* ಬ್ರಿಟನ್ನಲ್ಲಿ ಕೊರೋನಾ ಡೆಲ್ಟಾತಳಿ ರಾದ್ಧಾಂತ!* ಒಂದೇ ವಾರ 33 ಸಾವಿರ ‘ಭಾರತದ ವೈರಸ್‌’ ಪತ್ತೆ* ದೇಶದಲ್ಲಿ ಶೇ.99ರಷ್ಟು ಹರಡುತ್ತಿರೋದು ಇದೇ ತಳಿ

ಲಂಡನ್‌(ಜೂ.19): ಭಾರತದಲ್ಲಿ ಮೊದಲು ಪತ್ತೆಯಾಗಿ 2ನೇ ಅಲೆಗೆ ಕಾರಣವಾದ ‘ಡೆಲ್ಟಾವೈರಸ್‌’ ಕೊರೋನಾ ರೂಪಾಂತರಿಯು ಬ್ರಿಟನ್‌ನಲ್ಲೂ ಕಂಟಕವಾಗಿ ಕಾಡತೊಡಗಿದೆ. ಡೆಲ್ಟಾವೈರಸ್‌ ಕೊರೋನಾ ಪ್ರಕರಣಗಳ ಸಂಖ್ಯೆ ಬ್ರಿಟನ್‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ.

Add Asianetnews Kannada as a Preferred SourcegooglePreferred

ಕಳೆದ ಒಂದು ವಾರದಲ್ಲಿ ಬ್ರಿಟನ್‌ನಲ್ಲಿ 33,630 ಡೆಲ್ಟಾವೈರಸ್‌ ಪ್ರಕರಣಗಳು ದಾಖಲಾಗಿದ್ದು, ಡೆಲ್ಟಾದಿಂದ ಸೋಂಕಿತರಾದವರ ಪ್ರಕರಣಗಳ ಸಂಖ್ಯೆ75,953ಕ್ಕೆ ಏರಿಕೆ ಆಗಿದೆ. ಅಲ್ಲದೇ ಬ್ರಿಟನ್‌ನಲ್ಲಿ ಪತ್ತೆ ಆದ ಕೊರೋನಾ ಕೇಸ್‌ಗಳನ್ನು ಜೆನೆಟಿಕ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದಾಗ ಅವುಗಳಲ್ಲಿ ಶೇ.99ರಷ್ಟುವೈರಸ್‌ಗಳು ಡೆಲ್ಟಾಪ್ರಭೇದದವು ಎಂಬುದು ಪತ್ತೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಅಲ್ಫಾ ವೈರಸ್‌ಗಿಂತ ಹೆಚ್ಚು ಪ್ರಮಾಣದಲ್ಲಿ ಡೆಲ್ಟಾಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜೂ.14ರ ವರೆಗಿನ ವರದಿಯ ಪ್ರಕಾರ, ಡೆಲ್ಟಾವೈರಸ್‌ನಿಂದಾಗಿ ಬ್ರಿಟನ್‌ನಲ್ಲಿ 806 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಕಳೆದ ಒಂದು ವಾರ ಒಂದರಲ್ಲೇ 423 ಮಂದಿ ಸೋಂಕಿತರು ಆಸ್ಪತ್ರೆ ಸೇರಿದ್ದಾರೆ. ಈ ಪೈಕಿ 527 ಜನರು ಲಸಿಕೆ ಪಡೆದಿಲ್ಲ. 84 ಜನರು ಎರಡೂ ಡೋಸ್‌ ಲಸಿಕೆ ಪಡೆದವರಾಗಿದ್ದಾರೆ ಎಂದಿದ್ದಾರೆ. ಈ ಮೂಲಕ ಲಸಿಕೆ ಪಡೆದವರಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆ ಎಂಬುದನ್ನು ಅವರು ಅಂಕಿ-ಅಂಶಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆದರೆ, ಡೆಲ್ಟಾವೈರಸ್‌ನಲ್ಲಿ ಸಾವಿನ ಪ್ರಮಾಣ ಈಗಿನ ಮಟ್ಟಿಗೆ ಕಡಿಮೆ ಇದೆ. ಹಾಗಂತ ಮುಂದೆ ಕೂಡ ಇದೇ ರೀತಿ ಇರಲಿದೆ ಎಂದು ಹೇಳಲಾಗದು. ಏಕೆಂದರೆ ಸೋಂಕು ತಗುಲಿದ ಹಲವು ವಾರಗಳ ಬಳಿಕ ಅದು ತೀವ್ರಗೊಂಡು ಸಾವಿಗೆ ಕಾರಣವಾಗಬಹುದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ಈಗ ಒಟ್ಟಾರೆ 1.76 ಲಕ್ಷ ಸಕ್ರಿಯ ಕೊರೋನಾ ಪ್ರಕರಣಗಳಿವೆ.