ಬೀಜಿಂಗ್‌[ಫೆ.05]: ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್‌ ಅನ್ನು ನಿಗ್ರಹಿಸಲು ಸಹಸ್ರಾರು ಕೋಟಿ ರು. ಹಣವನ್ನು ಚೀನಾ ವ್ಯಯಿಸುತ್ತಿದ್ದರೂ ಫಲ ಸಿಗುತ್ತಿಲ್ಲ. ಸೋಮವಾರ ಒಂದೇ ದಿನ ಈ ವೈರಾಣು 64 ಮಂದಿಯನ್ನು ಬಲಿ ಪಡೆದಿದ್ದು, ಒಟ್ಟು ಸಾವಿನ ಸಂಖ್ಯೆ 425ಕ್ಕೇರಿಕೆಯಾಗಿದೆ. ಕೊರೋನಾದಿಂದ ಬಲಿಯಾದವರ ಸಂಖ್ಯೆ 500ರ ಗಡಿಯತ್ತ ದಾಪುಗಾಲು ಇಡುತ್ತಿರುವುದರಿಂದ ಚೀನಾ ಆತಂಕಗೊಂಡಿರುವಾಗಲೇ, ಹೊಸದಾಗಿ 3235 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚೀನಾದಲ್ಲಿ ಈ ಸೋಂಕಿನಿಂದ ನರಳುತ್ತಿರುವವರ ಸಂಖ್ಯೆ 20438ಕ್ಕೇರಿಕೆಯಾಗಿದ್ದು, ಆ ದೇಶವನ್ನು ಅಕ್ಷರಶಃ ನಿದ್ರೆಗೆಡಿಸಿದೆ.

ಸೋಮವಾರ ಮೃತಪಟ್ಟ64 ಮಂದಿ, ಕೊರೋನಾದ ಕೇಂದ್ರ ಬಿಂದುವಾಗಿರುವ ಹುಬೆ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಕೊರೋನಾ ವೈರಾಣು ಬಾಧೆಗೆ ತುತ್ತಾಗಿ ಬಳಿಕ ಚೇತರಿಸಿಕೊಂಡ 632 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆಯಾದರೂ, ಹೊಸದಾಗಿ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿದೆ. ಸೋಮವಾರ ಒಂದೇ ದಿನ ಬರೋಬ್ಬರಿ 3235 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮತ್ತಷ್ಟು ನಗರಗಳಲ್ಲಿ ನಿರ್ಬಂಧ:

ಕೊರೋನಾ ತೀವ್ರ ರೀತಿಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಮತ್ತಷ್ಟುನಗರಗಳಲ್ಲಿ ನಿರ್ಬಂಧ ಜಾರಿಗೆ ತಂದಿದೆ. ಆ ಪೈಕಿ ಒಂದು ಶಹರ ಚೀನಾದ ಪ್ರಮುಖ ಜಾಗತಿಕ ನಗÜರವಾಗಿರುವ ಶಾಂಘೈನಿಂದ 175 ಕಿ.ಮೀ. ದೂರದಲ್ಲಿರುವುದು ಉದ್ಯಮಪತಿಗಳ ಆತಂಕಕ್ಕೆ ಕಾರಣವಾಗಿದೆ.

ತೈಝೌ ನಗರದಲ್ಲಿ ಒಂದು ಮನೆಯಿಂದ ಪ್ರತಿ ಎರಡು ದಿನಕ್ಕೆ ಒಬ್ಬ ವ್ಯಕ್ತಿ ಮಾತ್ರ ಹೊರಬಂದು ಅವಶ್ಯ ವಸ್ತು ಖರೀದಿಸಿಕೊಂಡು ಮರಳಬೇಕು ಎಂಬ ನಿರ್ಬಂಧ ಹೇರಲಾಗಿದೆ. ಇದರ ಜತೆಗೆ 95 ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಗುರುತಿನ ಚೀಟಿ ತೋರಿಸಬೇಕು ಎಂದು ಸೂಚಿಸಲಾಗಿದೆ. ಕೊರೋನಾಪೀಡಿತ ಹುಬೆ ಪ್ರಾಂತ್ಯದವರಿಗೆ ಮನೆ ಬಾಡಿಗೆ ಕೊಡಕೂಡದು ಎಂದು ಸೂಚಿಸಲಾಗಿದೆ.

ಇದೇ ವೇಳೆ ಶಾಂಘೈಗೆ ಸಮೀಪವಿರುವ ಹ್ಯಾಂಗ್ಝೌನಲ್ಲಿ ಮುಖಗವಸು ಧರಿಸುವುದು, ಗುರುತಿನ ಚೀಟಿ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಯುಹಾಂಗ್‌ ಜಿಲ್ಲೆಯಲ್ಲಿ ಬಸ್‌, ಟ್ಯಾಕ್ಸಿ, ಶಟಲ್‌ ಬಸ್‌ ಹಾಗೂ ಏರ್‌ಪೋರ್ಟ್‌ ಮಾರ್ಗಗಳನ್ನು ಮುಚ್ಚಲಾಗಿದೆ.

ಭಾರತದಿಂದ ವೀಸಾ ರದ್ದು:

ಕೊರೋನಾ ಬಾಧೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಳೆದ ಎರಡು ವಾರಗಳ ಅವಧಿಯಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಚೀನಿಯರು ಹಾಗೂ ವಿದೇಶಿ ಪ್ರಜೆಗಳ ವೀಸಾವನ್ನು ಹಠಾತ್‌ ರದ್ದುಗೊಳಿಸಿದೆ. ಜ.15ರ ನಂತರ ಚೀನಾಕ್ಕೆ ಹೋಗಿ, ಭಾರತಕ್ಕೆ ಆಗಮಿಸಿರುವ ವ್ಯಕ್ತಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ.