* ಹಡಗಿನಲ್ಲಿದ್ದ 2000 ಕೇಜಿ ಮೀನು, 600 ಲೀ. ಇಂಧನ ಜಪ್ತಿ* ಭಾರತದ ಕರಾವಳಿಗೆ ನುಗ್ಗಿದ್ದ ಪಾಕ್‌ ಹಡಗು, 10 ಮಂದಿ ವಶಕ್ಕೆ 

ಅಹಮದಾಬಾದ್‌(ಜ.10): ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಪಾಕಿಸ್ತಾನ ಉಗ್ರರಿಂದ ವಿಧ್ವಂಸಕ ಕೃತ್ಯದ ಸಾಧ್ಯತೆಗಳಿವೆ ಎಂಬ ಎಚ್ಚರಿಕೆಗಳ ಬೆನ್ನಲ್ಲೇ, 10 ಮಂದಿಯಿದ್ದ ಪಾಕಿಸ್ತಾನದ ಹಡಗು ಗುಜರಾತ್‌ನ ಕರಾವಳಿ ಪ್ರವೇಶ ನುಸುಳಿರುವ ಘಟನೆ ನಡೆದಿದೆ.

ಈ ವೇಳೆ ಕ್ಷಿಪ್ರ ಕಾರಾರ‍ಯಚರಣೆ ನಡೆಸಿದ ಭಾರತದ ಕರಾವಳಿ ಪಡೆ(ಐಸಿಜಿ) ಪಾಕಿಸ್ತಾನದ ಹಡಗು ಮತ್ತು ಅದರಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದಿದೆ. ಅಲ್ಲದೆ ಹಡಗಿನಲ್ಲಿದ್ದ 2000 ಕೇಜಿ ಮೀನುಗಳು ಮತ್ತು 600 ಲೀ. ಇಂಧನವನ್ನು ಜಪ್ತಿ ಮಾಡಿದ್ದಾರೆ.

ಶನಿವಾರ ಮಧ್ಯರಾತ್ರಿ 10 ಮಂದಿ ಸಿಬ್ಬಂದಿ ಹೊಂದಿದ್ದ ಯಾಸೀನ್‌ ಎಂಬ ಪಾಕಿಸ್ತಾನದ ಹಡಗು ಅರಬ್ಬೀ ಸಮುದ್ರದಲ್ಲಿ ಭಾರತದ ಕರಾವಳಿ ಪ್ರದೇಶದ 10-12 ಕಿ.ಮೀ ಒಳಗೆ ಕಂಡುಬಂದಿತ್ತು. ಈ ವೇಳೆ ಭಾರತದ ಕರಾವಳಿ ಭದ್ರತಾ ಸಿಬ್ಬಂದಿ ಹಡಗು ಕಂಡ ತಕ್ಷಣವೇ ಪಾಕಿಸ್ತಾನದ ಸಿಬ್ಬಂದಿ ಇದ್ದ ಹಡಗು ತಪ್ಪಿಸಿಕೊಳ್ಳಲು ಯತ್ನಿಸಿತ್ತು. ಈ ವೇಳೆ ಕಾರಾರ‍ಯಚರಣೆ ನಡೆಸಿ, ಹಡಗು ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಸಮುದ್ರ ಮುಖಾಂತರ ನುಸುಳುವ ಸಾಧ್ಯತೆಯಿರುವುದರಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.