Shanghai Summit: ವಿಶ್ವದ ಆಹಾರ ಸಮಸ್ಯೆ ನೀಗಿಸಲು ಸಹಕಾರ ಅಗತ್ಯ: ಮೋದಿ
ಸಿರಿಧಾನ್ಯದಿಂದ ಆಹಾರ ಸಮಸ್ಯೆ ನೀಗಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಉಜ್ಬೇಕ್‌ನಲ್ಲಿ ನಡೆದ ಶಾಂಘೈ ಶೃಂಗದಲ್ಲಿ ಮಾತನಾಡಿದ ಭಾರತದ ಪ್ರಧಾನಿ ಶಾಂಘೈ ಸಹಕಾರ ಸಂಘಟನೆಯ 8 ದೇಶಗಳ ನಡುವೆ ಸಹಕಾರಕ್ಕೆ ಕರೆ ನೀಡಿದರು.
ಉಜ್ಬೇಕಿಸ್ತಾನ: ಇತ್ತೀಚಿನ ವರ್ಷಗಳಲ್ಲಿ ಕೋವಿಡ್ ಹಾವಳಿ ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಕಾರಣ ವಿಶ್ವವು ಕಂಡು ಕೇಳರಿಯದಷ್ಟುಆಹಾರ ಹಾಗೂ ಇಂಧನ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಈ ಸವಾಲು ಮೆಟ್ಟಿನಿಲ್ಲಲು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶುಕ್ರವಾರ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ(SCO Summit) ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping), ಪಾಕ್ ಪ್ರಧಾನಿ ಶಹಬಾಜ್ ಷರೀಫ್ (Shahbaz Sharif), ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಸೇರಿ 8 ದೇಶಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಕ್ಸಿ ಹಾಗೂ ಮೋದಿ ಅವರು 2020ರ ಗಲ್ವಾನ್ ಸಂಘರ್ಷದ ನಂತರ ಇದೇ ಮೊದಲ ಬಾರಿ ಮುಖಾಮುಖಿ ಆಗಿದ್ದು ವಿಶೇಷವಾಗಿತ್ತು.
‘ಭಾರತ ಈ ವರ್ಷ ಶೇ.7.5 ದರದಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ. ಶಾಂಘೈ ಸಹಕಾರ ಸಂಘಟನೆಯ (Shanghai Cooperation Organization) ಸದಸ್ಯ ದೇಶಗಳ ನಡುವೆ ಉತ್ತಮ ಸಹಕಾರ ಹಾಗೂ ಪರಸ್ಪರ ನಂಬಿಕೆಯನ್ನು ಭಾರತ ಬಯಸುತ್ತದೆ. ಉಕ್ರೇನ್ ಯುದ್ಧ (Ukraine war) ಹಾಗೂ ಕೋವಿಡ್ ಪಿಡುಗು ಜಾಗತಿಕ ಆಹಾರ ಪೂರೈಕೆ ಜಾಲಕ್ಕೆ ಸಾಕಷ್ಟುಅಡ್ಡಿ ಉಂಟು ಮಾಡಿವೆ. ಇದರಿಂದ ವಿಶ್ವ ಕಂಡು ಕೇಳರಿಯದ ಆಹಾರ ಹಾಗೂ ತೈಲ ಸಮಸ್ಯೆ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಎಸ್‌ಸಿಒ ದೇಶಗಳು ಒಟ್ಟಾಗಿ ಕೆಲಸ ಮಾಡಿ ಆಹಾರ ಸಮಸ್ಯೆಯನ್ನು ಪರಿಹರಿಸಬೇಕು’ ಎಂದರು.
‘ಆಹಾರ ಸಮಸ್ಯೆ ಇತ್ಯರ್ಥದಲ್ಲಿ ಸಿರಿಧಾನ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಇದು ಸಾಂಪ್ರದಾಯಿಕ, ಪೌಷ್ಟಿಕ ಹಾಗೂ ಕಮ್ಮಿ ಖರ್ಚಿನ ಆಹಾರ. ಹೀಗಾಗಿ ಎಸ್‌ಸಿಒ ದೇಶಗಳು ಸಿರಿಧಾನ್ಯ (Cereals) ಮೇಳ ಆಯೋಜಿಸಬೇಕು’ ಎಂದೂ ಅವರು ಕರೆ ನೀಡಿದರು
.ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಮತ್ತೆ ಜಿಗಿದ ಹಣದುಬ್ಬರ; ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ
‘ಎಸ್‌ಸಿಒ ಸದಸ್ಯ ದೇಶಗಳು ವಿಶ್ವದ ಜಿಡಿಪಿಗೆ ಶೇ.40ರಷ್ಟುಕೊಡುಗೆ ನೀಡುತ್ತವೆ. ಶೇ.40ರಷ್ಟು ವಿಶ್ವದ ಜನಸಂಖ್ಯೆ (world's population)ಈ ದೇಶಗಳಲ್ಲೇ ಇದೆ. ಇಂಥ ಸಂದರ್ಭದಲ್ಲಿ ಭಾರತವು ಔದ್ಯಮಿಕ ಹಬ್ ಆಗಿ ಮಾರ್ಪಾಡಾಗುತ್ತಿದೆ ಹಾಗೂ ಶೇ.7.5ರ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಸಾಧ್ಯತೆ ಇದೆ. ದೇಶದ ಪ್ರತಿ ಕ್ಷೇತ್ರದಲ್ಲೂ ನಾವು ಸೃಜನಶೀಲತೆಗೆ ಒತ್ತು ನೀಡುತ್ತಿದ್ದೇವೆ. 100 ಯೂನಿಕಾರ್ನ್‌ಗಳು ಸೇರಿ 70 ಸಾವಿರ ಸ್ಟಾರ್ಟಪ್‌ಗಳು ಭಾರತದಲ್ಲಿವೆ. ಎಸ್‌ಸಿಒ ದೇಶಗಳಿಗೆ ಸ್ಟಾರ್ಟಪ್‌ಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಭಾರತ ಸಿದ್ಧವಿದೆ’ ಎಂದರು.
China Lockdown: ಹಸಿವಿನಿಂದ ತತ್ತರಿಸಿದ ಜನ; ಕಿಟಕಿಯಿಂದ ಆಹಾರಕ್ಕೆ ಮೊರೆ
ಮೆಡಿಕಲ್ ಟೂರಿಸಂಗೆ (medical tourism) ಕೂಡ ಭಾರತ ಫೇವರಿಟ್. ಎಸ್‌ಸಿಒ ದೇಶಗಳು ತಮ್ಮ ತಮ್ಮ ದೇಶೀಯ ಔಷಧಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ತರಬೇಕು ಎಂದೂ ಹೇಳಿದರು. 2001ರಲ್ಲಿ ರಚನೆಯಾದ ಶಾಂಘೈ ಸಹಕಾರ ಸಂಘಟನೆ ಮೊದಲು 6 ದೇಶಗಳ ಒಕ್ಕೂಟ ಆಗಿತ್ತು. 2017ರಲ್ಲಿ ಭಾರತ, ಪಾಕ್ ಸದಸ್ಯ ದೇಶವಾದವು.