ಶಿಕ್ಷಕನ ಪ್ಯಾಂಟ್‌ನೊಳಗೆ ಸೇರಿದ ಬುಸ್ ಬುಸ್ ನಾಗಪ್ಪ; ಹೊರಗೆ ತೆಗೆದಿದ್ದು ಹೇಗಂತ ನೋಡಿ
ಶಾಲೆಯಲ್ಲಿ ನಡೆದ ಡೆಮೋ ಕಾರ್ಯಕ್ರಮದಲ್ಲಿ ಶಿಕ್ಷಕನ ಪ್ಯಾಂಟಿನೊಳಗೆ ಹಾವು ಸೇರಿದೆ. ಉರಗ ತಜ್ಞರು ಶಿಕ್ಷಕನಿಗೆ ಯಾವುದೇ ಅಪಾಯವಾಗದಂತೆ ಹಾವನ್ನು ಹೊರತೆಗೆದಿದ್ದಾರೆ.
ಎಲ್ಲೇ ಕುಳಿತಿರಲಿ ಅಥವಾ ಹೋಗುತ್ತಿರಲಿ ಯಾವಾಗಲೂ ಅಲರ್ಟ್ ಆಗಿರಬೇಕು. ಕೆಲವೊಮ್ಮೆ ಸಣ್ಣ ತಪ್ಪುಗಳು ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತವೆ. ಇಂತಹುವುದೇ ಒಂದು ಘಟನೆ ನಡೆದಿದ್ದು, ಶಾಲಾ ಶಿಕ್ಷಕನ ಪ್ಯಾಂಟಿನೊಳಗೆ ಹಾವು ಸೇರಿದೆ. ಥೈಲ್ಯಾಂಡ್ ಶಾಲೆಯ ಡೆಮೋ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪ್ಯಾಂಟಿನಿಂದ ಹಾವು ಹೊರ ತೆಗೆಯುವ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಿಕ್ಷಕನ ಪ್ಯಾಂಟ್ ನಲ್ಲಿ ಹಾವು ಸೇರಿದೆ ಎಂಬ ವಿಷಯ ತಿಳಿಯುತ್ತಲೇ ಕಾರ್ಯಕ್ರಮದಲ್ಲಿದ್ದ ಜನರು ಭಯಗೊಂಡಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕನ ಪ್ಯಾಂಟ್‌ನಿಂದ ಹಾವನ್ನು ಹೇಗೆ ಹೊರಗೆ ತೆಗೆಯಲಾಗಿದೆ ಎಂಬುದನ್ನು ನೋಡಬಹುದು. ಇಬ್ಬರು ಉರಗತಜ್ಞರು ಅತ್ಯಂತ ತಾಳ್ಮೆಯಿಂದ ಶಿಕ್ಷಕನಿಗೆ ಯಾವುದೇ ಅಪಾಯವಾಗದಂತೆ ಹಾವನ್ನು ಪ್ಯಾಂಟ್‌ನಿಂದ ಹೊರಗೆ ತೆಗೆದು ರಕ್ಷಣೆ ಮಾಡಲಾಗಿದೆ. ಸ್ವಲ್ಪ ವ್ಯತ್ಯಾಸವಾದ್ರೂ ಹಾವು ಶಿಕ್ಷಕನಿಗೆ ಕಚ್ಚುವ ಸಾಧ್ಯತೆಗಳಿದ್ದವು. ಉರಗತಜ್ಞರ ಚಾಕಚಕ್ಯತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಯಕ್ರಮದಿಂದ ಹೊರ ಬಂದ ಶಿಕ್ಷಕ ಪ್ಯಾಂಟ್ ಬಿಚ್ಚಿದಾಗ ಹಾವು ಆತನ ಕಾಲಡಿಯಲ್ಲಿ ಸಿಲುಕಿದೆ. ಹಾವು ನಿಧಾನಕ್ಕೆ ಮೇಲೆ ಬಂದು ಮುಖ ಹೊರಗೆ ಹಾಕಿ ಬುಸುಗುಟ್ಟುತ್ತಿದೆ. ಹಾವು ಮೇಲೆ-ಕೆಳಗೆ ಓಡಾಡುತ್ತಿದ್ರೆ ಶಿಕ್ಷಕ ಮಾತ್ರ ಕದಲದೇ ತಟಸ್ಥವಾಗಿ ನಿಂತಿದ್ದನು. ಕೊಂಚ ಅಲುಗಾಡಿದರೂ ಹಾವು ಭಯಗೊಂಡು ಕಚ್ಚುವ ಸಾಧ್ಯತೆ ಇತ್ತು. ಆದ್ದರಿಂದ ಶಿಕ್ಷಕ ಗೊಂಬೆಯಂತೆಯೇ ನಿಂತಿದ್ದನು. ಇಬ್ಬರು ಯುವಕರು ನಿಧಾನವಾಗಿ ಹಾವನ್ನು ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಎದುರಿಸಲು ಅನುಭವಿ ಉರಗತಜ್ಞರಿಂದ ಮಾತ್ರ ಸಾಧ್ಯವಾಗುತ್ತದೆ. ಮತ್ತೊಂದೆಡೆ ಕೊಂಚವೂ ಕದಲದೇ ನಿಂತ ಶಿಕ್ಷಕನ ಧೈರ್ಯಕ್ಕೂ ನೆಟ್ಟಿಗರು ಸಲಾಂ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಥೈಲ್ಯಾಂಡ್‌ನಲ್ಲಿ ಪ್ರತಿವರ್ಷ ಸುಮಾರು 70 ಸಾವಿರಕ್ಕೂ ಅಧಿಕ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದ್ರಿಂದ ಥೈಲ್ಯಾಂಡ್ ಸರ್ಕಾರ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಹಾವಿನಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತೋರಿಸಲಾಯ್ತು. ಹಾವನ್ನು ಹೊರಗೆ ತೆಗೆಯೋದನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು
ವೈರಲ್ ಆಗಿರುವ ವಿಡಿಯೋವನ್ನು @indypersian ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 18 ಲಕ್ಷ 10 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು 43 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.