ನವದೆಹಲಿ (ಮಾ.07): ವಿಶ್ವಾದ್ಯಂತ 3000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದು ಭಾರಿ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್‌ ಇದೀಗ ಜಗತ್ತಿನ ಆರ್ಥಿಕತೆ ಮೇಲೂ ತೀವ್ರ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಎಚ್ಚರಿಕೆ ನೀಡಿದೆ. ಕೊರೋನಾದಿಂದ ಜಾಗತಿಕ ಆರ್ಥಿಕತೆಗೆ ಸುಮಾರು 25 ಲಕ್ಷ ಕೋಟಿ ರು. ನಷ್ಟವಾಗಬಹುದು ಎಂದು ಭವಿಷ್ಯ ನುಡಿದಿದೆ.

ಇನ್ನೊಂದೆಡೆ, ಕೊರೋನಾ ವ್ಯಾಧಿ ಹಿನ್ನೆಲೆಯಲ್ಲಿ ವಿಶ್ವದ ನಾನಾ ರಾಷ್ಟ್ರಗಳು ವಿಮಾನ ಸೇವೆ ಮೇಲೆ ನಿರ್ಬಂಧ ವಿಧಿಸುತ್ತಿರುವುದರಿಂದಾಗಿ ಜಾಗಕವಾಗಿ ವಿಮಾನಯಾನ ಸಂಸ್ಥೆಗಳಿಗೆ 63 ಬಿಲಿಯನ್‌ ಡಾಲರ್‌(4.66 ಲಕ್ಷ ಕೋಟಿ ರು.)ನಿಂದ 113 ಬಿಲಿಯನ್‌ ಡಾಲರ್‌(8.36 ಲಕ್ಷ ಕೋಟಿ ರು.)ವರೆಗೆ ವರಮಾನ ಖೋತಾ ಆಗಲಿದೆ ಎಂದು ಅಂತಾರಾಷ್ಟ್ರೀಯ ವೈಮಾನಿಕ ಸಂಘಟನೆ(ಐಎಟಿಎ) ಹೇಳಿದೆ.

ಇದೇ ವೇಳೆ, ಕೊರೋನಾ ವ್ಯಾಪಿಸುವುದನ್ನು ತಡೆಯುವ ಸಲುವಾಗಿ 13 ದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರಿಂದಾಗಿ 29 ಕೋಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಯುನೆಸ್ಕೋ ತಿಳಿಸಿದೆ.

ಮಾಸ್ಕ ಧರಿಸಿದ್ರೆ ಬರೋಲ್ವಾ? ಮಾಂಸ ತಿಂದ್ರೆ ಬರುತ್ತಾ? ಕರೋನಾದ ಸತ್ಯ-ಮಿಥ್ಯಗಳು!.

ಎಡಿಬಿ ವರದಿ:  ದೇಶೀಯ ಬೇಡಿಕೆ ಕುಸಿತ, ಪ್ರವಾಸಿಗರ ಇಳಿಮುಖ, ವ್ಯವಹಾರ ಸಂಬಂಧಿ ಪ್ರಯಾಣ, ವ್ಯಾಪಾರ, ಉತ್ಪಾದನೆ, ಸರಬರಾಜು, ಆರೋಗ್ಯ ಪರಿಣಾಮ ಮುಂತಾದ ಕ್ರಮಗಳಿಂದಾಗಿ ಏಷ್ಯಾದ ಆರ್ಥಿಕತೆಗಳ ಮೇಲೆ ಕೊರೋನಾ ವೈರಸ್‌ ಪರಿಣಾಮ ಬೀರಬಹುದು. ಈ ವೈರಸ್‌ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದರ ಮೇಲೆ ಆರ್ಥಿಕ ನಷ್ಟದ ತೀವ್ರತೆ ಗೊತ್ತಾಗುತ್ತದೆ. ಆದರೆ ವೈರಸ್‌ನ ವ್ಯಾಪಿಸುವಿಕೆ ಕುರಿತು ಇನ್ನೂ ಅನಿಶ್ಚಿತತೆ ಇದೆ. ಜಾಗತಿಕ ಆರ್ಥಿಕತೆ ಮೇಲೆ ಈ ವೈರಸ್‌ನಿಂದ ಪರಿಣಾಮವಾಗಲಿದ್ದು, 5ರಿಂದ 25 ಲಕ್ಷ ಕೋಟಿ ರು.ವರೆಗೂ ನಷ್ಟವಾಗಲಿದೆ. ಅದರಲ್ಲೂ ಏಷ್ಯಾ ಆರ್ಥಿಕತೆ ಮೇಲೆ ಈ ವೈರಸ್‌ ಗಂಭೀರ ಪರಿಣಾಮ ಬೀರಲಿದೆ ಎಂದು ಎಡಿಬಿ ತನ್ನ ವರದಿಯಲ್ಲಿ ಹೇಳಿದೆ.

ಕೊರೋನಾ ವೈರಸ್‌ನ ಕೇಂದ್ರ ಸ್ಥಾನವಾಗಿರುವ ಚೀನಾಕ್ಕೆ 7.5 ಲಕ್ಷ ಕೋಟಿ ರು. ನಷ್ಟವಗಲಿದೆ. ಇದು ಆ ದೇಶದ ಜಿಡಿಪಿಯ ಶೇ.0.8ರಷ್ಟಾಗಿರಲಿದೆ. ಏಷ್ಯಾ ಖಂಡ 1.6 ಲಕ್ಷ ಕೋಟಿ ರು. ಕಳೆದುಕೊಳ್ಳಲಿದೆ ಎಂದು ತಿಳಿಸಿದೆ.

ಸೈನಿಕರ ಹೋಳಿ ಆಚರಣೆ ರದ್ದು

ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಸಿಆರ್‌ಪಿಎಫ್‌, ಬಿಎಸ್ಸೆಫ್‌ನಂತಹ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ ಸೈನಿಕರು ಈ ಬಾರಿ ಹೋಳಿ ಆಚರಿಸುವುದನ್ನು ರದ್ದುಪಡಿಸಲಾಗಿದೆ. ಮಾ.13ಕ್ಕೆ ದೇಶಾದ್ಯಂತ ನಡೆಯಬೇಕಿದ್ದ ಸಿಐಎಸ್‌ಎಫ್‌ ವಾರ್ಷಿಕೋತ್ಸವ ರದ್ದಾಗಿದೆ.