ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್ ಮೆಚ್ಚುಗೆ!
ಕೊರೋನಾ ವೈರಸ್ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಳಜಿ| ಮೋದಿ ಕಾರ್ಯಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಮೆಚ್ಚುಗೆ
ನವದೆಹಲಿ(ಏ.23): ಕೊರೋನಾ ವೈರಸ್ ನಿರ್ವಹಣೆಯಲ್ಲಿ ಪಧಾನಿ ನರೇಂದ್ರ ಮೋದಿ ತೋರಿರುವ ಕಾಳಜಿಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮೋದಿಗೆ ಪತ್ರ ಬರೆದಿರುವ ಅವರು,ಭಾರತದಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ನಿಮ್ಮ ನಾಯಕತ್ವ ಮೆಚ್ಚುವಂಥದ್ದು. ರಾಷ್ಟ್ರವ್ಯಾಪಿ ಲಾಕ್‌ಡೌನ್, ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಕ್ವಾರಂಟೈನ್, ಐಸೊಲೇಷನ್ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಾಡುತ್ತಿರುವ ಖರ್ಚು ಹಾಗೂ ಆರೋಗ್ಯ ಸೇತು ಆ್ಯಪ್ ಮೂಲಕ ತಂತ್ರಜ್ಞಾನಗಳನ್ನು ಬಳಸುತ್ತಿರುವುದು ಶ್ಲಾಘನೀಯ. ಭಾರತೀಯರಿಗೆ ಸಾಕಷ್ಟುಸಾಮಾಜಿಕ ರಕ್ಷಣೆಯನ್ನು ಖಾತ್ರಿ ಪಡಿಸುವ ಜತೆಗೆ ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಸಮತೋಲನಗೊಳಿಸುವ ನಿಮ್ಮ ಪ್ರಯತ್ನ ನೋಡಲು ಹೆಮ್ಮೆಯಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.
ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!
ಭಾರತಕ್ಕೆ ಉತ್ತಮ ನಾಯಕತ್ವ: ಆಸ್ಪ್ರೇಲಿಯಾ ಶ್ಲಾಘನೆ
ನವದೆಹಲಿ: ಭಾರತದ ಕೊರೋನಾ ಹೋರಾಟವನ್ನು ಆಸ್ಪ್ರೇಲಿಯಾ ಕೂಡ ಶ್ಲಾಘಿಸಿದ್ದು, ಈ ವೈರಸ್ ಆರಂಭವಾದ ಬಳಿಕ ಭಾರತದಿಂದ ಉತ್ತಮ ನಾಯಕತ್ವವನ್ನು ನೋಡಿದೆವು ಎಂದು ಹೇಳಿದೆ. ಭಾರತ ಸರ್ಕಾರ ವೈರಸ್ ತಡೆಯುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದೆ. ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವನ್ನು ಲಾಕ್‌ಡೌನ್ ಮಾಡಿ, ವೈರಸ್ ತೊಲಗಿಸಲು ಭಾರತ ಪರಿಶ್ರಮ ಪಡುತ್ತಿದೆ ಎಂದು ಭಾರತದಲ್ಲಿನ ಆಸ್ಪ್ರೇಲಿಯಾ ರಾಯಭಾರಿ ಬ್ಯಾರಿ ಈ ಫಾರೆಲ್ ಹೇಳಿದ್ದಾರೆ.