ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಸಟೇನಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ, ಸಂಸದರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ಕುಕುಟಾದಿಂದ ಓಕಾನಾಗೆ ತೆರಳುತ್ತಿದ್ದ ವಿಮಾನವು ಇಳಿಯುವ ಸ್ವಲ್ಪ ಸಮಯದ ಮೊದಲು ಸಂಪರ್ಕ ಕಳೆದುಕೊಂಡಿದೆ.
ನವದೆಹಲಿ (ಜ.29): ಕೊಲಂಬಿಯಾ ಮತ್ತು ವೆನೆಜುವೆಲಾ ನಡುವಿನ ಗಡಿಯ ಸಮೀಪವಿರುವ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಬುಧವಾರ ಸಟೇನಾ ಏರ್‌ಲೈನ್ಸ್ ವಾಣಿಜ್ಯ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ. ವಿಮಾನವು ಕುಕುಟಾದಿಂದ ಓಕಾನಾಗೆ ತೆರಳುತ್ತಿದ್ದಾಗ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೀಡಾದ ವಿಮಾನವು ಬೀಚ್‌ಕ್ರಾಫ್ಟ್ 1900D ಆಗಿದ್ದು, 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಸರ್ಕಾರ ಮತ್ತು ವಿಮಾನಯಾನ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರಲ್ಲಿ ಹಾಲಿ ಸಂಸತ್ ಸದಸ್ಯರು ಮತ್ತು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶಾಸಕಾಂಗ ಅಭ್ಯರ್ಥಿಯೊಬ್ಬರು ಸೇರಿದ್ದಾರೆ.
ಇದ್ದಕ್ಕಿದ್ದಂತೆ ಎಟಿಸಿ ಜೊತೆ ಸಂಪರ್ಕ ಕಡಿತ
ವಿಮಾನವು ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರದೇಶದ ಕುಕುಟಾ ನಗರದಿಂದ ಹೊರಟು ಮಧ್ಯಾಹ್ನ ಓಕಾನಾಗೆ ಆಗಮಿಸಬೇಕಿತ್ತು. ಆದರೆ, ಇಳಿಯುವ ಸ್ವಲ್ಪ ಸಮಯದ ಮೊದಲು, ವಿಮಾನವು ಇದ್ದಕ್ಕಿದ್ದಂತೆ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ದೀರ್ಘಕಾಲದ ಸಂಪರ್ಕದ ಕೊರತೆಯ ನಂತರ, ಅಧಿಕಾರಿಗಳು ತಕ್ಷಣವೇ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ನಂತರ, ವಿಮಾನದ ಅವಶೇಷಗಳು ಕಂಡುಬಂದಾಗ, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ವಿಮಾನವನ್ನು ಸಟೇನಾ ಫ್ಲೈಟ್ 8895 ಎಂದು ಕರೆಯಲಾಗುತ್ತಿತ್ತು.
ವಿಮಾನದಲ್ಲಿ ಯಾರೆಲ್ಲಾ ಇದ್ದರು?
ಕೊಲಂಬಿಯಾದ ಚೇಂಬರ್ ಆಫ್ ಡೆಪ್ಯೂಟೀಸ್ ಸದಸ್ಯ ಡಯೋಜೆನೆಸ್ ಕ್ವಿಂಟೆರೊ ಮತ್ತು ಚುನಾವಣಾ ಅಭ್ಯರ್ಥಿ ಕಾರ್ಲೋಸ್ ಸಾಲ್ಸೆಡೊ ಕೂಡ ಈ ದುರಂತ ಅಪಘಾತದಲ್ಲಿ ಸಾವನ್ನಪ್ಪಿದರು. ಇಬ್ಬರೂ ತಮ್ಮ ತಮ್ಮ ರಾಜಕೀಯ ಪಕ್ಷಗಳ ಟೀಮ್ ಜೊತೆ ಪ್ರಯಾಣಿಸುತ್ತಿದ್ದರು. ಘಟನೆಯ ಸುದ್ದಿ ರಾಜಕೀಯ ವಲಯಗಳಲ್ಲಿ ಶೋಕ ಮೂಡಿಸಿದೆ. ಸ್ಥಳೀಯ ಶಾಸಕ ವಿಲ್ಮರ್ ಕ್ಯಾರಿಲ್ಲೊ ಇದನ್ನು "ದುರಂತ ಅಪಘಾತ" ಎಂದು ಕರೆದರು ಮತ್ತು ಸಾರ್ವಜನಿಕರು ಶಾಂತವಾಗಿರಲು ಮನವಿ ಮಾಡಿದರು. ಆರಂಭಿಕ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಈಗ ಶವಗಳನ್ನು ಹೊರತೆಗೆಯುವುದು ಮತ್ತು ಗುರುತಿಸುವತ್ತ ಸಾಗಿವೆ ಎಂದು ಅವರು ಹೇಳಿದರು.
ವಿಮಾನ ಅಪಘಾತ ನಡೆದ ಸ್ಥಳವು ವೆನೆಜುವೆಲಾದ ಗಡಿಯ ಸಮೀಪವಿರುವ ದೂರದ ಮತ್ತು ಪರ್ವತ ಪ್ರದೇಶದಲ್ಲಿದೆ. ಈ ಪ್ರದೇಶವು ದಟ್ಟವಾದ ಅರಣ್ಯದಿಂದ ಆವೃತವಾಗಿದ್ದು, ಹವಾಮಾನವು ವೇಗವಾಗಿ ಬದಲಾಗುತ್ತಿರುತ್ತದೆ. ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಗಮನಾರ್ಹವಾಗಿ ಅಡ್ಡಿಯಾಗಿದೆ. ಈ ಅಂಶಗಳು ಅವಶೇಷಗಳನ್ನು ತಲುಪುವಲ್ಲಿ ವಿಳಂಬಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತದ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಸಂಬಂಧಿತ ಸಂಸ್ಥೆಗಳು ಈ ವಿಷಯದ ಬಗ್ಗೆ ತನಿಖೆ ಮುಂದುವರಿಸಿವೆ.


