ಪ್ರತಿಭಟನೆ ಹತ್ತಿಕ್ಕಲು ಟ್ರಂಪ್ ರವಾನಿಸಿದ್ದ ರಾಷ್ಟ್ರೀಯ ಗಾರ್ಡ್‌ ಪಡೆಗಳ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸುವಂತೆ ಫೆಡರಲ್ ನ್ಯಾಯಾಲಯ ಸೂಚಿಸಿದ್ದು , ಅಮೆರಿಕ ಅಧ್ಯಕ್ಷರಿಗೆ ಭಾರೀ ಮುಖಭಂಗವಾದಂತಾಗಿದೆ.

ಲಾಸ್‌ ಏಂಜಲೀಸ್‌: ಟ್ರಂಪ್ ವಲಸಿಗರ ನೀತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ. ಪ್ರತಿಭಟನೆ ವಾರಕಕ್ಕೆ ಕಾಲಿಟ್ಟಿದ್ದು ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಪ್ರತಿಭಟನೆ ಹತ್ತಿಕ್ಕಲು ಟ್ರಂಪ್ ರವಾನಿಸಿದ್ದ ರಾಷ್ಟ್ರೀಯ ಗಾರ್ಡ್‌ ಪಡೆಗಳ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸುವಂತೆ ಫೆಡರಲ್ ನ್ಯಾಯಾಲಯ ಸೂಚಿಸಿದ್ದು , ಅಮೆರಿಕ ಅಧ್ಯಕ್ಷರಿಗೆ ಭಾರೀ ಮುಖಭಂಗವಾದಂತಾಗಿದೆ.

ಟ್ರಂಪ್ ನೌಕಾಪಡೆ ಮತ್ತು ರಾಷ್ಟ್ರೀಯ ಗಾರ್ಡ್‌ ನಿಯೋಜಿಸಿದ್ದನ್ನು ವಿರೋಧಿಸಿ ಕ್ಯಾಲಿಫೋರ್ನಿಯಾ ಗವರ್ನರ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರು ಗಾರ್ಡ್‌ ನಿಯೋಜನೆ ಕಾನೂನು ಬಾಹಿರ ಎಂದು ಅಭಿಪ್ರಾಯ ಪಟ್ಟಿದ್ದು ಲಾಸ್‌ ಏಂಜಲೀಸ್‌ನ ಮಿಲಿಟರಿ ಪಡೆಯ ಅಧಿಕಾರವನ್ನು ಗವರ್ನರ್‌ ಗ್ಯಾವಿನ್ ನ್ಯೂಸಮ್ ಅವರ ನಿಯಂತ್ರಣಕ್ಕೆ ನೀಡಬೇಕೆಂದು ಆದೇಶಿಸಿ, ವಿಚಾರಣೆ 17ಕ್ಕೆ ಮುಂದೂಡಿದೆ. ಶುಕ್ರವಾರ ಮಧ್ಯಾಹ್ನದಿಂದಲೇ ಆದೇಶ ಜಾರಿಯಾಗಿದೆ.

ಈ ಬೆನ್ನಲ್ಲೇ ಶ್ವೇತಭವನವು ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಮುಂದಾಗಿದ್ದು, ‘ ಈ ತೀರ್ಪು ಫೆಡರಲ್ ಅಧಿಕಾರಿಗಳ ಧೈರ್ಯವನ್ನು ಕುಗ್ಗಿಸುವ ಪ್ರಯತ್ನ’ ಎಂದಿದೆ.

ಕಳೆದ ಶುಕ್ರವಾರ ಆರಂಭವಾದ ವಲಸಿಗರ ಪ್ರತಿಭಟನೆ ಒಂದು ವಾರಕ್ಕೆ ಕಾಲಿಟ್ಟಿದೆ. ಆದರೂ ಪ್ರತಿಭಟನೆ ಕಾವು ಕಮ್ಮಿಯಾಗುತ್ತಿಲ್ಲ.

ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು ಬಾಸ್ಟನ್ , ಶಿಕಾಗೊ, ಸಿಯಾಟಲ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದೆ. ವಾರಂತ್ಯದಲ್ಲಿ ಟ್ರಂಪ್ ವಾಷಿಂಗ್ಟನ್‌ನಲ್ಲಿ ಮಿಲಿಟರಿ ಮೆರವಣಿಗೆ ನಡೆಸುತ್ತಿರುವುದರಿಂದ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಮತ್ತೊಂದೆಡೆ ಜನಸಮೂಹ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಪೊಲೀಸರು ಇದುವರೆಗೆ ನೂರಾರು ಜನರನ್ನು ಬಂಧಿಸಿದ್ದಾರೆ.