ಬೀಜಿಂಗ್‌(ಮೇ.೨೪): ಮನುಷ್ಯನ ಮೇಲಿನ ಪ್ರಯೋಗದ ಹಂತಕ್ಕೆ (ಕ್ಲಿನಿಕಲ್‌ ಟ್ರಯಲ್‌ ಫೇಸ್‌-1) ಬಂದ ಜಗತ್ತಿನ ಮೊದಲ ಕೊರೋನಾ ಲಸಿಕೆ ಎಡಿ5 (ಎಡಿನೋವೈರಸ್‌ ಟೈಪ್‌ 5) ಆರಂಭಿಕ ಅಧ್ಯಯನದಲ್ಲಿ ಬಹುತೇಕ ಉತ್ತೀರ್ಣಗೊಂಡಿದೆ. ಚೀನಾದ ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಟೆಕ್ನಾಲಜಿಯಲ್ಲಿ ತಯಾರಾಗುತ್ತಿರುವ ಈ ಲಸಿಕೆಯನ್ನು 108 ಆರೋಗ್ಯವಂತ ವಯಸ್ಕರ ಮೇಲೆ ಪ್ರಯೋಗಿಸಲಾಗಿದ್ದು, 28 ದಿನಗಳ ನಂತರ ಅವರಲ್ಲಿ ಭರವಸೆದಾಯಕ ಫಲಿತಾಂಶ ಕಾಣಿಸಿದೆ ಎಂದು ಸಂಶೋಧನಾ ತಂಡ ಹೇಳಿಕೊಂಡಿದೆ.

ಆರಂಭಿಕ ಅಧ್ಯಯನದಲ್ಲಿ ಹೊಸ ಲಸಿಕೆ ಮನುಷ್ಯನ ಮೇಲೆ ಪ್ರಯೋಗಿಸಲು ಸುರಕ್ಷಿತ ಮತ್ತು ದಕ್ಷ ಎಂದು ಸಾಬೀತಾಗಿದೆ. ಆದರೆ, ಇಷ್ಟಕ್ಕೇ ಇದು ಮನುಷ್ಯರ ಮೇಲಿನ ಬಳಕೆಗೆ ಯೋಗ್ಯವಾಗುವುದಿಲ್ಲ. ಈ ಲಸಿಕೆಯ ಬಗ್ಗೆ ಇನ್ನಷ್ಟುಅಧ್ಯಯನಗಳು ನಡೆಯಬೇಕಿವೆ. ಲಸಿಕೆಯ ಅಂತಿಮ ಪರಿಣಾಮವನ್ನು ಆರು ತಿಂಗಳಲ್ಲಿ ಪರಿಶೀಲಿಸಬೇಕಾಗುತ್ತದೆ. ಮೇಲಾಗಿ, ಈ ಲಸಿಕೆ ಕೊರೋನಾ ವೈರಸ್‌ನಿಂದ ರಕ್ಷಣೆ ನೀಡುತ್ತದೆಯೇ ಇಲ್ಲವೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಸಂಶೋಧನಾ ತಂಡ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಬಂಧ ಪ್ರಕಟಿಸಿದೆ.

ಕೊರೋನಾ ವೈರಸ್‌ ವಿರುದ್ಧ ಜಗತ್ತಿನಾದ್ಯಂತ ತಯಾರಿಸಲಾಗುತ್ತಿರುವ ನೂರಾರು ಲಸಿಕೆಗಳಲ್ಲಿ ಮನುಷ್ಯನ ಮೇಲೆ ಪ್ರಯೋಗಿಸುವ ಹಂತಕ್ಕೆ ಹೋದ ಮೊದಲ ಲಸಿಕೆ ಎಡಿ5 ಆಗಿದೆ. ನೆಗಡಿ ಉಂಟುಮಾಡುವ ಸಾಮಾನ್ಯ ಎಡೆನೋವೈರಸ್‌ಗಳನ್ನೇ ದುರ್ಬಲಗೊಳಿಸಿ ಈ ಲಸಿಕೆಯ ಮೂಲಕ ದೇಹಕ್ಕೆ ನೀಡಲಾಗುತ್ತದೆ. ಈ ವೈರಸ್‌ಗಳು ದೇಹದ ಜೀವಕೋಶಗಳಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ಉಂಟುಮಾಡುತ್ತವೆ. ಆದರೆ, ಇವು ರೋಗ ಉಂಟುಮಾಡುವಷ್ಟುಶಕ್ತಿ ಹೊಂದಿಲ್ಲ. ಈ ವೈರಸ್‌ಗಳು ಕೊರೋನಾ ವೈರಸ್‌ನ ಮೇಲಿರುವ ಮುಳ್ಳಿನಂತಹ ಪ್ರೋಟೀನ್‌ಗಳನ್ನೇ ದೇಹದ ಆರೋಗ್ಯವಂತ ಜೀವಕೋಶಗಳ ಮೇಲೆ ಸೃಷ್ಟಿಸುತ್ತವೆ.

ಕೊರೋನಾ ರಣಕೇಕೆ: ರಾಜ್ಯದಲ್ಲಿ ಒಂದೇ ದಿನ 216 ಕೇಸ್, ಹೊರರಾಜ್ಯದವರ ಪಾಲು 196!

ಇವು ಮುಂದೆ ದೇಹಕ್ಕೆ ಕೊರೋನಾ ವೈರಸ್‌ ತಗಲಿದರೆ ಅವುಗಳ ವಿರುದ್ಧ ಹೋರಾಡಬೇಕು. ಹಾಗೆ ಇವು ಹೋರಾಡುತ್ತವೆಯೇ ಇಲ್ಲವೇ ಎಂಬುದು ಇನ್ನುಮೇಲಷ್ಟೇ ಖಚಿತವಾಗಬೇಕಿದೆ. ಈ ಲಸಿಕೆ ಪಡೆದುಕೊಂಡ ವ್ಯಕ್ತಿಗಳಲ್ಲಿ ಹೆಚ್ಚಿನ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದು ಸಂಶೋಧನಾ ತಂಡದ ವೀ ಚೆನ್‌ ಹೇಳಿದ್ದಾರೆ.

ಹೇಗೆ ಪ್ರಯೋಗ?

ಮನುಷ್ಯನಿಗೆ ಎಡಿ5 ಲಸಿಕೆಯ ಸಾಮಾನ್ಯ, ಮಧ್ಯಮ ಅಥವಾ ಹೆಚ್ಚಿನ ಎಂಬ ಮೂರು ಮಾದರಿಗಳಲ್ಲಿ ಡೋಸ್‌ ನೀಡಲಾಗಿದೆ. ಅಂಥವರ ರೋಗನಿರೋಧಕ ಶಕ್ತಿ ಹೆಚ್ಚಿದ್ದು ಕಂಡು ಬಂದಿದೆ. ಅಂದರೆ, ಕೊರೋನಾ ವಿರುದ್ಧ ಹೋರಾಡುವ ಟಿ-ಕೋಶಗಳು ಹಾಗೂ ಕೊರೋನಾ ವೈರಾಣು ನಿಷ್ಕಿ್ರಯಗೊಳಿಸುವ ಪ್ರತಿಕಾಯಗಳು ಲಸಿಕೆ ನೀಡಿದ 28 ದಿನಗಳಲ್ಲಿ ಉತ್ಪತ್ತಿಯಾಗಿವೆ.