ವಾಷಿಂಗ್ಟನ್‌(ಏ.23): ಈಗಾಗಲೇ 45 ಸಾವಿರ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ನಿಂದ ಅಮೆರಿಕ ನಲುಗಿರುವಾಗಲೇ, ಆತಂಕಕಾರಿ ಎಚ್ಚರಿಕೆಯೊಂದನ್ನು ಅಮೆರಿಕದ ಆರೋಗ್ಯ ತಜ್ಞರೊಬ್ಬರು ಮೊಳಗಿಸಿದ್ದಾರೆ. ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಎರಡನೇ ಸುತ್ತಿನ ಕೊರೋನಾ ಸೋಂಕು ಕಾಣಿಸಿಕೊಳ್ಳಲಿದೆ. ಅದು ಈಗಿನದ್ದಕ್ಕಿಂತ ಅತ್ಯಂತ ಭೀಕರ ಸಮಸ್ಯೆ ತಂದೊಡ್ಡಲಿದೆ ಎಂದು ಅವರು ತಿಳಿಸಿದ್ದಾರೆ.

ವರ್ಷಾಂತ್ಯಕ್ಕೆ ಸಾಮಾನ್ಯ ಸಾಂಕ್ರಾಮಿಕ ಜ್ವರ ಹಾಗೂ ಕೊರೋನಾ ವೈರಸ್‌ ಜ್ವರ ಎರಡೂ ಒಟ್ಟಿಗೆ ಕಾಣಿಸಿಕೊಳ್ಳಲಿವೆ ಎಂದು ರೋಗ ನಿಯಂತ್ರಣ ಮತ್ತು ತಡೆ ಸಂಸ್ಥೆ ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಡ್‌ ತಿಳಿಸಿದ್ದಾರೆ.

ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್‌ ಮೆಚ್ಚುಗೆ!

ಈಗ ಕಾಣಿಸಿಕೊಂಡಿರುವುದು ಕೊರೋನಾ ಮೊದಲ ಸುತ್ತು. ಸಾಂಕ್ರಾಮಿಕ ಜ್ವರದ ಅವಧಿ ಇದಾಗಿದೆಯಾದರೂ, ಕೊರೋನಾ ವೈರಸ್‌ ಕಾಣಿಸಿಕೊಂಡ ಬಳಿಕ ಸಾಮಾನ್ಯ ಸಾಂಕ್ರಾಮಿಕ ಜ್ವರ ಹೆಚ್ಚಿನ ಜನರಿಗೆ ಬಂದಿಲ್ಲ. ಒಂದು ವೇಳೆ ಎರಡೂ ಜ್ವರಗಳು ಒಟ್ಟಿಗೆ ಬಂದಿದ್ದರೆ, ಆರೋಗ್ಯ ವ್ಯವಸ್ಥೆಗೆ ತುಂಬಾ ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

ಆದರೆ ಮುಂದಿನ ಚಳಿಗಾಲಕ್ಕೆ ಎರಡೂ ಒಟ್ಟಿಗೆ ಬರುವ ಸಾಧ್ಯತೆ ಅಧಿಕವಾಗಿದೆ. ಈ ರೀತಿ ಎರಡೂ ಸಮಸ್ಯೆಗಳು ಒಟ್ಟಿಗೆ ಕಾಣಿಸಿಕೊಂಡರೆ ಊಹಿಸಿಕೊಳ್ಳಲು ಆಗದಷ್ಟುಒತ್ತಡ ಆರೋಗ್ಯ ವ್ಯವಸ್ಥೆ ಮೇಲೆ ಬೀಳಲಿದೆ ಎಂದಿದ್ದಾರೆ.