ಬೀಜಿಂಗ್‌[ಜ.30]: ಚೀನಾದಲ್ಲಿ ಮಾರಕ ಕೊರೋನಾ ವೈರಸ್‌ನ ರುದ್ರ ತಾಂಡವ ಮುಂದುವರಿದಿದ್ದು, ಮತ್ತೆ 25 ಮಂದಿಯನ್ನು ಈ ರೋಗ ಬಲಿ ಪಡೆದುಕೊಂಡಿದೆ. ಈ ಮೂಲಕ ಕೊರೋನಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಹುಬೈ ಪ್ರಾಂತ್ಯದಲ್ಲಿ 6000 ಮಂದಿಗೆ ಕೊರೋನಾ ವೈರಸ್‌ ಕಾಣಿಸಿಕೊಂಡಿದ್ದು, ಮುಂದಿನ 10 ದಿನಗಳಲಿ ಈ ವೈರಸ್‌ ತನ್ನ ಉಚ್ಛ್ರಾಯ ಸ್ಥಿತಿ ತಲುಪಲಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚೀನಾದಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡವರ ಪೈಕಿ 1,239 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, 9,239 ಮಂದಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಈ ವರೆಗೆ ಕೇವಲ 103 ಮಂದಿ ಮಾತ್ರ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಚೀನಾದ ಎಲ್ಲಾ ಪ್ರಾಂತ್ಯಗಳಿಗೂ ವೈರಸ್‌ ಹಬ್ಬಿದರೂ ಟಿಬೆಟ್‌ನಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಟಿಬೆಟ್‌ಗೂ ಕೊರೋನಾ ವೈರಸ್‌ ಹಬ್ಬಿದ್ದು, ಒಂದು ಶಂಕಿತ ಪ್ರಕರಣ ಪತ್ತೆಯಾಗಿದೆ.

ಕೊರೋನಾ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚಿರುವ 30 ದೇಶಗಳ ಪಟ್ಟಿಯಲ್ಲಿ ಭಾರತ!

ವುಹಾನ್‌ ಬಳಿಕ ಇದೀಗ ಹುಬೈ ಪ್ರಾಂತ್ಯ ರೋಗಾಣುವಿನ ಕೇಂದ್ರಬಿಂದು ಎನಿಸಿಕೊಂಡಿದೆ. ಹುಬೈ ಒಂದರಲ್ಲೇ ಹೊಸದಾಗಿ 840 ಶಂಕಿತ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ವೈರಸ್‌ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

10 ದಿನದಲ್ಲಿ ಭೀಕರ ಅನಾಹುತ:

ಈ ಮಧ್ಯೆ ಕೊರೋನಾ ವೈರಸ್‌ ಇನ್ನು 10 ದಿನಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪಲಿದ್ದು, ಇನ್ನಷ್ಟುಭೀಕರ ಅನಾಹುತಗಳನ್ನು ಸೃಷ್ಟಿಸಲಿದೆ ಎಂದು ಚೀನಾದ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ರೋಗ ಕಾಣಿಸಿಕೊಂಡ ವ್ಯಕ್ತಿಯನ್ನು 14 ದಿನ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಒಂದು ವೇಳೆ ರೋಗಿ ಚೇತರಿಸಿಕೊಂಡರೆ ಕಾಲ ಕಾಲಕ್ಕೆ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೀಗಿದೆ ಕೊರೋನಾ ಬಿಟ್ಕೊಂಡ ವುಹಾನ್ ನಗರ: ಮೂಲೆ ಮೂಲೆಯೂ ವೈರಸ್ ಆಗರ!