ವಾಷಿಂಗ್ಟನ್(ಜ.07)‌: ನ.3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆದ ಎಲೆಕ್ಟೋರಲ್‌ ಕಾಲೇಜ್‌ (ಅಧ್ಯಕ್ಷರ ಪ್ರತಿನಿಧಿಗಳು) ಮತಗಳ ಎಣಿಕೆ ಬುಧವಾರ ನಡೆಯಲಿದ್ದು, ಜೋ ಬೈಡೆನ್‌ ಅಧ್ಯಕ್ಷರಾಗಿ ಹಾಗೂ ಕಮಲಾ ಹ್ಯಾರಿಸ್‌ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದಾಗಿ ಅಧಿಕೃತವಾಗಿ ಘೋಷಣೆ ಆಗಲಿದೆ

 ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರ ನೇತೃತ್ವದಲ್ಲಿ ಸಂಸತ್ತಿನ ಜಂಟಿ ಅಧಿವೇಶನ ನೆರವೇರಲಿದ್ದು, ಎಲೆಕ್ಟೋರಲ್‌ ಕಾಲೇಜಿನ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಎಲೆಕ್ಟೋರಲ್‌ ಕಾಲೇಜಿನ 538 ಮತಗಳ ಪೈಕಿ ಅಧ್ಯಕ್ಷರ ಆಯ್ಕೆಗೆ 270 ಮತಗಳ ಅಗತ್ಯವಿದೆ. ಆದರೆ, ಚುನಾಯಿತ ಅಧ್ಯಕ್ಷ ಜೋ ಬೈಡೆನ್‌ 306 ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 232 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಬೆಡೆನ್‌ ಆಯ್ಕೆ ಬಹುತೇಕ ಖಚಿತವಾಗಿದೆ.

ಆದರೆ, ಮತ ಎಣಿಕೆಯ ವೇಳೆ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಪ್ರತಿನಿಧಿಗಳ ಸಭೆಯ ಸದಸ್ಯರು ಹಾಗೂ ಸೆನೆಟರ್‌ಗಳು ಮತ ಎಣಿಕೆಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹೀಗಾಗಿ ಫಲಿತಾಂಶ ಘೋಷಣೆ ವಿಳಂಬ ಆಗುವ ಸಾಧ್ಯತೆ ಇದೆ.

ಮತ ಎಣಿಕೆ ಹೇಗೆ?

ಎಲೆಕ್ಟೋರಲ್‌ ಕಾಲೇಜ್‌ನ ಪ್ರತಿನಿಧಿಗಳು ಚಲಾಯಿಸಿದ ಮತಗಳನ್ನು ಜ.6ರಂದು ಎಣಿಕೆ ಮಾಡಲಾಗುತ್ತದೆ. ಅಮೆರಿಕ ಉಪಾಧ್ಯಕ್ಷರು ಮತ ಎಣಿಕೆ ಪ್ರಕ್ರಿಯೆಯನ್ನು ನೆರವೇರಿಸುತ್ತಾರೆ. ಎರಡೂ ಪಕ್ಷಗಳ ಪ್ರತಿನಿಧಿಗಳು ಚಲಾವಣೆ ಆದ ಪ್ರತಿಯೊಂದು ಮತಗಳನ್ನು ದೊಡ್ಡದಾಗಿ ಘೋಷಿಸುತ್ತಾರೆ. ಬಳಿಕದ ಅದನ್ನು ಒಂದೊಂದಾಗಿ ಲೆಕ್ಕ ಇಡಲಾಗುತ್ತದೆ. 270 ಮತಗಳನ್ನು ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ.