ವಾಷಿಂಗ್ಟನ್(ಏ.16)‌: ಕೋವಿಡ್‌-19 ರಣ ಅಟ್ಟಹಾಸಕ್ಕೆ ದೊಡ್ಡಣ್ಣ ಅಮೆರಿಕ ಅಕ್ಷರಶಃ ಸಾವಿನ ಭೂಮಿಯಾಗಿ ಪರಿವರ್ತನೆಯಾಗಿದೆ. ಮಂಗಳವಾರ ಒಂದೇ ದಿನ ಬರೋಬ್ಬರಿ 2,407 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ ಒಂದೇ ದಿನ ದಾಖಲಾದ ಅತೀ ಹೆಚ್ಚಿನ ಸಾವಿನ ಪ್ರಮಾಣ ಇದಾಗಿದೆ. ಈ ಹಿಂದೆ ಏ.10 ರಂದು 2,074 ಮಂದಿ ಸತ್ತಿದ್ದು ಈವರೆಗಿನ ದಾಖಲೆಯಾಗಿತ್ತು.

ಬುಧವಾರವೂ 1,129 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ನ್ಯಾಯಾರ್ಕ್ನಲ್ಲೇ 752 ಮಂದಿ ಅಸುನೀಗಿದ್ದಾರೆ. ನ್ಯೂಯಾರ್ಕ್ ನಗರ ಸೋಂಕಿನ ಮುಖ್ಯಸ್ಥಾನವಾಗಿ ಮಾರ್ಪಟ್ಟಿದ್ದು, ಅಲ್ಲಿ ಒಟ್ಟು 2,03,123 ಮಂದಿ ಸೋಂಕಿತರಿದ್ದಾರೆ. 11,586 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಅಮೆರಿಕದಲ್ಲಿ 6,19,331 ಮಂದಿಗೆ ಸೋಂಕು ತಟ್ಟಿದ್ದು, 27,176 ಮಂದಿ ಸಾವನ್ನಪ್ಪಿದ್ದಾರೆ.

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!

ವಿಶ್ವದಾದ್ಯಂತ 1.30 ಲಕ್ಷ ಸಾವು, 20 ಲಕ್ಷ ಸೋಂಕಿತರು

ಕೋರೋನಾ ಸೋಂಕು ಬುಧವಾರ ವಿಶ್ವದಾದ್ಯಂತ 38000ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2003600ಕ್ಕೆ ತಲುಪಿದೆ.

ಇದೇ ವೇಳೆ ಬುಧವಾರ 4200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಒಟ್ಟು ಸಾವನಪ್ಪಿದವರ ಸಂಖ್ಯೆ 1.30 ಲಕ್ಷಕ್ಕೆ ತಲುಪಿದೆ. ಇನ್ನು ಈ ಪೈಕಿ ಯುರೋಪ್‌ವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!

ಯುರೋಪಿನ 40ಕ್ಕೂ ಹೆಚ್ಚು ದೇಶಗಳು ಕೊರೋನಾ ವೈರಸ್‌ನಿಂದ ಬಾಧಿತವಾಗಿವೆ. ಬುಧವಾರ ಮಧ್ಯಾಹ್ನದ ವೇಳೆಗೆ ಯುರೋಪ್‌ನಲ್ಲಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 1,010,858ಕ್ಕೆ ಏರಿಕೆ ಆಗಿದ್ದು, 85,271 ಮಂದಿ ಸಾವಿಗೀಡಾಗಿದ್ದಾರೆ.