ಕಾಲೇಜು ಆರಂಭ ಬಳಿಕ ಅಮೆರಿಕದಲ್ಲಿ ತೀವ್ರ ಹೆಚ್ಚಳ| ಏಪ್ರಿಲ್‌ನಲ್ಲಿ ಶೇ.2ರಷ್ಟಿದ್ದ ಸೋಂಕು ಸೆಪ್ಟೆಂಬರ್‌ಗೆ ಶೇ.10ಕ್ಕೆ ಏರಿಕೆ| ಶಾಲೆ, ಕಾಲೇಜು ಆರಂಭಕ್ಕೆ ಮುಂದಾಗಿರುವ ಭಾರತಕ್ಕೆ ಇದು ಪಾಠ| ಅಮೆರಿಕದಲ್ಲಿ 5-17 ವರ್ಷದ 2.77 ಲಕ್ಷ ಮಕ್ಕಳಿಗೆ ಸೋಂಕು| ಬಾರ್‌, ಪಾರ್ಟಿಗೆ ತೆರಳುವುದರಿಂದ ಕಾಲೇಜು ಯುವಕರಿಗೆ ಸೋಂಕು| ಆಟ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವ ಶಾಲಾ ಮಕ್ಕಳಿಗೆ ಸೋಂಕು

ವಾಷಿಂಗ್ಟನ್‌/ನವದೆಹಲಿ(ಅ.01): 2 ಲಕ್ಷ ಕೊರೋನಾ ಪೀಡಿತರ ಸಾವಿನೊಂದಿಗೆ ವಿಶ್ವದಲ್ಲೇ ನಂ.1 ಸ್ಥಾನದಲ್ಲಿರುವ ಅಮೆರಿಕದಲ್ಲಿ, ಶಾಲಾ- ಕಾಲೇಜುಗಳು ಆರಂಭವಾದ ಬೆನ್ನಲ್ಲೇ ಮಕ್ಕಳು ಮತ್ತು ಹದಿಹರೆಯದವರಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಹಬ್ಬುತ್ತಿರುವುದು ಕಂಡುಬಂದಿದೆ. ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಮುನ್ನಾ ಸಮಯವಾದ ಏಪ್ರಿಲ್‌ನಲ್ಲಿ ಅಮೆರಿಕದ ಒಟ್ಟು ಸೋಂಕಿತರಲ್ಲಿ ಎಲ್ಲಾ ವಯಸ್ಸಿನ ಮಕ್ಕಳ ಪ್ರಮಾಣ ಕೇವಲ ಶೇ.2ರಷ್ಟಿದ್ದರೆ, ಶೈಕ್ಷಣಿಕ ಚಟುವಟಿಕೆ ಆರಂಭವಾದ ನಂತರದ ದಿನಗಳಾದ ಸೆಪ್ಟೆಂಬರ್‌ನಲ್ಲಿ ಅದು ಶೇ.10ಕ್ಕೆ ಏರಿದೆ. ಇದು ಸಹಜವಾಗಿಯೇ ಮಕ್ಕಳು, ಪೋಷಕರು ಮತ್ತು ಸರ್ಕಾರವನ್ನು ಆತಂಕದ ಮಡುವಿಗೆ ತಳ್ಳಿದೆ.

ಈ ಸುದ್ದಿ ಅಮೆರಿಕಕ್ಕೆ ಮಾತ್ರವಲ್ಲ, ಕೊರೋನಾ ಹೊರತಾಗಿಯೂ ಶೈಕ್ಷಣಿಕ ಚಟುವಟಿಕೆ ಪುನಾರಂಭಕ್ಕೆ ಸಜ್ಜಾಗಿರುವ ಭಾರತ ಸೇರಿದಂತೆ ಇತರೆ ದೇಶಗಳಿಗೂ ಪಾಠವಾಗಬೇಕಾದ ಅವಶ್ಯಕತೆ ಇದೆ ಎಂದು ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಈಗಾಗಲೇ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣದ ತರಗತಿ ಆರಂಭಿಸಲು ಯುಜಿಸಿ ದಿನಾಂಕ ನಿಗದಿ ಮಾಡಿದೆ. ಮತ್ತೊಂದೆಡೆ ಅ.15ರ ಬಳಿಕ ಹಂತಹಂತವಾಗಿ ಪೋಷಕರು, ಶಾಲಾ ಆಡಳಿತ ಮಂಡಳಿಯ ಹೊಣೆಗಾರಿಕೆಯಲ್ಲಿ ಶಾಲಾ ಚಟುವಟಿಕೆ ಆರಂಭಿಸಲು ಅನುಮತಿ ನೀಡಿರುವ ಭಾರತ ಸರ್ಕಾರಕ್ಕೂ ಎಚ್ಚರಿಕೆ ಗಂಟೆಯಾಗಬೇಕೆಂಬ ಮಾತು ಕೇಳಿಬಂದಿದೆ.

