Asianet Suvarna News Asianet Suvarna News

ಲಡಾಖ್‌ನಲ್ಲಿ ಮತ್ತೆ ಚೀನಾ ಕಿರಿಕ್‌, ದನಗಾಹಿಗಳಿಗೇ ತಡೆ ಒಡ್ಡಿದ ಸೇನೆ!

ಭಾರತದ ಗಡಿಯೊಳಗೆ ದೆಮ್ಚೋಕ್‌ನಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳಿಗೆ ಚೀನಾ ಸೇನೆ ತಡೆಯೊಡ್ಡುವ ಮೂಲಕ ಉದ್ಧಟತನ ಮೆರೆದಿದೆ. ಈ ಸಮಸ್ಯೆ ಬಗೆಹರಿಸಲು ಉಭಯ ದೇಶದ ಸೇನಾಧಿಕಾರಿಗಳು ಹಲವು ಸಭೆ ನಡೆಸಿದ್ದಾರೆ.

Chinese troops stop Indian graziers near LAC gow
Author
First Published Aug 30, 2022, 1:11 PM IST

ಲಡಾಖ್‌ (ಆ.30): ದನ ಮೇಯಿಸಲು ಹೋಗಿದ್ದ ಭಾರತೀಯ ದನಗಾಹಿಗಳನ್ನು ಚೀನಾ ಯೋಧರು ಅಡ್ಡಗಟ್ಟಿದ ಘಟನೆ ಲಡಾಖ್‌ನ ಡೆಮ್ಚುಕ್‌ ಪ್ರದೇಶದಲ್ಲಿ ಆ.21ರಂದು ನಡೆದಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತಕ್ಕೆ ಸೇರಿದ ವಾಸ್ತವ ಗಡಿ ನಿಯಂತ್ರಣ ರೇಖೆಯ ಪ್ರದೇಶದೊಳಗೆ ಎಂದಿನಂತೆ ಭಾರತೀಯ ದನಗಾಹಿಗಳು ತೆರಳಿದ್ದ ವೇಳೆ ಅವರನ್ನು ಅಡ್ಡಗಟ್ಟಿದ ಚೀನಾ ಯೋಧರು, ಇದು ನಮ್ಮ ದೇಶಕ್ಕೆ ಸೇರಿದ ಪ್ರದೇಶ. ಇಲ್ಲಿಗೆ ನೀವು ಬರುವಂತಿಲ್ಲ ಎಂದು ಬೆದರಿಸಿದ್ದಾರೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ಚೀನಾ ಸೇನೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಈ ಹಿಂದೆ 2019 ರಲ್ಲೂ ಇದೇ ವಿಷಯಕ್ಕೆ ಇದೇ ಪ್ರದೇಶದಲ್ಲಿ ಸಣ್ಣ ಜಗಳವೂ ನಡೆದಿತ್ತು ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ‘ಆದರೆ ಈ ವಿಚಾರವಾಗಿ ಉಭಯ ದೇಶಗಳ ಸೇನೆಯ ನಡುವೆ ಘರ್ಷಣೆ ನಡೆದಿಲ್ಲ. ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಎಲ್‌ಎಸಿಯಲ್ಲಿ ಶಾಂತಿಯನ್ನು ಕಾಪಾಡಲು ವಾಡಿಕೆಯಂತೆ ಸಭೆ ನಡೆಸಲಾಗಿದೆ’ ಎಂದು ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಘಟನೆ ನಡೆದ ಪ್ರದೇಶವು LAC ಮೇಲಿನ ಘರ್ಷಣೆ ಬಿಂದುಗಳಿಗೆ ಹತ್ತಿರದಲ್ಲಿದೆ, ಅಲ್ಲಿ 2020 ರಿಂದ ಉಭಯ ದೇಶಗಳು ಬಿಕ್ಕಟ್ಟಿನಲ್ಲಿವೆ.

ಕಳೆದ ವಾರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗಾಲ್ವಾನ್ ಕಣಿವೆಯ ನಿಲುಗಡೆ ಮತ್ತು ಗಡಿ ಒಪ್ಪಂದಗಳಿಗೆ ಬೀಜಿಂಗ್‌ನ "ಅಲಕ್ಷ್ಯ" ಕುರಿತು ಮಾತನಾಡುವಾಗ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು "ಬಹಳ ಕಠಿಣ ಹಂತ" ದಲ್ಲಿ ಸಾಗುತ್ತಿವೆ ಎಂದು ಹೇಳಿದ್ದರು. ಸಮಸ್ಯೆ ಬಗೆಹರಿದಿಲ್ಲ ಮತ್ತು ಅದು ಸ್ಪಷ್ಟವಾಗಿ ನೆರಳು ನೀಡುತ್ತಿದೆ ಎಂದು ಜೈಶಂಕರ್ ಹೇಳಿದ್ದರು. ಕಳೆದ ಜುಲೈನಲ್ಲಿ, ಕೊಂಗ್ಕಾ ಲಾ ಬಳಿಯ ಪೆಟ್ರೋಲ್ ಪಾಯಿಂಟ್ -15, ದೌಲೆಟ್ ಬೇಗ್ ಓಲ್ಡಿ ಸೆಕ್ಟರ್‌ನ ಡೆಪ್ಸಾಂಗ್ ಬಲ್ಜ್ ಮತ್ತು ಚಾರ್ಡಿಂಗ್‌ನಲ್ಲಿನ ಸಮಸ್ಯೆಗಳ ಹಿನ್ನೆಲೆಯಲ್ಲಿ ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಘರ್ಷಣೆಯ ಸ್ಥಳಗಳಲ್ಲಿ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಭಾರತ ಮತ್ತು ಚೀನಾದ ಸೇನೆಗಳು 16ನೇ ಸುತ್ತಿನ ಮಾತುಕತೆಗಳನ್ನು ನಡೆಸಿದ್ದವು. 

ಹಿಂದೂ ಮಹಾಸಾಗರದಲ್ಲೂ ಚೀನಾತಂಕ: ಜಿಬೂಟಿಯಲ್ಲಿ ಚೀನಾದ ಮೊದಲ ವಿದೇಶಿ ನೌಕಾ ನೆಲೆ ಆರಂಭ

ಗಾಲ್ವಾನ್ ಕಣಿವೆ, ಪಾಂಗೊಂಗ್ ತ್ಸೋ ಮತ್ತು ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಿಂದ ಸೈನಿಕರ ನಿರ್ಗಮನದ ಹೊರತಾಗಿಯೂ, ಎರಡೂ ದೇಶಗಳು ಕೂಡ ಸುಮಾರು 60,000 ಸೈನಿಕರನ್ನು ಹೊಂದಿದ್ದಾರೆ ಮತ್ತು ಲಡಾಖ್  ನಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಶೇಖರಿಸಿಡಲಾಗಿದೆ. ಉಭಯ ಸೇನೆಗಳು 2020 ರಲ್ಲಿ ಎಂಟು ಸುತ್ತಿನ ಮಾತುಕತೆಗಳನ್ನು ನಡೆಸಿದ್ದವು, ಆ ವರ್ಷದ ಜೂನ್‌ನಲ್ಲಿ ಮೊದಲನೆ ಮಾತುಕತೆಯಾಗಿತ್ತು, 2021 ರಲ್ಲಿ ಐದು ಸುತ್ತುಗಳು ಮತ್ತು 2022ರಲ್ಲಿ ಇಲ್ಲಿಯವರೆಗೆ ಮೂರು ಸುತ್ತಿನ ಮಾತುಕತೆಗಳನ್ನು ನಡೆಸಿವೆ. 

ಭಾರತ ಹಾಗೂ ಚೀನಾ ಗಡಿ ಸಮಸ್ಯೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೈಶಂಕರ್!

ದ್ವಿಪಕ್ಷೀಯ ಸಂಬಂಧದ ಮೇಲೆ  ತೀವ್ರ ಪರಿಣಾಮ ಬೀರಿರುವ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು 2022 ಮೇ ತಿಂಗಳಲ್ಲಿ  ಮೂರನೇ ವರ್ಷಕ್ಕೆ ಕಾಲಿಟ್ಟಿದೆ.  ಭಾರತವು ಜುಲೈ 7 ರಂದು ಎಲ್‌ಎಸಿಯಲ್ಲಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಚೀನಾವನ್ನು ಕೋರಿತ್ತು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ಸೈನ್ಯವನ್ನು ಹಿಂಪಡೆಯಲು ಚೀನಾದ ಸಹವರ್ತಿ ವಾಂಗ್ ಯಿ ಅವರನ್ನು ಒತ್ತಾಯಿಸಿದ್ದರು. ಬಾಲಿಯಲ್ಲಿ ಜಿ 20 ದೇಶಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ್ದ ವೇಳೆ ಜೈ ಶಂಕರ್‌ ಚೀನಾದ ಯಿ ಜೊತೆ ಮಾತುಕತೆ ನಡೆಸಿದ್ದು, ಭಾರತ ಚೀನಾದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಪರಸ್ಪರ ಗೌರವ, ಪರಸ್ಪರ ಸಂವೇದನೆ ಹಾಗೂ ಪರಸ್ಪರ ಹಿತಾಸಕ್ತಿಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದರು.

Follow Us:
Download App:
  • android
  • ios