಮಗ್ರಿಗಳ ಜತೆ  ಪ್ರವೇಶ ಮಾಡಿತು ಎಂಬ ಸಿದ್ಧಾಂತ ಇಡುತ್ತದೆ. ವುಹಾನ್ ಲ್ಯಾಬ್ ನಲ್ಲಿ ಸಂಶೋಧನೆ ಮಾಡಿದ್ದೇವೆ. ನಮ್ಮ ವರದಿ ಸರಿಯಾಗಿದೆ ಎನ್ನುವುದು ಚೀನಾ ಮಾತು.

ಪ್ರೊಫೆಸರ್ ಶಿ  ಜೆಂಗ್ಲಿ ಹೇಳುವಂತೆ,  2015 ರಲ್ಲಿ ಚೀನಾದ ಗಣಿಯೊಂದರ ಬಾವಲಿಗಳಲ್ಲಿ ಎಂಟು ಕರೋನಾ ವೈರಸ್ ತಳಿ ಪತ್ತೆಯಾಗಿದ್ದವು. ನಮ್ಮ ತಂಡ ಅದನ್ನು ಗುರುತಿಸಿತ್ತು.  ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಅಂದೇ ಹೇಳಿದ್ದೇವು ಎನ್ನುತ್ತಾರೆ.

ಅಮೆರಿಕ ಮತ್ತು ಅಮೆರಿಕದ ಮಾಧ್ಯಮಗಳು ಸಲ್ಲದ ಆರೋಪ ಮಾಡುತ್ತಿವೆ. ವದಂತಿ ಹಬ್ಬಿಸುವ ಕೆಲಸ ಮಾಡುತ್ತಿವೆ ಎನ್ನುವುದು ಚೀನಾ  ಸ್ಟ್ಯಾಂಡ್. ಆಗ್ನೇಯ ಏಷ್ಯಾದಿಂದ ಬಂಣದ ಹೆಪ್ಪುಗಟ್ಟಿದ ಮಾಂಸವೇ ವೈರಸ್ ಮೂಲ ಎನ್ನುವುದು ಚೀನಾ ಸಂಶೋಧನೆ.

 

 

ಮತ್ತೊಂದು ಥಿಯರಿ ಇದೆಯೆ?
ವಿಜ್ಞಾನಿಗಳು, ಸಂಶೋಧಕರು ಯಾರ ಪಾತ್ರವೂ ಇಲ್ಲದೆ ವೈರಸ್ ಪ್ರಾಣಿಗಳ ಮೂಲಕ ಮನುಷ್ಯನಿಗೆ ಹರಡಿತು. ಇದು ನೈಸರ್ಗಿಕ ಸಿದ್ಧಾಂತ.  ಬಾವಲಿಗಳಲ್ಲಿ ಉತ್ಪತ್ತಿಯಾದ ವೈರಸ್ ಬೇರೆ ಪ್ರಾಣಿಯೊಂದರ ಮೂಲಕ ಮಾನವನಿಗೆ ಹರಡಿತು ಎನ್ನುವುದು ಈ ಸಿದ್ಧಾಂತದ  ಆಧಾರ. 

ಈ ಸಿದ್ಧಾಂತವನ್ನು ವಿಶ್ವ ಆರೋಗ್ಯ ಸಂಸ್ಥೆ ಸಹ ಒಪ್ಪಿಕೊಂಡಿದೆ. ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತನ್ನು ಹೇಳಿದೆ. ಈ ನಿಸರ್ಗ ಸಿದ್ಧಾಂತವನ್ನು ಕೊರೋನಾ ಆರಂಭದಲ್ಲಿ ಒಪ್ಪಿಕೊಳ್ಳಲಾಗಿತ್ತು. ಆದರೆ ಬಾವಲಿಗಳಲ್ಲಿ ಈ ವೈರಸ್ ಯಾವುದೇ ಅಂಶ ಪತ್ತೆಯಾಗಲಿಲ್ಲ. ಪ್ರಶ್ನೆಗಳು ಹಾಗೆ ಉಳಿದವು.

ಕೊನೆ ಮಾತು: ವೈರಸ್ ಹೇಗಾದರೂ ಹುಟ್ಟಿಕೊಳ್ಳಲಿ, ಇಡೀ ಮಾನವ ಕುಲಕ್ಕೆ ಕಾಟ ಕೊಡುತ್ತಲೇ ಇದೆ. ಲಸಿಕೆಗಳನ್ನು ಸಂಶೋಧಿಸಲಾಗಿದ್ದು  ಪರಿಣಾಮ ಆರಂಭವಾಗಿದೆ. ಇಲ್ಲಿ ವೈರಸ್ ಸಿದ್ಧಾಂತವೊಂದೆ ಮುಖ್ಯವಾಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಶಕ್ತಿಶಾಲಿ ರಾಷ್ಟ್ರ, ಬಲಶಾಲಿ, ದೇಶಗಳ ನಡುವಿನ ಸಂಬಂಧ ಎಲ್ಲವೂ ತಾಳೆಗೆ ಬರುತ್ತವೆ.