ಮಕ್ಕಳೂ ಹೊರತಲ್ಲ:

ಕೊರೋನಾದ ಆರಂಭದ ದಿನಗಳಲ್ಲಿ ಅದು ವೃದ್ಧರಿಗೆ ಮಾತ್ರ ಎಂಬ ಮಾತುಗಳಿದ್ದವು. ಅದಕ್ಕೆ ಇಂಬು ನೀಡುವಂತೆ ಅಮೆರಿಕದಲ್ಲಿ ಸಾವನ್ನಪ್ಪಿದ 2 ಲಕ್ಷ ಜನರ ಪೈಕಿ ಬಹುತೇಕರು 50-60 ವರ್ಷದ ದಾಟಿದವರೇ ಇದ್ದರು. ಇದರ ನಡುವೆಯೇ ಸೋಂಕು ಇಳಿಕೆ ಕಾಣದ ಹೊರತಾಗಿಯೂ ಆಗಸ್ಟ್‌ನಲ್ಲೇ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್‌ ತೆರವುಗೊಳಿಸಿದ್ದೂ ಅಲ್ಲದೆ, ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಯಿತು.

ಅದರ ಪರಿಣಾಮಗಳು ಇದೀಗ ಕಾಣಲಾರಂಭಿಸಿದೆ. ಏಪ್ರಿಲ್‌ನಲ್ಲಿ ದೇಶದ ಒಟ್ಟು ಸೋಂಕಿತರಲ್ಲಿ ಮಕ್ಕಳ ಪ್ರಮಾಣ ಶೇ.2ರಷ್ಟುಇದ್ದಿದ್ದು ಇದೀಗ ಶೇ.10ಕ್ಕೆ ಏರಿದೆ. ಇದು ಸೋಂಕು ಹರಡದಂತೆ ತಡೆಯುವಲ್ಲಿ ಮಾಸ್ಕ್‌, ಕೈ ತೊಳೆಯುವುದು, ಸಾಮಾಜಿಕ ಅಂತರ ಮತ್ತು ಇತರೆ ನಿಯಂತ್ರಣಾ ಕ್ರಮಗಳು ಎಷ್ಟುಅವಶ್ಯಕ ಎಂಬುದನ್ನು ಒತ್ತಿಹೇಳಿದೆ ಎಂದು ‘ದ ಅಮೆರಿಕನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌’ ವರದಿ ನೀಡಿದೆ.

ಮತ್ತೊಂದೆಡೆ ‘ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌’ (ಸಿಡಿಸಿ) ಸಂಸ್ಥೆ ಕೂಡಾ ಮಕ್ಕಳು, ಯುವಕರು ಶಾಲಾ-ಕಾಲೇಜಿಗೆ ತೆರಳಲು ಆರಂಭಿಸಿದ ಬಳಿಕ ಅವರಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಕಂಡುಬಂದಿದೆ ಎಂದು ಹೇಳಿದೆ. ಅದರಲ್ಲೂ ಚಿಕ್ಕ ಮಕ್ಕಳಿಗೆ ಹೋಲಿಸಿದರೆ ಯುವಕರಲ್ಲಿ ಸೋಂಕಿನ ಪ್ರಮಾಣ 2 ಪಟ್ಟು ಹೆಚ್ಚಿದೆ. ಹಿರಿಯರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕಿನ ತೀವ್ರತೆ, ಆಸ್ಪತ್ರೆ ಸೇರುವ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆಯಾದರೂ ಅವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೊರತಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಎಚ್ಚರಿಸಿದೆ.

ಕಾಲೇಜು ಯುವಕರು ಬಾರ್‌, ಪಾರ್ಟಿಗೆ ತೆರಳುವುದರಿಂದ ಹೆಚ್ಚು ಸೋಂಕಿಗೆ ತುತ್ತಾಗುತ್ತಿದ್ದರೆ, ಶಾಲಾ ಮಕ್ಕಳು, ಆಟ ಮತ್ತು ಇತರೆ ಚಟುವಟಿಕೆಗಳ ವೇಳೆ ಸೋಂಕಿಗೆ ತುತ್ತಾಗುತ್ತಿರುವ ಸಾಧ್ಯತೆ ಹೆಚ್ಚಿದೆ ಎಂದು ಜಾಜ್‌ರ್‍ ವಾಷಿಂಗ್ಟನ್‌ ವಿವಿಯ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಲಿಯೇನಾ ವೆನ್‌ ಹೇಳಿದ್ದಾರೆ.

ಸಿಡಿಸಿ ಅಂಕಿ ಅಂಶಗಳ ಅನ್ವಯ ಮಾಚ್‌ರ್‍ನಿಂದ ಸೆ.19ರ ಅವಧಿಯಲ್ಲಿ ಅಮೆರಿಕದಲ್ಲಿ 5-17ರ ವಯೋಮಾನದ 2.77 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ. ಹಿರಿಯರಿಗೆ ಹೋಲಿಸಿದರೆ ಮಕ್ಕಳಲ್ಲಿ ರೋಗ ಪತ್ತೆ ಪರೀಕ್ಷೆ ಪ್ರಮಾಣ ಕಡಿಮೆ ಇರುವ ಕಾರಣ, ಸೋಂಕಿತ ಮಕ್ಕಳ ಸಂಖ್ಯೆ ಇನ್ನು ಹೆಚ್ಚಿರಬಹುದು. ಸೋಂಕಿತ ಮಕ್ಕಳ ಪೈಕಿ ಶೇ.2ರಷ್ಟುಮಕ್ಕಳ ಮಾತ್ರವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ 51 ಮಕ್ಕಳು ಸಾವನ್ನಪ್ಪಿದ್ದಾರೆ.